ರಾಮದೇವರ ಬೆಟ್ಟದಲ್ಲಿ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ
x
ಚಿತ್ರ ಕೃಪೆ- Supriya Sahu IAS ಅವರ ಸಂಗ್ರಹದಿಂದ. ಎಕ್ಸ್​ಪೋಸ್ಟ್​​

ರಾಮದೇವರ ಬೆಟ್ಟದಲ್ಲಿ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ

ರಣಹದ್ದುಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸಂತಾನೋತ್ಪತ್ತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.


Click the Play button to hear this message in audio format

ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂರಕ್ಷಣೆ ಹಾಗೂ ಅವುಗಳ ಪರಿಸರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಮನಗರದ ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯದಲ್ಲಿ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಆಚರಿಸಲಾಯಿತು. ಅರಣ್ಯ ಇಲಾಖೆ, ಪರಿಸರ ಪ್ರೇಮಿಗಳು, ಸ್ವಯಂಸೇವಾ ಸಂಸ್ಥೆಗಳು, ವನ್ಯಜೀವಿ ತಜ್ಞರು ಹಾಗೂ ಪಕ್ಷಿ ವೀಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಣಹದ್ದುಗಳ ಸಂರಕ್ಷಣೆಯ ಅಗತ್ಯದ ಕುರಿತು ಚರ್ಚಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ರಾಮದೇವರ ಬೆಟ್ಟ ರಣಹದ್ದುಗಳ ಪ್ರಮುಖ ಸಂತಾನೋತ್ಪತ್ತಿ ಪ್ರದೇಶವಾಗಿದ್ದು, ಇಲ್ಲಿ ಉದ್ದ ಕೊಕ್ಕಿನ ರಣಹದ್ದುಗಳ ಒಂದು ಜೋಡಿ ಪ್ರತಿವರ್ಷ ಬಂದು ಸಂತಾನೋತ್ಪತ್ತಿ ನಡೆಸುತ್ತಿದೆ.

ರಣಹದ್ದುಗಳು ಸಾಮಾನ್ಯವಾಗಿ ವರ್ಷಕ್ಕೆ ಒಂದು ಮೊಟ್ಟೆಯನ್ನಷ್ಟೇ ಇಡುವುದರಿಂದ ಅವುಗಳ ಸಂತತಿ ವೇಗವಾಗಿ ಹೆಚ್ಚುವುದಿಲ್ಲ. ಆದರೂ ರಾಮದೇವರ ಬೆಟ್ಟದಲ್ಲಿ ಕಳೆದ ಐದು-ಆರು ವರ್ಷಗಳಿಂದ ನಿರಂತರವಾಗಿ ಮರಿಗಳು ಬೆಳೆದು ವಯಸ್ಕವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಇದುವರೆಗೆ ಕನಿಷ್ಠ ಐದು ಮರಿಗಳು ಇಲ್ಲಿ ಬೆಳೆದು ನಂತರ ತಮ್ಮ ವಾಸಸ್ಥಳದಿಂದ ಹೊರಟಿರುವುದನ್ನು ಅರಣ್ಯ ಇಲಾಖೆ ಗಮನಿಸಿದೆ.

ಪ್ರಸ್ತುತ ಮತ್ತೊಂದು ರಣಹದ್ದು ಜೋಡಿ ಗೂಡು ಕಟ್ಟುವ ಚಟುವಟಿಕೆ ಆರಂಭಿಸಿರುವ ಸಾಧ್ಯತೆಯಿದ್ದು, ಮುಂದಿನ 15ರಿಂದ 20 ದಿನಗಳಲ್ಲಿ ಮರಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಸಂತಾನೋತ್ಪತ್ತಿ ಅವಧಿಯಲ್ಲಿ ಈ ಜೋಡಿ ಜನವರಿ ಅಥವಾ ಫೆಬ್ರುವರಿ ವರೆಗೆ ಈ ಪ್ರದೇಶದಲ್ಲಿರುತ್ತದೆ.

ಎರಡು ಜಾತಿಯ ರಣಹದ್ದುಗಳ ವಾಸ

ರಾಮದೇವರ ಬೆಟ್ಟದಲ್ಲಿ ಪ್ರಮುಖವಾಗಿ ಎರಡು ಜಾತಿಯ ರಣಹದ್ದುಗಳು ಕಂಡುಬರುತ್ತವೆ. ಉದ್ದ ಕೊಕ್ಕಿನ ರಣಹದ್ದು ಮತ್ತು ಈಜಿಪ್ಟಿಯನ್ ರಣಹದ್ದುಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಈಜಿಪ್ಟಿಯನ್ ರಣಹದ್ದುಗಳ ಸಂಖ್ಯೆ ಪ್ರಸ್ತುತ ಸುಮಾರು ಆರುರಿಂದ ಎಂಟರಷ್ಟಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ರಣಹದ್ದುಗಳು ಪ್ರಕೃತಿಯ ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸತ್ತ ಪ್ರಾಣಿಗಳ ದೇಹವನ್ನು ಆಹಾರವಾಗಿ ಸೇವಿಸುವ ಮೂಲಕ ಪರಿಸರವನ್ನು ಸ್ವಚ್ಛವಾಗಿಡುವ ನೈಸರ್ಗಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ. ಹೀಗಾಗಿ ಅವುಗಳ ಸಂಖ್ಯೆ ಕ್ಷೀಣಿಸುವುದು ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಬನ್ನೇರುಘಟ್ಟದಲ್ಲಿ ಸಂತಾನೋತ್ಪತ್ತಿ ಕೇಂದ್ರ

ರಣಹದ್ದುಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸಂತಾನೋತ್ಪತ್ತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಮುಂದಿನ ವರ್ಷದಿಂದ ಈ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಸುಮಾರು 30 ಜೋಡಿ ಉದ್ದ ಕೊಕ್ಕಿನ ರಣಹದ್ದುಗಳನ್ನು ಸಂತಾನೋತ್ಪತ್ತಿಗಾಗಿ ಇರಿಸುವ ಯೋಜನೆಯಿದೆ.

ಈ ಕೇಂದ್ರ ಕಾರ್ಯಾರಂಭವಾದ ಬಳಿಕ ರಣಹದ್ದುಗಳ ಸಂತತಿ ಹೆಚ್ಚಿಸುವ ಸಂರಕ್ಷಣಾ ಪ್ರಯತ್ನಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂರಕ್ಷಣೆಗೆ ಜನರ ಸಹಕಾರ ಅಗತ್ಯ

ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಅಂಗವಾಗಿ ಸಾರ್ವಜನಿಕರು, ಯುವಕರು ಮತ್ತು ಪರಿಸರ ಪ್ರೇಮಿಗಳಲ್ಲಿ ರಣಹದ್ದುಗಳ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು. ರಣಹದ್ದುಗಳ ಅಳಿವನ್ನು ತಡೆಯಲು ಅರಣ್ಯ ಇಲಾಖೆ ಮಾತ್ರವಲ್ಲದೆ ಸಾರ್ವಜನಿಕರು, ಪಕ್ಷಿ ವೀಕ್ಷಕರು, ವನ್ಯಜೀವಿ ತಜ್ಞರು ಮತ್ತು ಪರಿಸರ ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು.

ರಾಮನಗರದಲ್ಲಿ ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಪಕ್ಷಿ ವೀಕ್ಷಕರು ಆಗಮಿಸುತ್ತಿರುವುದು ರಣಹದ್ದು ಸಂರಕ್ಷಣೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಗೆ ಸಾಕ್ಷಿಯಾಗಿದೆ.

Read More
Next Story