Internal Reservation|ಒಳ ಮೀಸಲು ನೀಡದಿದ್ದರೆ 150 ಕ್ಷೇತ್ರಗಳಲ್ಲಿ ಎಡಗೈ ಸಮುದಾಯದಿಂದ ಮತ ಜಾಗೃತಿ ಅಭಿಯಾನ
x

Internal Reservation|ಒಳ ಮೀಸಲು ನೀಡದಿದ್ದರೆ 150 ಕ್ಷೇತ್ರಗಳಲ್ಲಿ ಎಡಗೈ ಸಮುದಾಯದಿಂದ ಮತ ಜಾಗೃತಿ ಅಭಿಯಾನ

ಒಳ ಮೀಸಲಾತಿಗೆ ಒತ್ತಾಯಿಸಿದವರಿಗೆ ಪ್ರಕರಣ ಹೈಕೋರ್ಟ್ ನಲ್ಲಿದೆ ಎಂದು ಹೇಳಿ ಸರ್ಕಾರವೇ ಶೇ 50 ಮೀಸಲಾತಿಯನ್ನು ಪಾಲಿಸಲು ಮುಂದಾಗಿದೆ ಎಂದು ಎಡಗೈ ಸಮುದಾಯ ಆರೋಪಿಸಿದೆ.


ಒಳ‌ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗದಿದ್ದರೆ ಎಡಗೈ ಸಮುದಾಯ ನಿರ್ಣಾಯಕವಾಗಿರುವ 150 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಸೋಲಿಗೆ ಟೊಂಕಕಟ್ಟಿ ನಿಲ್ಲುತ್ತೇವೆ ಎಂದು ಸ್ವಾಭಿಮಾನಿ ಮಾದಿ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ಎಚ್ಚರಿಕೆ ನೀಡಿದರು.

ಒಳ ಮೀಸಲಾತಿ ಬಿಕ್ಕಟ್ಟು ಕುರಿತಂತೆ ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮಾ.12 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಂದೇ ಸಚಿವ ಸಂಪುಟ‌ ಸಭೆ ನಡೆಯಲಿದ್ದು, ಯಾವುದೇ ತೀರ್ಮಾನ ಕೈಗೊಳ್ಳಲಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು. ಆದಾಗ್ಯೂ, ಸರ್ಕಾರ ತಲೆಕೆಡಿಸಿಕೊಳ್ಳದಿದ್ದರೆ ರಾಜ್ಯದ 150 ಕ್ಷೇತ್ರಗಳಲ್ಲಿ ಮತಜಾಗೃತಿ ಅಭಿಯಾನ ನಡೆಸಿ, ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲಾಗುವುದು ಎಂದು ಹೇಳಿದರು.

ಆಗಸ್ಟ್ 1, 2024 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಾಗಿನಿಂದಲೂ ಒಳಮೀಸಲಾತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು, ತೊಡಕುಗಳಿಗೆ ರಾಜ್ಯ ಸರ್ಕಾರವೇ ನೇರ ಕಾರಣ. ಈ ಸಮಸ್ಯೆಗಳು ಸಂವಿಧಾನದ ತಾಂತ್ರಿಕ ಕಾರಣಗಳಿಂದ ಉದ್ಭವಿಸಿಲ್ಲ. ಬದಲಿಗೆ ಸರ್ಕಾರದ ನಿರ್ಲಕ್ಷ ಧೋರಣೆಯಿಂದ ಆರಂಭವಾಗಿವೆ ಎಂದು ಕೇಶವಮೂರ್ತಿ ಆರೋಪಿಸಿದರು.

ಶೇ 56 ಮೀಸಲಾತಿ ವಿರುದ್ಧ ಹಲವರು ಹೈಕೋರ್ಟ್ ಮೊರೆ ಹೋಗಿದ್ದ ಸಂಗತಿ ಸರ್ಕಾರಕ್ಕೆ ತಿಳಿದಿತ್ತು. ಮತ್ತೊಂದೆಡೆ ಅತಿ ಹಿಂದುಳಿದ ಅಲೆಮಾರಿ ಸಮುದಾಯಗಳು ಮೀಸಲಾತಿ ನೀಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿರುವುದು ಸಹ ಗೊತ್ತಿತ್ತು. ಇದರ‌ ನಡುವೆ ರಾಜ್ಯಪಾಲರು ಒಳ ಮೀಸಲಾತಿ‌ ಮಸೂದೆಗೆ ಅಂಕಿತ ಹಾಕುವುದಕ್ಕಿಂತ ಮುಂಚೆ ಸ್ಪಷ್ಟೀಕರಣ ಕೇಳಿದ್ದರು. ಆದರೆ, ಸರ್ಕಾರ ಮಾತ್ರ ಸ್ಪಷ್ಟೀಕರಣ ಕೊಡಲೇ ಇಲ್ಲ, ಮೌನವಾಗಿದ್ದುಕೊಂಡು ಮೊದಲ ಬಾರಿಗೆ ಕಳುಹಿಸಿದ್ದ ಸ್ಪಷ್ಟೀಕರಣವನ್ನೇ ಮತ್ತೆ ಸಾಗಹಾಕಿತ್ತು. ಆ ಮೂಲಕ ರಾಜ್ಯಪಾಲರನ್ನೂ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಸಿಲುಕಿಸಿತು ಎಂದು ದೂರಿದರು.

ನಿಯಮಗಳ ಪ್ರಕಾರ ರಾಜ್ಯಪಾಲರು ಎರಡನೇ ಬಾರಿಗೆ ಮಸೂದೆ ವಾಪಸ್ ಕಳುಹಿಸುವಂತಿಲ್ಲ, ಅನಿವಾರ್ಯವಾಗಿ ಅಂಕಿತ ಹಾಕಬೇಕಾಯಿತು. ರಾಜ್ಯಪಾಲರು ಪ್ರಸ್ತಾಪಿಸಿದ್ದ ಯಾವುದೇ ಗೊಂದಲಗಳಿಗೂ ಉತ್ತರ ಕೊಡದೆ, ಸ್ಪಷ್ಟೀಕರಣ ಕೊಡದೆ ಹಳೆಯ ಮಸೂದೆಗೆ ಅಂಕಿತ ಪಡೆದರು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವುದು ತಿಳಿಯುತ್ತಿದ್ದಂತೆ ಅದೇ ದಿನ ಸಚಿವ ಸಂಪುಟ ಸಭೆ ನಡೆಸಿ, 56, 432 ಹುದ್ದೆಗಳನ್ನು ಶೇ50 ರ ಮೀಸಲಾತಿಯಡಿ ನೇಮಕಾತಿ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

ಸುಖಾಸುಮ್ಮನೆ ಹೈಕೋರ್ಟ್ ನತ್ತ ಬೊಟ್ಟು

ಒಳ ಮೀಸಲಾತಿಗೆ ಒತ್ತಾಯಿಸಿದವರಿಗೆ ಪ್ರಕರಣ ಹೈಕೋರ್ಟ್ ನಲ್ಲಿದೆ ಎಂದು ಹೇಳಿ ಸರ್ಕಾರವೇ ಶೇ 50 ಮೀಸಲಾತಿಯನ್ನು ಪಾಲಿಸಲು ಮುಂದಾಗಿದೆ. ಈಗಾಗಲೇ ಒಬಿಸಿಗಳಿಗೆ ಒಳ ಮೀಸಲಾತಿ ವರ್ಗೀಕರಣ ಸಿಗುತ್ತಿದೆ. ಹೀಗಿರುವಾಗ ಪರಿಶಿಷ್ಟರಿಗೆ ಯಾಕೆ ಕೊಡಲು ಆಗುವುದಿಲ್ಲ ಎಂದು ಕೇಶವಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿಗೆ ಸುಪ್ರೀಂಕೋರ್ಟ್ ನಿಂದಲೂ ಯಾವುದೇ ಅಡಚಣೆ ಇಲ್ಲ, ತದನಂತರ ಸದಾಶಿವ ಆಯೋಗ 6:5:3:1 ರನ್ವಯ ಮೀಸಲಾತಿ ನೀಡಿದೆ. ಇದರ ಪರಿಷ್ಕರಣೆಗೆ ನೇಮಿಸಿದ್ದ ನ್ಯಾ.ನಾಗಮೋಹನ್ ದಾಸ್ ಅವರ ವರದಿಗೂ, ಮಾಧುಸ್ವಾಮಿ ಅವರ ವರದಿಗೂ ಸರ್ಕಾರ ಬೆಲೆ ಕೊಟ್ಟಿಲ್ಲ. ಬದಲಿಗೆ ಸರ್ಕಾರವೇ ತಮ್ಮದೇ ಆದ ಜಾತಿವಾದದ ಆಧಾರದ ಮೇಲೆ ಮೂರು ಗುಂಪುಗಳನ್ನು ಮಾಡಿತು. ಎಲ್ಲಾ ಸ್ಪೃಶ್ಯ ಜಾತಿಗಳನ್ನು ತೆಗೆದುಕೊಂಡು ಹೋಗಿ ಬೇರೆ ಕಡೆಗೆ ಹಾಕಿ ಗೊಂದಲ ಸೃಷ್ಟಿಸಿದೆ ಎಂದು ಕಿಡಿಕಾರಿದರು.

ಗೊಂದಲ ಸೃಷ್ಟಿಸಿದವರೇ ಈಗ ಕಾನೂನು ಬಿಕ್ಕಟ್ಟಿನ ಸಮಸ್ಯೆ ಹೇಳುತ್ತಿದ್ದಾರೆ. ಹೈಕೋರ್ಟ್ ಹಾಗೆ ಹೇಳಿದೆ, ಹೀಗೆ ಹೇಳಿದೆ ಎಂದು ಶೇ 50 ರ ಮೀಸಲಾತಿಯಲ್ಲಿ ನೇಮಕಾತಿಗೆ ಮುಂದಾಗಿದೆ. ಒಳ ಮೀಸಲಾತಿ ಕೊಡಲು ಸಾಕಷ್ಟು ಅವಕಾಶಗಳಿದ್ದರೂ ಯಾಕೆ ಕೊಡುತ್ತಿಲ್ಲ ಎಂದು ನಾವು ಪ್ರಶ್ನಿಸುತ್ತಿದ್ದೇವೆ ಎಂದರು.

ಯಾವುದೇ ತಡೆಯಾಜ್ಞೆ ಇಲ್ಲ

ಒಳ ಮೀಸಲಾತಿಗೆ ಯಾವುದೇ ತಡೆ ಇಲ್ಲ, ಹೈಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ನೀವು ಶೇ 50 ರಲ್ಲಿ ನೇಮಕಾತಿ ನಡೆಸುವುದಾದರೆ ಒಳ ಮೀಸಲಾತಿಗೆ ತೊಂದರೆ ಇಲ್ಲ, ಧಾರಾಳವಾಗಿ ಮಾಡ್ಕೋಬಹುದು. ಆದರೆ, ಶೇ 50 ದಾಟಬಾರದು ಎಂದು ಹೇಳಿದೆ. ಒಳ ಮೀಸಲಾತಿ ಬಗ್ಗೆ ಹೈಕೋರ್ಟ್ ಮಾತಾಡಿಲ್ಲ, ಶೇ 56 ರಲ್ಲಿ ಮಾಡಬೇಕಾದರೆ ಅದಕ್ಕೆ ಬೇರೆ ರೀತಿಯ ಸ್ಪಷ್ಟೀಕರಣ ಕೊಡಬೇಕಾಗುತ್ತೆ ಎಂದು ಹೇಳಿದೆ. ಒಳ ಮೀಸಲಾತಿಗೆ ತೊಡಕಾಗುವ ರೀತಿಯ ಎಲ್ಲಿಯೂ ಹೈಕೋರ್ಟ್ ಮಾತಾಡಿಲ್ಲ. ಜತೆಗೆ ತಡೆಯನ್ನೂ ಕೊಟ್ಟಿಲ್ಲ ಎಂದು ಕೇಶವಮೂರ್ತಿ ಹೇಳಿದರು.

ಸರ್ಕಾರದಿಂದಲೇ ಸುಳ್ಳು ಪ್ರಚಾರ

ಒಳ ಮೀಸಲಾತಿ ಕೊಡಲು ಇಷ್ಟವಿಲ್ಲದ ಸರ್ಕಾರವು ಸುಳ್ಳನ್ನು ಹಬ್ಬಿಸುತ್ತಿದೆ. ತಾಂತ್ರಿಕ ದೋಷದ ನೆಪ ಹೇಳಿ ಮೌಡ್ಯ ಬಿತ್ತುತ್ತಿದೆ. ಪ್ರತಿಯೊಂದಕ್ಕೂ ಹೈಕೋರ್ಟ್ ಕಡೆ ತೋರಿಸುತ್ತಿದೆ. ಈಗ ಎಲ್ಲವೂ ಸರಿಯಾಗಿರಬೇಕಾದರೆ ಏಕೆ ಒಳ ಮೀಸಲಾತಿ ಜಾರಿ ಮಾಡುತ್ತಿಲ್ಲ, ಕಾರಣವೇನು, ವಿರೋಧ ಇದೆಯೋ ಅಥವಾ ಇಚ್ಛಾಶಕ್ತಿ ಇಲ್ಲವೋ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರೋಸ್ಟರ್ ನಲ್ಲಿ ಗ್ರೂಪ್ ಎ ಗೆ ಬರುವ ಮಾದಿಗರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಒಳ ಮೀಸಲಾತಿ ವರ್ಗೀಕರಣ ಸಿಕ್ಕರೆ ಬಲಗೈ ಸಮುದಾಯಗಳಿಗೆ ಅವಕಾಶ ಸಿಗುವುದಿಲ್ಲ. ಹೇಗಾದರೂ ಮಾಡಿ ಒಳ ಮೀಸಲಾತಿ ತಡೆಯವ ಹುನ್ನಾರ ನಡೆಯುತ್ತಿದೆ. ಮೀಸಲಾತಿ ವರ್ಗೀಕರಣ ದಿಕ್ಕರಿಸಿ 56,432 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 48 ಗಂಟೆಗಳಲ್ಲಿ ಅದಕ್ಕೆ ಅಧಿಸೂಚನೆ ತರಲಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಇದು ಪೂರ್ವ ನಿಯೋಜಿತ ಎಂಬುದು ಸಾಬೀತಾಗುತ್ತದೆ ಎಂದು ಟೀಕಿಸಿದರು.

ಉಪಚುನಾವಣೆ ಎದುರಾದರೆ ನೀತಿ ಸಂಹಿತೆ ಬರಲಿದೆ. ಅದಾದ ಬಳಿಕ ವಿಧಾನ ಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಹೀಗೆ ಮತ್ತೊಂದು ವರ್ಷ ಮುಂದೂಡಿದರೆ ವಿಧಾನಸಭೆ ಚುನಾವಣೆ ಬರಲಿದೆ. ಆಗ ಇದೇ ವಿಷಯವನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಳ್ಳಬಹುದು ಎಂಬುದು ಸರ್ಕಾರದ ಉದ್ದೇಶ ಎಂದು ಟೀಕಿಸಿದರು.

ಬೃಹತ್ ಪ್ರತಿಭಟನೆಗೆ ಸಜ್ಜು

ಈ ತಿಂಗಳು 12 ರಂದು ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ಇರಲಿದೆ. ಅಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಆಗದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರ ವೋಟ್ ಬ್ಯಾಂಕಿಗಾಗಿ ಸುಪ್ರೀಂಕೋರ್ಟ್ ಆದೇಶ, ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿದೆ.

ಕಾಂಗ್ರೆಸ್ ಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದಲೇ ನಾವೂ ಕೂಡ ವೋಟ್ ಬ್ಯಾಂಕ್ ಮೂಲಕವೇ ಈ ಆಡಳಿತ ಪಕ್ಷಕ್ಕೆ ಉತ್ತರ ಕೊಡಬೇಕು ಎಂದು ತೀರ್ಮಾನಿಸಿದ್ದೇವೆ.

ಒಳ ಮೀಸಲಾತಿಗಾಗಿ ಈಗಾಗಲೇ ಸಮುದಾಯದ ಸಚಿವರು ಈಗಾಗಲೇ ಧ್ವನಿ ಎತ್ತಿದ್ದಾರೆ. ರಾಜಕೀಯ ಪ್ರಾಬಲ್ಯತೆ ಮತ್ತು ಮಲತಾಯಿ ಧೋರಣೆ ಹೆಚ್ಚಾಗಿದೆ. ಮೊನ್ನೆ ಮಾದಿಗ ಸಮುದಾಯದ ಸಚಿವರನ್ನು ಮುಖ್ಯಮಂತ್ರಿಗಳು ಅಗೌರವದಿಂದ ಕಂಡಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಸಮುದಾಯದಲ್ಲಿ ಆಕ್ರೋಶ ತುಂಬಿದೆ. ಒಂದು ಸಮುದಾಯಕ್ಕೆ ಗೌರವ ಇಲ್ಲದಂತೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುತ್ತಿದೆ‌ ಎಂದು ಕಿಡಿಕಾರಿದರು.

150 ಕ್ಷೇತ್ರಗಳಲ್ಲಿ ಸೋಲಿಸುತ್ತೇವೆ

ಸುಮಾರು 150 ಕ್ಷೇತ್ರಗಳಲ್ಲಿ ಮಾದಿಗ‌ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ನಾವು 150 ಕ್ಷೇತ್ರಗಳನ್ನು ನಾವು ಗುರಿಯಾಗಿಸಿಕೊಂಡು, ಪ್ರಚಾರ‌ ಮಾಡುತ್ತೇವೆ. ಒಳ ಮೀಸಲಾತಿ ಪರ ನಿಲ್ಲದ ಶಾಸಕರನ್ನು ಸೋಲಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

ಮೀಸಲಾತಿ ನೀಡದಿದ್ದರೆ ಸಮುದಾಯದ ಸಚಿವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದು ಬೇಡ.

ಸರ್ಕಾರವನ್ನೇ ಬೇಕಾದರೆ ವಾಪಸ್ ಕಳಿಸುವಂತಹ ಕೆಲಸ ಮಾಡುತ್ತೇವೆ. ಸಚಿವರು ಸದನದೊಳಗೆ ಮಾತನಾಡಿದರೆ ಸಾಕು, ನಾವು ಹೊರಗೆ ಹೋರಾಟ ತೀವ್ರಗೊಳಿಸುತ್ತೇವೆ. ಸರ್ಕಾರ ಪ್ರತಿಭಟನೆಗೆ ಬಗ್ಗಲಿಲ್ಲ ಎಂದರೆ 150 ಕ್ಷೇತ್ರಗಳಲ್ಲಿ ಮತ ಜಾಗೃತಿ ಅಭಿಯಾನ ಮಾಡಿ, ಮುಂದಿನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇವೆ.

ಒಳ ಮೀಸಲಾತಿಯಲ್ಲಿ ಇಷ್ಟೆಲ್ಲಾ ಸಮಸ್ಯೆ ಎದುರಾಗಲೂ ಕಾರಣ ನಮ್ಮ ರಾಷ್ಟ್ರೀಯ ನಾಯಕರು.

ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ನಾಯಕರಾಗಿ ಸಮುದಾಯದ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಕೊಡು ನಿಟ್ಟಿನಲ್ಲಿ ನಡೆದುಕೊಳ್ಳಬೇಕಾಗಿತ್ತು. ಆದರೆ ಅವರು ಒಂದೇ ಸಮುದಾಯಕ್ಕೆ ಸೀಮಿತವಾಗಿ ತಮ್ಮ ಅಭಿಮತ‌ ವ್ಯಕ್ತಪಡಿಸುತ್ತಿದ್ದಾರೆ.

ಸಚಿವರಾದ ಎಚ್.ಸಿ. ಮಹಾದೇವಪ್ಪ ಹಾಗೂ ಪರಮೇಶ್ವರ್ ಅವರು ಒಂದು ಸಮುದಾಯಕ್ಕೆ ಸೀಮಿತವಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕಮಿಷನರ್ ಅವರಿಂದ ಹಿಡಿದು ಕಾರ್ಯದರ್ಶಿವರೆಗೂ, ಸಲಹೆಗಾರರಿಂದ ಹಿಡಿದು ಎಲ್ಲ ಹುದ್ದೆಗಳಿಗೂ ಅವರದ್ದೇ ಸಮುದಾಯಕ್ಕೆ ಸೇರಿದವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಜಾತಿವಾದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ‌ಎಂದು ಆರೋಪಿಸಿದರು.

ನಾವು ಮಹದೇವಪ್ಪ ಅವರನ್ನು ಕೇಳೋದು ಇಷ್ಟೇ, ನೀವು ಅಂಬೇಡ್ಕರವಾದಿಗಳು, ಬೌದ್ಧವಾದಿಗಳು. ದಯವಿಟ್ಟು ನೀವು ನ್ಯಾಷನಲ್ ಲೀಡರ್ಸ್ ಆಗಬೇಕು. ಪರಮೇಶ್ವರ ಅವರು ಮುಖ್ಯಮಂತ್ರಿ ಆಗಬೇಕು. ನೀವು ಅಸ್ಪೃಶ್ಯ ಸಮುದಾಯಗಳ ಪರವಾಗಿ ನಿಲ್ಲಬೇಕು, ಅಲೆಮಾರಿಗಳ ಪರವಾಗಿ ನಿಲ್ಲಬೇಕು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನಾಯಕರಾಗಿ ಬೆಳೆಯಬೇಕೇ ವಿನಾ ಒಂದು ಜಾತಿಗೆ ಮಾತ್ರ ಸೀಮಿತ ಅಗಬಾರದು. ಹಾಗಾದರೆ, ಮುಂದಾಗುವ ಎಲ್ಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.

Read More
Next Story