LGG Crisis| ಇರಾನ್-ಇಸ್ರೇಲ್ ಸಂಘರ್ಷದ ಬಿಸಿ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಸೇವೆ ಅಸ್ತವ್ಯಸ್ತ!
x
ಇಂದಿರಾ ಕ್ಯಾಂಟೀನ್‌

LGG Crisis| ಇರಾನ್-ಇಸ್ರೇಲ್ ಸಂಘರ್ಷದ ಬಿಸಿ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಸೇವೆ ಅಸ್ತವ್ಯಸ್ತ!

ಬೆಂಗಳೂರಿನಲ್ಲಿ ಒಟ್ಟು 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಿದ್ದು, ಅನಿಲ ಪೂರೈಕೆ ಸಮಸ್ಯೆ ಮುಂದುವರಿದರೆ ಒಂದೆರಡು ದಿನಗಳಲ್ಲಿ ಬಹುತೇಕ ಎಲ್ಲಾ ಕ್ಯಾಂಟೀನ್‌ಗಳು ಬಾಗಿಲು ಮುಚ್ಚುವ ಆತಂಕ ಎದುರಿಸುತ್ತಿವೆ.


ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳು ಒಂದೊಂದಾಗಿಯೇ ಸೇವೆ ಸ್ಥಗಿತಗೊಳಿಸುತ್ತಿವೆ.

ಬೆಂಗಳೂರಿನ ಸುಮಾರು 16 ಕೇಂದ್ರೀಕೃತ ಅಡುಗೆ ಮನೆಗಳಲ್ಲಿ (Centralized Kitchens) ಗ್ಯಾಸ್ ಪೂರೈಕೆಯಿಲ್ಲದೆ ತಾತ್ಕಾಲಿಕವಾಗಿ ಅಡುಗೆ ತಯಾರಿಯನ್ನು ನಿಲ್ಲಿಸಲಾಗಿದೆ. ಮಲ್ಲೇಶ್ವರಂನಲ್ಲಿರುವ ಕೇಂದ್ರೀಕೃತ ಅಡುಗೆ ಮನೆಯಿಂದ ಬೆಂಗಳೂರಿನ ಸುಮಾರು 33 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಾಗುತ್ತಿತ್ತು. ಆದರೆ, ಗ್ಯಾಸ್ ಕೊರತೆಯಿಂದ ಅಡುಗೆ ತಯಾರಿಸಲು ಸಾಧ್ಯವಾಗದೆ ಮಧ್ಯಾಹ್ನ ಮತ್ತು ಸಂಜೆ ಊಟದ ವಿತರಣೆ ಸ್ಥಗಿತಗೊಂಡಿದೆ. ನಗರದ ವಿವಿಧೆಡೆ ಸುಮಾರು 23 ಮೊಬೈಲ್ ಕ್ಯಾಂಟೀನ್‌ಗಳು ಹಾಗೂ 6 ಇಂದಿರಾ ಕ್ಯಾಂಟೀನ್‌ಗಳ ಸೇವೆ ಸಂಪೂರ್ಣವಾಗಿ ನಿಂತುಹೋಗಿದೆ. ಬೆಂಗಳೂರಿನಲ್ಲಿ ಒಟ್ಟು 175ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳಿದ್ದು, ಅನಿಲ ಪೂರೈಕೆ ಸಮಸ್ಯೆ ಹೀಗೆಯೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಬಹುತೇಕ ಎಲ್ಲಾ ಕ್ಯಾಂಟೀನ್‌ಗಳು ಬಾಗಿಲು ಮುಚ್ಚುವ ಆತಂಕ ಎದುರಿಸುತ್ತಿವೆ.

ಬಡ ಕಾರ್ಮಿಕರಿಗೆ ತೊಂದರೆ

ಪ್ರತಿದಿನ ಸಾವಿರಾರು ದಿನಗೂಲಿ ಕಾರ್ಮಿಕರು, ಆಟೋ ಚಾಲಕರು ಮತ್ತು ವಿದ್ಯಾರ್ಥಿಗಳು ಕೇವಲ 5 ರಿಂದ 10 ರೂಪಾಯಿ ದರದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಸೇವಿಸುತ್ತಿದ್ದರು. ಆದರೆ ಅನಿಲ ಕೊರತೆಯಿಂದ ಕೆಲವು ಕಡೆ ಕೇವಲ ಮೊಸರನ್ನ ಮಾತ್ರ ವಿತರಿಸಲಾಗುತ್ತಿದ್ದರೆ, ಇನ್ನೂ ಕೆಲವು ಕಡೆ ಸಂಪೂರ್ಣ ಸೇವೆ ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು, ಬಿಬಿಎಂಪಿ ಅಧಿಕಾರಿಗಳ ಮೂಲಕ ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ತುರ್ತಾಗಿ ಗ್ಯಾಸ್ ಪೂರೈಸುವ ಭರವಸೆ ಸಿಕ್ಕಿದೆ. ಈಗಾಗಲೇ ಕೆಲವು ಪ್ರಮುಖ ಕ್ಯಾಂಟೀನ್‌ಗಳಿಗೆ ಸಿಲಿಂಡರ್ ಪೂರೈಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರಗಿ ಮತ್ತು ಹಾವೇರಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿಯೂ ಇಂತಹುದೇ ಸಮಸ್ಯೆ ಕಾಣಿಸಿಕೊಂಡಿದ್ದು, ಅಡುಗೆ ತಯಾರಿಸಲು ಸಿಬ್ಬಂದಿ ಸೌದೆ ಒಲೆಯನ್ನು ಅವಲಂಬಿಸಿದ್ದಾರೆ.

ಇತರ ಜಿಲ್ಲೆಗಳಲ್ಲಿನ ಪರಿಸ್ಥಿತಿ

ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯವು ಕೇವಲ ರಾಜಧಾನಿಗೆ ಮಾತ್ರ ಸೀಮಿತವಾಗಿಲ್ಲ, ಇತರ ಜಿಲ್ಲೆಗಳಲ್ಲಿಯೂ ಗಂಭೀರ ಪರಿಣಾಮ ಬೀರಿದೆ. ಕಲಬುರಗಿಯಲ್ಲಿ ಹಲವು ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿವೆ. ಹಾವೇರಿಯಲ್ಲಿ ಎಲ್‌ಪಿಜಿ (LPG) ಅಭಾವದಿಂದ ಕಡಿಮೆ ಪ್ರಮಾಣದ ಊಟ ವಿತರಿಸಲಾಗುತ್ತಿದ್ದರೆ, ಶಿವಮೊಗ್ಗದಲ್ಲಿ ಆರು ಕ್ಯಾಂಟೀನ್‌ಗಳು ಕಾರ್ಯಚಟುವಟಿಕೆ ನಿಲ್ಲಿಸಿವೆ. ಮೈಸೂರು ಹಾಗೂ ತುಮಕೂರಿನ ಕೆಲವು ಭಾಗಗಳಲ್ಲಿಯೂ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಸಮಸ್ಯೆಯಾಗದಂತೆ ಸಿಲಿಂಡರ್ ಪೂರೈಕೆಗೆ ಕ್ರಮ

"ಆಸ್ಪತ್ರೆಗಳು ಸೇರಿದಂತೆ ಅತ್ಯಾವಶ್ಯಕ ಸೇವೆಗಳಿಗೆ ಹಾಗೂ ಹೋಟೆಲ್ ಮತ್ತು ವಾಣಿಜ್ಯ ಉದ್ದೇಶದ ಬಳಕೆದಾರರಿಗೆ ಯಾವುದೇ ರೀತಿಯ ಸರಬರಾಜು ಸಮಸ್ಯೆ ಇಲ್ಲ. ಅವರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಒದಗಿಸಲಾಗುತ್ತಿದೆ" ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. ಸೋಮವಾರ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, "ನಗರ ಪ್ರದೇಶಗಳಲ್ಲಿ 25-30 ದಿನಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಒಂದು ಸಿಲಿಂಡರ್ ಬಳಕೆಯಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಪೂರೈಕೆ ನಡೆಯುತ್ತಿದೆ" ಎಂದರು.

"ಜನರು ಆತಂಕಕ್ಕೊಳಗಾಗಬಾರದು, ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು ಹಾಗೂ ಸಂಗ್ರಹಿಸಿಟ್ಟುಕೊಳ್ಳಬಾರದು. ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದರೂ ತಕ್ಷಣವೇ ಸಂಬಂಧಪಟ್ಟ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದು ಅವರು ಭರವಸೆ ನೀಡಿದರು.

Read More
Next Story