Census-2027| ಏ.1 ರಿಂದ ಡಿಜಿಟಲ್‌ ಜನಗಣತಿ; ಸ್ವಯಂ ಗಣತಿ ಹೇಗೆ, ಎತ್ತ?
x
ಎಐ ಚಿತ್ರ

Census-2027| ಏ.1 ರಿಂದ ಡಿಜಿಟಲ್‌ ಜನಗಣತಿ; ಸ್ವಯಂ ಗಣತಿ ಹೇಗೆ, ಎತ್ತ?

ಜನಗಣತಿಯಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಟುಂಬಗಳು ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ ಬಳಸುತ್ತಿವೆಯೇ ಎಂಬ ಬಗ್ಗೆ ವಿಶೇಷವಾಗಿ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.


Click the Play button to hear this message in audio format

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಯಲಿರುವ 2027ರ ಜನಗಣತಿ ಪ್ರಕ್ರಿಯೆಗೆ ಏಪ್ರಿಲ್ 1ರಿಂದ ಚಾಲನೆ ದೊರೆಯಲಿದೆ. ಕರ್ನಾಟಕದಲ್ಲೂ ಜನಗಣತಿಯ ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಣತಿ ಕಾರ್ಯ ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಸಾರ್ವಜನಿಕರೇ ತಮ್ಮ ವಿವರ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ.

ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಒಟ್ಟು 15 ದಿನಗಳ ಕಾಲ ಸಾರ್ವಜನಿಕರು ತಮ್ಮ ವಿವರಗಳನ್ನು ಆನ್‌ಲೈನ್‌ ಮೂಲಕ ದಾಖಲಿಸಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರತ್ಯೇಕವಾದ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಜನಗಣತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು se.census.gov.in ವೆಬ್‌ಸೈಟ್‌ ಮೂಲಕ ವಿವರ ಸಲ್ಲಿಸಬಹುದು. ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಸೂಚಿಸಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ನಡೆಯುತ್ತಿರುವ ಕಾಗದ ರಹಿತ ಗಣತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಸ್ವಯಂ ಗಣತಿ ಮಾಡುವುದು ಹೇಗೆ?

ಜನಗಣತಿಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸರಳ. ಮನೆಯ ಒಬ್ಬ ಸದಸ್ಯ ಅಥವಾ ಮುಖ್ಯಸ್ಥರು ಇಡೀ ಕುಟುಂಬದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬಹುದು. ಪ್ರತಿ ಕುಟುಂಬದ ಮಾಹಿತಿ ದಾಖಲಿಸಲು ಸುಮಾರು 15 ರಿಂದ 20 ನಿಮಿಷ ಅಗತ್ಯವಾಗಬಹುದು. ಮಾಹಿತಿ ಸಲ್ಲಿಸಿದ ಬಳಿಕ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ವಿಶಿಷ್ಟ ಸ್ವಯಂ ಗಣತಿಯ ಐಡಿ (ID) ಬರಲಿದೆ.

ಎರಡನೇ ಹಂತದಲ್ಲಿ ಮನೆ ಮನೆಗೆ ಬರುವ ಗಣತಿದಾರರು ಕುಟುಂಬದ ಸದಸ್ಯರಿಗೆ ನೀಡಿರುವ ಐಡಿ ಪರಿಶೀಲಿಸಿದ ನಂತರ ಮಾಹಿತಿ ದೃಢೀಕರಿಸಲಿದ್ದಾರೆ. ಸ್ವಯಂ ಗಣತಿ ಮಾಡುವುದರಿಂದ ಗಣತಿದಾರರು ಮನೆಗೆ ಬಂದಾಗ ದೀರ್ಘಕಾಲ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ತ್ವರಿತವಾಗಿ ಗಣತಿ ಮುಗಿಸಬಹುದು ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ. ಡಿಜಿಟಲ್ ಕ್ರಾಂತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾದ ನಿಖರ ಅಂಕಿಅಂಶ ನೀಡಲು ಸಹಕರಿಸಬೇಕು ಎಂದು ರಾಜ್ಯ ಸರ್ಕಾರವೂ ಮನವಿ ಮಾಡಿದೆ.

33 ಪ್ರಶ್ನೆಗಳ ಪಟ್ಟಿ ಬಿಡುಗಡೆ

ಜನಗಣತಿ ಪ್ರಕ್ರಿಯೆಯ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ಗಣತಿದಾರರಿಗೆ ಮನೆಪಟ್ಟಿ ಮತ್ತು ವಸತಿಯ ವಿವರ ನೀಡಲಿದೆ. ಅದಕ್ಕೂ ಮುನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ದಾಖಲಿಸಲು 33 ಪ್ರಮುಖ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಶ್ನೆಗಳು ಕಟ್ಟಡ ಸಂಖ್ಯೆ, ಮನೆ ಸಂಖ್ಯೆ, ಮನೆಯ ನೆಲ ಮತ್ತು ಛಾವಣಿಗೆ ಬಳಸಿದ ವಸ್ತುಗಳ ವಿವರ, ಕುಡಿಯುವ ನೀರಿನ ಮೂಲ, ಲಭ್ಯತೆ, ವಿದ್ಯುತ್ ಮೂಲ ಹಾಗೂ ಶೌಚಾಲಯದ ಸೌಲಭ್ಯದ ಕುರಿತು ಇರಲಿವೆ. ಇದಲ್ಲದೇ ಕುಟುಂಬದ ಸದಸ್ಯರ ಸಂಖ್ಯೆ, ಯಜಮಾನನ ಹೆಸರು, ಲಿಂಗ ಮತ್ತು ಎಸ್‌ಸಿ/ಎಸ್‌ಟಿ ಅಥವಾ ಇತರ ವರ್ಗಕ್ಕೆ ಸೇರಿದ ಮಾಹಿತಿ, ಮನೆ ಮಾಲೀಕತ್ವ, ಲಭ್ಯವಿರುವ ಕೊಠಡಿಗಳು, ದ್ವಿಚಕ್ರ ವಾಹನ, ಕಾರು, ಜೀಪ್, ವ್ಯಾನ್ ಇದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳೂ ಇರಲಿವೆ.

ಇಂಟರ್ನೆಟ್ ಸೌಲಭ್ಯ, ಲ್ಯಾಪ್‌ಟಾಪ್‌, ಕಂಪ್ಯೂಟರ್, ಟೆಲಿಫೋನ್/ಸ್ಮಾರ್ಟ್‌ಫೋನ್‌ ವಿವರಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರಲಿವೆ. ಜತೆಗೆ ಅಡುಗೆ ಅನಿಲ ಸಂಪರ್ಕ, ಬಳಸುವ ಮುಖ್ಯ ಧಾನ್ಯ ಮತ್ತು ಜನಗಣತಿ ಸಂಬಂಧಿತ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಒದಗಿಸಬೇಕಿದೆ.

ಸ್ಮಾರ್ಟ್‌ಫೋನ್‌ ಬಳಕೆಗಾರರಿಗೆ ಸುಲಭ

ಜನಗಣತಿಯಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಟುಂಬಗಳು ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ ಬಳಸುತ್ತಿವೆಯೇ ಎಂಬ ಬಗ್ಗೆ ವಿಶೇಷವಾಗಿ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಇದು ಸರ್ಕಾರದ ಡಿಜಿಟಲ್ ಸೇವೆಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗಲಿದೆ.

2011ರ ಜನಗಣತಿ ಹೇಗಿತ್ತು?

2011ರಲ್ಲಿ ಕೈಗೊಂಡಿದ್ದ ಜನಗಣತಿಯಲ್ಲಿ 25 ಕೋಟಿ ಕುಟುಂಬಗಳನ್ನು ಕೇಂದ್ರ ಸರ್ಕಾರ ಗಣತಿಗೆ ಒಳಪಡಿಸಿತ್ತು. ಅಂದು 121 ಕೋಟಿ ಜನರನ್ನು ಗಣತಿ ಮಾಡಲಾಗಿತ್ತು. ಗಣತಿ ಶೀಟ್‌ಗಳನ್ನು ಸ್ಕ್ಯಾನಿಂಗ್‌ ಮಾಡುವ ಮೂಲಕ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿತ್ತು. ದತ್ತಾಂಶ ಡಿಜಿಟಲೀಕರಣಕ್ಕೆ 2 ರಿಂದ 8 ವರ್ಷ ಸಮಯ ತಗುಲಿತ್ತು. 27 ಲಕ್ಷ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. 2021ರಲ್ಲಿ ಜನಗಣತಿ ನಡೆಸಲು ನಿರ್ಧರಿಸಿದಾಗ 29.9 ಲಕ್ಷ ಗಣತಿದಾರರನ್ನು ನಿಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಜನಗಣತಿ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಗಣತಿದಾರರನ್ನು ಬಳಸಿರಲಿಲ್ಲ.

Read More
Next Story