ಕಲ್ಲುತೂರಾಟ: ಆರೋಪಿಗಳಿಗೆ ಕಾನೂನಿನ ಮೂಲಕ ತಕ್ಕ ಶಿಕ್ಷೆ ನಿಶ್ಚಿತ: ಸಿದ್ದರಾಮಯ್ಯ
x

ಕಲ್ಲುತೂರಾಟ: ಆರೋಪಿಗಳಿಗೆ ಕಾನೂನಿನ ಮೂಲಕ ತಕ್ಕ ಶಿಕ್ಷೆ ನಿಶ್ಚಿತ: ಸಿದ್ದರಾಮಯ್ಯ

ಪ್ರಕರಣದ ಸಂಬಂಧ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ತಪ್ಪಿದ್ದಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.


Click the Play button to hear this message in audio format

ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯನ್ನು ತಾವು ಮತ್ತು ರಾಜ್ಯ ಸರ್ಕಾರ ಬಲವಾಗಿ ಖಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಘಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬ ಆರೋಪಿಗೂ ಕಾನೂನಿನ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಮಾರಕ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ದುಷ್ಕೃತ್ಯ ಎಸಗಿದ ಪುಂಡರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಲವು ಆರೋಪಿಗಳ ಬಂಧನ

ಪ್ರಕರಣದ ಸಂಬಂಧ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ತಪ್ಪಿದ್ದಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

ಸಾರ್ವಜನಿಕರಿಗೆ ಸಂಯಮದ ಕರೆ

ನಾಡಿನ ಜನರಿಗೆ ಭಯಮುಕ್ತ ಮತ್ತು ನೆಮ್ಮದಿಯ ಬದುಕು ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನರ ಶಾಂತಿ-ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ ಅಥವಾ ಶಕ್ತಿಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಏನಿದು ಘಟನೆ?

ಜಿಲ್ಲಾ ಕೇಂದ್ರದ ಕಿಲ್ಲಾ ಓಣಿಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದ ಘಟನೆ ಸಂಭವಿಸಿದೆ. ಇದರಿಂದ ನಗರದಾದ್ಯಂತ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿದೆ.

ಮೆರವಣಿಗೆಯು ಕಿಲ್ಲಾ ಓಣಿಯ ಮಸೀದಿ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ಹಠಾತ್ತನೆ ಕಲ್ಲು ತೂರಾಟ ಆರಂಭವಾಗಿದೆ. ಈ ಘಟನೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಕೆಲ ಸಾರ್ವಜನಿಕರಿಗೂ ಗಾಯಗಳಾಗಿವೆ.

ಮಸೀದಿ ಗುಮ್ಮಟಕ್ಕೆ ಹಾನಿ; ತಳ್ಳುಗಾಡಿಗೆ ಬೆಂಕಿ

ಮತ್ತೊಂದೆಡೆ, ನವನಗರದ ಈದ್ಗಾ ಮೈದಾನದ ಬಳಿಯ ಮಸೀದಿಯ ಮೂರು ಗುಮ್ಮಟಗಳನ್ನು ಕಿಡಿಗೇಡಿಗಳು ಕೆಡವಿ, ಗೋಡೆಯ ಮೇಲೆ 'ಓಂ' ಎಂದು ಬರೆದ ಘಟನೆಯೂ ವರದಿಯಾಗಿದ್ದು, ನಗರದಲ್ಲಿ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಕಲ್ಲುತೂರಾಟದ ಬೆನ್ನಲ್ಲೇ ಕಿಡಿಗೇಡಿಗಳು ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More
Next Story