
ಕಾರ್ಮಿಕರ ಪಾಲಿನ 'ಭೀಷ್ಮ' ಅನಂತ ಸುಬ್ಬರಾವ್ ಇನ್ನಿಲ್ಲ
ಎಚ್.ವಿ.ಅನಂತ ಸುಬ್ಬರಾವ್ ನಿಧನವು ಒಬ್ಬ ವ್ಯಕ್ತಿಯ ಕಣ್ಮರೆಯಲ್ಲ, ಬದಲಿಗೆ ಕಾರ್ಮಿಕರ ಪರವಾದ ಒಂದು ಸಿದ್ಧಾಂತ ಮತ್ತು ಬದ್ಧತೆಯು ಯುಗಾಂತ್ಯವಾಗಿದೆ.
ರಾಜ್ಯದ ಕಾರ್ಮಿಕ ಚಳವಳಿಯ ಧೀಮಂತ ನಾಯಕ, ಕಾರ್ಮಿಕರ ಪಾಲಿನ ಭೀಷ್ಮ ಎಂದೇ ಹೆಸರಾಗಿದ್ದ ಎಚ್.ವಿ.ಅನಂತ ಸುಬ್ಬರಾವ್ ನಿಧನರಾಗಿದ್ದಾರೆ. ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅನಂತ ಸುಬ್ಬರಾವ್ ಅವರ ಜೀವನ ಮತ್ತು ಹೋರಾಟದ ಹಾದಿ ಅತ್ಯಂತ ರೋಚಕ ಹಾಗೂ ಸ್ಫೂರ್ತಿದಾಯಕ. ಸುಮಾರು ಐದು ದಶಕಗಳ ಕಾಲ ಬೀದಿಯಿಂದ ಹಿಡಿದು ಸರ್ಕಾರದ ಉನ್ನತ ಮಟ್ಟದ ಸಂಧಾನ ಸಭೆಗಳವರೆಗೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಅನಂತ ಸುಬ್ಬರಾವ್. ಅವರ ನಿಧನವು ಒಬ್ಬ ವ್ಯಕ್ತಿಯ ಕಣ್ಮರೆಯಲ್ಲ, ಬದಲಿಗೆ ಕಾರ್ಮಿಕರ ಪರವಾದ ಒಂದು ಸಿದ್ಧಾಂತ ಮತ್ತು ಬದ್ಧತೆಯು ಯುಗಾಂತ್ಯವಾಗಿದೆ ಎಂದೇ ಹೇಳಬಹುದು.
ಹಾಸನ ಜಿಲ್ಲೆಯ ಅರಕಲಗೂಡಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಅನಂತ ಸುಬ್ಬರಾವ್ ಅವರು ಆರಂಭದಲ್ಲಿ ಕಾರ್ಮಿಕ ನಾಯಕರಾಗುವ ಗುರಿಯನ್ನು ಹೊಂದಿರಲಿಲ್ಲ. ದೇಶದ ಪ್ರತಿಷ್ಠಿತ ವಿಮಾ ಸಂಸ್ಥೆಯಾದ ಎಲ್.ಐ.ಸಿಯಲ್ಲಿ ಅವರ ವೃತ್ತಿಜೀವನ ಆರಂಭವಾಯಿತು. ವಿಮಾ ವಲಯದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ಸಂಘಟನೆಯ ಶಕ್ತಿದ ಮಹತ್ವ ತಿಳಿಯಿತು. ಎಡಪಂಥೀಯ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಅವರು, ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಎಐಟಿಯುಸಿಯೊಂದಿಗೆ ಅವರ ನಂಟು ಇದ್ದು, ಸುಮಾರು 45-50 ವರ್ಷಗಳ ಕಾಲ ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ಅಧ್ಯಕ್ಷರಾಗಿ ಸಂಘಟನೆಯನ್ನು ಕೆಳಮಟ್ಟದಿಂದ ಕಟ್ಟಿದರು. ದೇಶದ ಒಟ್ಟು ಕಾರ್ಮಿಕ ವರ್ಗದ ಶೇ. 93ರಷ್ಟಿರುವ ಅಸಂಘಟಿತ ವಲಯದ ಕಾರ್ಮಿಕರ (ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಮಾಲಿಗಳು) ಸಾಮಾಜಿಕ ಭದ್ರತೆಗಾಗಿ ಅವರು ದೆಹಲಿಯ ಮಟ್ಟದಲ್ಲೂ ಧ್ವನಿ ಎತ್ತಿದ್ದರು. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಾಗಲೆಲ್ಲಾ ಸುಬ್ಬರಾವ್ ಅವರು ಅದರ ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ, ಕಾರ್ಮಿಕರ ಪರವಾಗಿ ತಿದ್ದುಪಡಿ ತರಲು ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದರು.
ಸಾರಿಗೆ ನೌಕರರ ಪಾಲಿನ 'ಆಪತ್ಬಾಂಧವ'
ಸಾಮಾನ್ಯವಾಗಿ ಅನಂತ ಸುಬ್ಬರಾವ್ ಎಂಬ ಹೆಸರನ್ನು ಕೇಳಿದ ಕೂಡಲೇ ಸಾರಿಗೆ ನೌಕರರ ನಾಯಕ ಎಂದು ನೆನಪಿಗೆ ಬರುತ್ತದೆ. ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಯನ್ನು ಇವರು ಕೇವಲ ಒಂದು ಸಂಘಟನೆಯಾಗಿ ನೋಡದೆ, ಒಂದು ಶಕ್ತಿಯುತ ಸಂಘಟನೆಯನ್ನಾಗಿ ರೂಪಿಸಿದರು. ಸಾರಿಗೆ ನೌಕರರಿಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಸುಲಭದ ಮಾತಾಗಿರಲಿಲ್ಲ. ಆದರೆ ಸುಬ್ಬರಾವ್ ಅವರು ಅಂಕಿ-ಅಂಶಗಳ ಸಮೇತ ಮಾತುಕತೆಗೆ ಕುಳಿತುಕೊಳ್ಳುತ್ತಿದ್ದರು. ಸರ್ಕಾರವು ಆರ್ಥಿಕ ನಷ್ಟದ ನೆಪ ಹೇಳಿದಾಗ, ಸಂಸ್ಥೆಯೊಳಗಿನ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ಎತ್ತಿ ತೋರಿಸಿ ನೌಕರರ ಹಕ್ಕನ್ನು ಕಸಿದುಕೊಳ್ಳದಂತೆ ವಾದಿಸುತ್ತಿದ್ದರು.
ಕರ್ನಾಟಕದ ಸಾರಿಗೆ ಇತಿಹಾಸದಲ್ಲಿ ಈ ಎರಡು ಮುಷ್ಕರಗಳು ಮರೆಯಲಾಗುವುದಿಲ್ಲ. ಇಡೀ ರಾಜ್ಯದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ, ನೌಕರರನ್ನು ಒಗ್ಗಟ್ಟಾಗಿ ಹಿಡಿದಿಟ್ಟುಕೊಂಡು ಅಂತಿಮವಾಗಿ ಶೇ. 12.5 ರಷ್ಟು ವೇತನ ಹೆಚ್ಚಳ ಮಾಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಅನಂತ ಸುಬ್ಬರಾವ್ ಅವರ ಇತ್ತೀಚಿನ ವರ್ಷಗಳ ಅತಿ ದೊಡ್ಡ ಬೇಡಿಕೆಯೆಂದರೆ ನಾಲ್ಕು ಸಾರಿಗೆ ನಿಗಮಗಳ ವಿಲೀನ ಮಾಡುವುದಾಗಿತ್ತು. ಪ್ರತ್ಯೇಕ ನಿಗಮಗಳಿಂದ ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗುತ್ತಿವೆ. ಇದರಿಂದ ನೌಕರರಿಗೆ ಸೌಲಭ್ಯ ನೀಡಲು ಹಣದ ಕೊರತೆಯಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಒಂದೇ ರಾಜ್ಯ, ಒಂದೇ ನಿಗಮ ಎಂಬ ತತ್ವದಡಿ ನಿಗಮಗಳನ್ನು ವಿಲೀನಗೊಳಿಸಿದರೆ ಅನಗತ್ಯ ಖರ್ಚುಗಳನ್ನು ತಡೆಯಬಹುದು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬಹುದು ಎಂಬುದು ಅವರ ದೂರದೃಷ್ಟಿಯಾಗಿತ್ತು. ಈ ಬಗ್ಗೆ ಸರ್ಕಾರದ ಹಲವು ಬಾರಿ ಒತ್ತಡವನ್ನು ಸಹ ಹೇರಿದ್ದರು.
ಹೋರಾಟದ ಕೊನೆಯ ಘಟ್ಟ
ವಯಸ್ಸು 85 ದಾಟಿದ್ದರೂ ಅನಂತ ಸುಬ್ಬರಾವ್ ಅವರಲ್ಲಿನ ಹೋರಾಟದ ಕಿಚ್ಚು ಕಡಿಮೆಯಾಗಿರಲಿಲ್ಲ. 2025ರ ಡಿಸೆಂಬರ್‌ನಲ್ಲಿ ವಯೋಸಹಜ ಕಾರಣಗಳಿಂದ ಎಐಟಿಯುಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರಾದರೂ, ಮನೆಯಲ್ಲಿ ವಿಶ್ರಾಂತಿ ಪಡೆಯಲಿಲ್ಲ. ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಹಾಗೂ ವೇತನ ಪರಿಷ್ಕರಣೆಗಾಗಿ 2026ರ ಜನವರಿಯಲ್ಲಿ ಅವರು 'ಬೆಂಗಳೂರು ಚಲೋ' ಪ್ರತಿಭಟನೆಗೆ ಕರೆ ನೀಡಿದ್ದರು. ಮನೆಯಲ್ಲೇ ಕುಳಿತು ಮಾರ್ಗದರ್ಶನ ನೀಡುವ ಬದಲು, ಮುಂಚೂಣಿಯಲ್ಲಿ ನಿಂತು ಕಾರ್ಮಿಕರನ್ನು ಉತ್ತೇಜಿಸಿದ್ದರು. ಅವರ ನಿಧನದ ಕೆಲವೇ ದಿನಗಳ ಮೊದಲು ನಡೆಸಿದ ಕರೆ ನೀಡಿದ್ದ ಹೋರಾಟ ಅವರ ಜೀವನದ ಬದ್ಧತೆಗೆ ಸಾಕ್ಷಿಯಾಗಿದೆ.

