
ಹುಲಿಕಲ್ ಘಾಟ್ ನಲ್ಲಿ ಮತ್ತೆ ಭೂಕುಸಿತ; ತೀರ್ಥಹಳ್ಳಿ-ಕುಂದಾಪುರ ಹೆದ್ದಾರಿ ಸಂಚಾರ ಸ್ಥಗಿತ
ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಳ್ಳುವವರೆಗೆ ಯಾವುದೇ ಮಾದರಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಹುಲಿಕಲ್ ಘಾಟಿಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ರಸ್ತೆಯಲ್ಲಿ ಸುಮಾರು 5 ಅಡಿ ಅಗಲದಷ್ಟು ಮಣ್ಣು ಕುಸಿದಿರುವುದು ಹಾಗೂ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸುರಕ್ಷತಾ ದೃಷ್ಟಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಳ್ಳುವವರೆಗೆ ಯಾವುದೇ ಮಾದರಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತೀಚೆಗಷ್ಟೇ ಇದೇ ಮಾರ್ಗದಲ್ಲಿ ನಡೆದ ಭೂಕುಸಿತದ ಸಂದರ್ಭದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಪ್ರಯಾಣಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಂಡಿದೆ.
ಪರ್ಯಾಯ ಮಾರ್ಗ ಯಾವುದು?
ಹೆದ್ದಾರಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗಾಗಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ತೆರಳುವವರು ತೀರ್ಥಹಳ್ಳಿ - ರಾವೆ - ಕಾನುಗೋಡು - ನಗರ - ಕೊಲ್ಲೂರು ಮೂಲಕ ಕುಂದಾಪುರ ತಲುಪಬಹುದು.
ಯಡೂರು-ಹುಲಿಕಲ್ ಮಾರ್ಗದವರು ತೀರ್ಥಹಳ್ಳಿ - ಯಡೂರು - ಮಾಸ್ತಿಕಟ್ಟೆ - ಕಾನುಗೋಡು - ನಗರ - ಕೊಲ್ಲೂರು ಮಾರ್ಗವಾಗಿ ಸಂಚರಿಸಬೇಕು.
ಶಿವಮೊಗ್ಗ ಹಾಗೂ ಸಾಗರ ಕಡೆಯಿಂದ ಬರುವವರು ಶಿವಮೊಗ್ಗ - ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಭಟ್ಕಳ - ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಲು ಸೂಚಿಸಲಾಗಿದೆ.
ಎರಡು ದಿನಗಳ ಹಿಂದೆ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಕಾಮಗಾರಿ ವೇಳೆ ದಿಢೀರ್ ಗುಡ್ಡ ಕುಸಿದು ರಾಘವೇಂದ್ರ (37), ರಾಜು (30) ಮತ್ತು ಶಬ್ಬೀರ್ (40) ಎಂಬ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದರು. ಇದೀಗ ಮತ್ತೆ ರಸ್ತೆಯಲ್ಲಿ ಬಿರುಕು ಮತ್ತು ಕುಸಿತ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕಾಮಗಾರಿ ಪೂರ್ಣಗೊಂಡು ರಸ್ತೆ ಸುರಕ್ಷಿತವಾಗಿದೆ ಎಂದು ದೃಢಪಡುವವರೆಗೂ ಸಂಚಾರ ನಿರ್ಬಂಧ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಘೋಷಿಸಿದ್ದ ಸಿಎಂ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೃತಪಟ್ಟಿದ್ದ ಮೂವರು ಕಾರ್ಮಿಕರ ಕುಟುಂಬಗಳಿಗೆ ಮಾನವೀಯ ಹಿನ್ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಿದ್ದರು.

