
ಹುಬ್ಬಳಿಯ ಕಾರಾಗೃಹದಲ್ಲಿನ ಆರೋಪಿಗಳು ಸೆಲ್ಪಿ ವಿಡಿಯೋ ಮಾಡಿರುವುದು
ಜೈಲೋ? ಫೈವ್ ಸ್ಟಾರ್ ಹೋಟೆಲೋ?: ಹುಬ್ಬಳ್ಳಿ ಜೈಲಿನಲ್ಲಿ ಆರೋಪಿಗಳ 'ಜಾಲಿ ಲೈಫ್' ವಿಡಿಯೋ ವೈರಲ್!
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹುಬ್ಬಳ್ಳಿ ನಗರದ ಉಪ ಕಾರಾಗೃಹವು ಇದೀಗ ವಿಚಾರಣಾಧೀನ ಕೈದಿಗಳ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಜೈಲಿನೊಳಗೆ ವಿಚಾರಣಾಧೀನ ಕೈದಿಗಳು ಮೊಬೈಲ್ ಬಳಸಿ ಗುಂಪಾಗಿ ಸೆಲ್ಫಿ ತೆಗೆದುಕೊಂಡಿರುವುದು ಹಾಗೂ ಗಾಂಜಾ ಮತ್ತು ಮದ್ಯ ಸೇವನೆ ಮಾಡುತ್ತಿರುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
2025ರ ಡಿಸೆಂಬರ್ 9ರಂದು ಸೆರೆಯಾಗಿದ್ದ ಎನ್ನಲಾದ ಈ ದೃಶ್ಯಾವಳಿಗಳು ತಡವಾಗಿ ಬೆಳಕಿಗೆ ಬಂದಿದ್ದು, ಕಾರಾಗೃಹ ಇಲಾಖೆಯ ಭದ್ರತಾ ಲೋಪವನ್ನು ಜಗಜ್ಜಾಹೀರುಗೊಳಿಸಿವೆ.
ಕೊಲೆ ಆರೋಪಿಗಳ ಬಿಂದಾಸ್ ಜೀವನ
ಕಳೆದ ನವೆಂಬರ್ 13ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಮಲ್ಲಿಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಭಿಷೇಕ್ ಜಾಧವ್, ಗಣೇಶ್ ಜಾಧವ್ ಸೇರಿದಂತೆ ಸುಮಾರು ಹದಿನೇಳು ಮಂದಿ ಹುಬ್ಬಳ್ಳಿ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಷೇಧವಿದ್ದರೂ, ಈ ಆರೋಪಿಗಳು ಯಾವುದೇ ಭಯವಿಲ್ಲದೆ ಗುಂಪಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಬಿಂದಾಸ್ ಜೀವನ ನಡೆಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಜೈಲಿನೊಳಗೆ ಭ್ರಷ್ಟ ಸಿಬ್ಬಂದಿಗೆ ಹಣ ನೀಡಿದರೆ ಗಾಂಜಾ, ಮದ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ ಎಂಬ ಸಾರ್ವಜನಿಕರ ದೂರುಗಳಿಗೆ ಈ ಪ್ರಕರಣ ಬಲವಾದ ಪುಷ್ಟಿ ನೀಡುವಂತಿದೆ.
ಡಿಜಿಪಿ ಭೇಟಿ ಬೆನ್ನಲ್ಲೇ ಬಯಲಾದ ಕರ್ಮಕಾಂಡ
ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕೇವಲ ಮೂರು ದಿನಗಳ ಹಿಂದಷ್ಟೇ ಹುಬ್ಬಳ್ಳಿ ಜೈಲಿಗೆ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಿದ್ದರು. ಡಿಜಿಪಿ ಭೇಟಿ ನೀಡಿದ ಮೂರೇ ದಿನಗಳಲ್ಲಿ ಈ ಅಕ್ರಮಗಳ ವಿಡಿಯೋ ಹೊರಬಿದ್ದಿರುವುದು ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಅಲೋಕ್ ಕುಮಾರ್ ಅವರು, ತಕ್ಷಣವೇ ಸಮಗ್ರ ವರದಿ ನೀಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕ ಮಹದೇವ ನಾಯಕ್ ಹಾಗೂ ಉತ್ತರ ವಲಯದ ಜೈಲು ಡಿಐಜಿ ಟಿ.ಪಿ. ಶೇಷ ಅವರು ಶನಿವಾರ ಇಡೀ ದಿನ ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಸುದೀರ್ಘ ಪರಿಶೀಲನೆ ನಡೆಸಿದ್ದಾರೆ. ಈ ವಿಚಾರಣೆಯ ಬೆನ್ನಲ್ಲೇ, ಉಪ ಕಾರಾಗೃಹದ ಅಧೀಕ್ಷಕ ಶಾಭುದ್ದೀನ್ ಅವರು ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಷೇಕ್ ಜಾಧವ್ ಮತ್ತು ಗಣೇಶ್ ಜಾಧವ್ ಸೇರಿದಂತೆ ಒಟ್ಟು ಹತ್ತು ಮಂದಿ ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಜೈಲು ಸಿಬ್ಬಂದಿಯ ಲೋಪದೋಷಗಳ ಕುರಿತು ಇಲಾಖಾ ಮಟ್ಟದ ಆಂತರಿಕ ವಿಚಾರಣೆಯೂ ಪ್ರಗತಿಯಲ್ಲಿದೆ.
ಸಿಬ್ಬಂದಿ ಕೊರತೆ ಮತ್ತು ಡಿಐಜಿ ಸ್ಪಷ್ಟನೆ
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಭದ್ರತಾ ಸಿಬ್ಬಂದಿಯ ತೀವ್ರ ಕೊರತೆ ಕಾಡುತ್ತಿದ್ದು, ಮಂಜೂರಾದ ಎಂಬತ್ತು ಹುದ್ದೆಗಳ ಪೈಕಿ ಪ್ರಸ್ತುತ ಕೇವಲ ಮೂವತ್ತು ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೈಲಿನ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಹೊರತುಪಡಿಸಿ, ಹೊರಗಡೆ ಕಾವಲಿಗೆ ಕನಿಷ್ಠ ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ. ಈ ಭದ್ರತಾ ಲೋಪವನ್ನು ಬಳಸಿಕೊಂಡು ಕಿಡಿಗೇಡಿಗಳು ಜೈಲಿನ ಹೊರಗಿನ ಗೋಡೆಯಿಂದ ಮೊಬೈಲ್ ಅಥವಾ ಗಾಂಜಾವನ್ನು ಒಳಗೆ ಎಸೆಯುವುದು ಅತ್ಯಂತ ಸುಲಭವಾಗಿದೆ.
ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಡಿಐಜಿ ಟಿ.ಪಿ. ಶೇಷ, ವೈರಲ್ ಆಗಿರುವ ವಿಡಿಯೋ ಹಳೆಯದಾಗಿದ್ದು, ಡಿಸೆಂಬರ್ 9ರಂದು ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಜೈಲು ಇಲಾಖೆಯು ಇತ್ತೀಚೆಗೆ ಕೈಗೊಂಡಿರುವ ಸುಧಾರಣಾ ಕ್ರಮಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ, ಜನವರಿ 16ರಂದು ಬೇರೆ ಜೈಲಿಗೆ ವರ್ಗಾವಣೆಯಾಗಿರುವ ಪ್ರಜ್ವಲ್ ಎಂಬ ಕೈದಿ ಈ ವಿಡಿಯೋವನ್ನು ಹರಿಬಿಟ್ಟಿರುವ ಅನುಮಾನವಿದೆ ಎಂದಿದ್ದಾರೆ. ಅಲ್ಲದೆ, ಆರೋಪಿಗಳೇ ಇದು ಹಳೆಯ ವಿಡಿಯೋ ಎಂದು ಒಪ್ಪಿಕೊಂಡಿದ್ದು, ವಿಡಿಯೋದಲ್ಲಿ ಸೇದುತ್ತಿರುವುದು ಗಾಂಜಾವೋ ಅಥವಾ ಮರದ ಎಲೆಯೋ ಎಂಬುದು ವಿಧಿವಿಜ್ಞಾನ ತನಿಖೆಯಿಂದಷ್ಟೇ ದೃಢಪಡಬೇಕಿದೆ ಎಂದು ವಿವರಿಸಿದ್ದಾರೆ.
ರಾಜ್ಯದ ಜೈಲುಗಳಲ್ಲಿ ರಾಜಾತೀಥ್ಯ ಹೊಸದೇನಲ್ಲ
ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಮತ್ತು ಅವರ ಸಹಚರರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತೀಥ್ಯ ನೀಡಿದ್ದ ಪ್ರಕರಣ ಭಾರಿ ಸದ್ದು ಮಾಡಿತ್ತು. ದರ್ಶನ್ ಜೈಲಿನ ಉದ್ಯಾನದಲ್ಲಿ ಕುಳಿತು ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಇದಕ್ಕೂ ಮುನ್ನ ಇದೇ ಜೈಲಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಪ್ರತ್ಯೇಕ ಅಡುಗೆ ಮನೆ ಸೇರಿ ವಿಶೇಷ ಸೌಲಭ್ಯ ಕಲ್ಪಿಸಲು ಕೋಟಿಗಟ್ಟಲೆ ಲಂಚ ಪಡೆದಿದ್ದ ಭ್ರಷ್ಟಾಚಾರವನ್ನು ಅಂದಿನ ಡಿಐಜಿ ಡಿ. ರೂಪಾ ಬಯಲಿಗೆಳೆದಿದ್ದರು.
ವಿಜಯಪುರದ ಕೇಂದ್ರ ಕಾರಾಗೃಹದಲ್ಲಿಯೂ ಕೈದಿಗಳು ಮೊಬೈಲ್ ಬಳಸುವುದು, ಬಿರಿಯಾನಿ ಪಾರ್ಟಿ ಮಾಡುವುದು ಹಾಗೂ ಜೈಲಿನೊಳಗಿಂದಲೇ ಹಫ್ತಾ ವಸೂಲಿಗೆ ಇಳಿದಿದ್ದ ಗಂಭೀರ ದೂರುಗಳು ಕೇಳಿಬಂದಿದ್ದವು. ಕಲಬುರಗಿ ಜೈಲಿನ ಮೇಲೆ ನಡೆದಿದ್ದ ದಿಢೀರ್ ದಾಳಿಯ ವೇಳೆ ಹತ್ತಾರು ಮೊಬೈಲ್‌ಗಳು ಮತ್ತು ಗಾಂಜಾ ಪೊಟ್ಟಣಗಳು ಪತ್ತೆಯಾಗಿದ್ದವು ಹಾಗೂ ಕೈದಿಗಳು ವಿಡಿಯೋ ಕಾಲ್ ಮೂಲಕ ಹೊರಗಿನವರೊಂದಿಗೆ ಸಂಪರ್ಕದಲ್ಲಿರುವುದು ಸಾಬೀತಾಗಿತ್ತು. ಇನ್ನು ಮಂಗಳೂರು ಜೈಲಿನಲ್ಲಿ ಮಾರಕಾಸ್ತ್ರಗಳು, ಮೊಬೈಲ್ ಪೂರೈಕೆಯ ಜೊತೆಗೆ ಆಗಾಗ್ಗೆ ಗ್ಯಾಂಗ್ ವಾರ್‌ಗಳು ನಡೆದರೆ, ರಾಮನಗರ ಜೈಲಿನಲ್ಲಿಯೂ ಮೊಬೈಲ್, ಬೀಡಿ, ಸಿಗರೇಟ್ ಹಾಗೂ ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾರಾಗೃಹ ಇಲಾಖೆ ಎಷ್ಟೇ ಕಠಿಣ ಕ್ರಮಗಳ ಭರವಸೆ ನೀಡಿದರೂ, ವಾಸ್ತವದಲ್ಲಿ ಜೈಲುಗಳ ಭದ್ರತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಮೇಲಿಂದ ಮೇಲೆ ಸಾಬೀತಾಗುತ್ತಿದೆ.

