x

ಭಾರತದ ಅಭಿವೃದ್ಧಿ ಚಿಂತನೆಯ ಬೇರು ಮೈಸೂರಿನಲ್ಲೇ ಇದೆ: ಪ್ರೊ. ಚಂದನ್ ಗೌಡ

ಮೈಸೂರು ಸಂಸ್ಥಾನದ ಆಡಳಿತ, ಕೈಗಾರಿಕೀಕರಣ, ಯೋಜನಾ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಮಾದರಿಯ ಕುರಿತು ಪ್ರೊ. ಚಂದನ್ ಗೌಡ ಅವರ ಜೊತೆ ದ ಫೆಡರಲ್‌ ಕರ್ನಾಟಕದ ವಿಶೇಷ ಸಂದರ್ಶನ.


ಮೈಸೂರು ಸಂಸ್ಥಾನದ ಅಭಿವೃದ್ಧಿ, ಕೈಗಾರಿಕೀಕರಣ, ಶಿಕ್ಷಣ, ಸಾಮಾಜಿಕ ಸುಧಾರಣೆ ಹಾಗೂ ರಾಜ್ಯದ ಪಾತ್ರದ ಕುರಿತು ಹಲವು ಮಹತ್ವದ ವಿಚಾರಗಳನ್ನು ತಮ್ಮ ಸಂಶೋಧನೆಯ ಮೂಲಕ ವಿಶ್ಲೇಷಿಸಿರುವ ವಿದ್ಯಾಶಿಲ್ಪ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ಚಂದನ್ ಗೌಡ, ಭಾರತದ ಅಭಿವೃದ್ಧಿ ಚಿಂತನೆಯ ಬೇರುಗಳನ್ನು ಅರ್ಥಮಾಡಿಕೊಳ್ಳಲು ಮೈಸೂರು ಸಂಸ್ಥಾನದ ಇತಿಹಾಸವನ್ನು ಗಮನಿಸುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.

‘ಲಾಂಗಿಂಗ್ ಫಾರ್ ಎಲ್ಸ್‌ವೇರ್: ಮೈಸೂರು ಅಂಡ್ ದಿ ಮೇಕಿಂಗ್ ಆಫ್ ಇಂಡಿಯಾಸ್ ಡೆವಲಪ್‌ಮೆಂಟ್ ಸ್ಟೇಟ್’ ಕೃತಿಯ ಕುರಿತು ದ ಫೆಡರಲ್ ಕರ್ನಾಟಕದೊಂದಿಗೆ ನಡೆದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದಲ್ಲಿ ರೂಪುಗೊಂಡ ಅಭಿವೃದ್ಧಿಯ ಕಲ್ಪನೆಗಳು ನಂತರದ ಭಾರತದ ಯೋಜನೆ ಹಾಗೂ ಅಭಿವೃದ್ಧಿ ಚಿಂತನೆಯ ಮೇಲೂ ಪ್ರಭಾವ ಬೀರಿವೆ ಎಂದು ವಿವರಿಸಿದ್ದಾರೆ.

ಅಭಿವೃದ್ಧಿ ಎಂಬ ಪರಿಕಲ್ಪನೆಯೇ ಆಧುನಿಕ ಕಾಲದಲ್ಲಿ ನಿರ್ದಿಷ್ಟ ಅರ್ಥ ಪಡೆದುಕೊಂಡಿತು. ಒಂದು ಸಮಾಜವನ್ನು ‘ಮುಂದುವರಿದ’ ಅಥವಾ ‘ಹಿಂದುಳಿದ’ ಎಂದು ಗುರುತಿಸುವ ದೃಷ್ಟಿಕೋನವನ್ನು ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಭಾರತೀಯ ಸಮಾಜದ ಮೇಲೆ ಹೇಗೆ ಹೇರಲಾಯಿತು ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

‘ಹಿಂದುಳಿದಿದ್ದೀರಿ’ ಎಂಬ ಕಲ್ಪನೆಯನ್ನು ಭಾರತ ಒಪ್ಪಿಕೊಂಡಿತ್ತು

ಬ್ರಿಟಿಷರು ಭಾರತೀಯ ಸಮಾಜವನ್ನು ರಾಜಕೀಯ ವ್ಯವಸ್ಥೆ, ಮಾರುಕಟ್ಟೆ, ವಿಜ್ಞಾನ, ಶಿಕ್ಷಣ, ಖಾಸಗಿ ಆಸ್ತಿ, ಕೈಗಾರಿಕೀಕರಣ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ‘ಹಿಂದುಳಿದಿದೆ’ ಎಂದು ಬಿಂಬಿಸಿದರು. ಆಧುನಿಕ ಸಮಾಜ ಎಂದರೆ ಕೈಗಾರಿಕೀಕರಣಗೊಂಡ, ನಗರೀಕರಣಗೊಂಡ ಮತ್ತು ವಿಜ್ಞಾನಾಧಾರಿತ ಸಮಾಜ ಎಂಬ ಕಲ್ಪನೆ ಕ್ರಮೇಣ ಬಲವಾಯಿತು ಎಂದು ಪ್ರೊ. ಚಂದನ್ ಗೌಡ ವಿವರಿಸಿದ್ದಾರೆ.

ಆದರೆ 19ನೇ ಶತಮಾನದಲ್ಲಿ ಶಿಕ್ಷಣ ಪಡೆದ ಭಾರತೀಯರ ಒಂದು ವರ್ಗ, ‘ನಾವು ಹಿಂದುಳಿದಿದ್ದರೆ ನಮ್ಮದೇ ಪ್ರಯತ್ನ, ಯೋಜನೆ ಮತ್ತು ಶ್ರಮದ ಮೂಲಕ ಮುಂದುವರಿಯಬಹುದು’ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಿತು. ಬ್ರಿಟಿಷ್ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಈ ವರ್ಗವೇ ನಂತರ ದೇಶದ ಅಭಿವೃದ್ಧಿ ಕುರಿತ ಹೊಸ ಚಿಂತನೆಗಳನ್ನು ರೂಪಿಸಿತು ಎಂದು ಅವರು ಹೇಳಿದ್ದಾರೆ.

Read More
Next Story