Honor Killing :ಅಂತರ್ಜಾತಿ ವಿವಾಹಗಳ ಸುರಕ್ಷತೆಗೆ ಹೊಸ ಕಾಯ್ದೆ ಇವ ನಮ್ಮವ ಕಾನೂನು ಜಾರಿ
x

Honor Killing :ಅಂತರ್ಜಾತಿ ವಿವಾಹಗಳ ಸುರಕ್ಷತೆಗೆ ಹೊಸ ಕಾಯ್ದೆ 'ಇವ ನಮ್ಮವ' ಕಾನೂನು ಜಾರಿ

ಕರ್ನಾಟಕದಲ್ಲಿ ಮರ್ಯಾದಾಗೇಡು ಹತ್ಯೆ ಪ್ರಕರಣಗಳು ಘಟಿಸಿರುವ ಹಿನ್ನಲೆಯಲ್ಲಿ ಈ ವಿಧೇಯಕವನ್ನು ಮಂಡಿಸಿ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.


Click the Play button to hear this message in audio format

ಪ್ರೇಮ ವಿವಾಹ ಹಾಗೂ ಅಂತರ್ಜಾತಿಯ ವಿವಾಹವಾಗುವ ಯುವಕ-ಯುವತಿಯರನ್ನು ರಕ್ಷಿಸಲು ಮತ್ತು ರಾಜ್ಯದಲ್ಲಿ 'ಮರ್ಯಾದೆ ಹತ್ಯೆ'ಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ '2026ನೇ ಸಾಲಿನ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ'ಕ್ಕೆ ವಿಧಾನಸಭೆಯಲ್ಲಿ ಸೋಮವಾರ ಅಧಿಕೃತವಾಗಿ ಅಂಗೀಕಾರ ದೊರೆತಿದೆ.

ಸದನದಲ್ಲಿ ಈ ಮಹತ್ವದ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, "ಅನ್ಯ ಜಾತಿ ಅಥವಾ ಧರ್ಮದ ಯುವಕ-ಯುವತಿಯರು ಪರಸ್ಪರ ಮೆಚ್ಚಿ ಮದುವೆಯಾಗುತ್ತಾರೆ. ಸಂವಿಧಾನದ ಆಶಯದಂತೆ ಅವರಿಗೆ ತಮ್ಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಕೆಲವು ಕುಟುಂಬಗಳಲ್ಲಿ ಮರ್ಯಾದೆಯ ಮತ್ತು ಸಂಪ್ರದಾಯದ ಹೆಸರಿನಲ್ಲಿ ತಮ್ಮದೇ ಮಕ್ಕಳನ್ನು ಹಿಂಸಿಸುವ ಮತ್ತು ಹತ್ಯೆ ಮಾಡುವಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಈ ವಿಧೇಯಕವನ್ನು ಒಪ್ಪುವ ಮೂಲಕ ಕರ್ನಾಟಕವು ಇತರೆ ರಾಜ್ಯಗಳಿಗೆ ಮಾದರಿಯಾಗಬೇಕು" ಎಂದು ಮನವಿ ಮಾಡಿದರು. ಮಕ್ಕಳು ಪ್ರೇಮ ವಿವಾಹವಾದರೆ ಅವರು ಬದುಕಿರುವಾಗಲೇ ಪೋಷಕರು 'ತಿಥಿ' (ಪುಣ್ಯತಿಥಿ) ಮಾಡುವ ವಿಕೃತ ಸಂಪ್ರದಾಯವಿದೆ. ಮದುವೆಗೆ ಹೋಗದವರೂ ಇಂತಹ ತಿಥಿ ಕಾರ್ಯಗಳಿಗೆ ಹೋಗುತ್ತಾರೆ. ಈ ಕಾಯ್ದೆಯನ್ವಯ ಇಂತಹ ಕೃತ್ಯಗಳು ಕೂಡ ಇನ್ನುಮುಂದೆ ಕಾನೂನುಬಾಹಿರವಾಗಲಿವೆ ಎಂದು ಸಚಿವರು ಎಚ್ಚರಿಸಿದರು.

ವಿಪಕ್ಷಗಳ ಪ್ರಶ್ನೆ: ಬಿಲ್‌ನಲ್ಲಿ ಹೊಸತೇನಿದೆ?

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಿಧೇಯಕದ ಮೂಲ ಆಶಯವನ್ನು ಬೆಂಬಲಿಸಿದರೂ, ಹಲವು ಪ್ರಶ್ನೆಗಳನ್ನು ಎತ್ತಿದರು. "ಹಳೇ ಮೈಸೂರು ಭಾಗದಲ್ಲಿ ಅನೇಕ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದು, ಈ ಕಾನೂನು ತರುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೇವಲ ಬಿಲ್ ತಂದರೆ ಸಾಲದು, ಬದಲಾಗಿ ಜಾತಿ ವ್ಯವಸ್ಥೆಗೆ ಪರ್ಯಾಯ ಏನು? ಹತ್ಯೆ ಮಾಡಿದವರಿಗೆ ಏನು ಶಿಕ್ಷೆ? ಕಾಯ್ದೆಯ ನೈಜ ಉಪಯೋಗವೇನು?" ಎಂದು ಪ್ರಶ್ನಿಸಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ, "ಮರ್ಯಾದೆ ಹತ್ಯೆ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮ ಈಗಾಗಲೇ ಹೊಸ ಕ್ರಿಮಿನಲ್ ಕಾನೂನು 'ಭಾರತೀಯ ನ್ಯಾಯ ಸಂಹಿತೆ'ಯಲ್ಲಿದೆ (BNS). ಕೇವಲ ಬಸವಣ್ಣನವರ ವಚನಗಳನ್ನು ಉಲ್ಲೇಖಿಸುವುದನ್ನು ಬಿಟ್ಟರೆ, ಹಾಲಿ ಇರುವ ಕಾನೂನಿಗಿಂತ ಇದರಲ್ಲಿ ಬೇರೇನು ಹೊಸತಿದೆ?" ಎಂದು ಪ್ರಶ್ನಿಸಿದರು. ಶಾಸಕ ವಿ. ಸುನಿಲ್ ಕುಮಾರ್ ಕೂಡ ದನಿಗೂಡಿಸಿ, "ಬಿಲ್‌ಗೆ ಕೇವಲ 'ಇವ ನಮ್ಮವ, ಇವ ನಮ್ಮವ' ಎಂಬ ಹೆಸರನ್ನು ಸೇರಿಸಿದ್ದೀರಿ ಅಷ್ಟೇ. ದ್ವೇಷ ಭಾಷಣ, ರೋಹಿತ್ ವೇಮುಲ ಬಿಲ್ ತರುತ್ತೀರಲ್ಲಾ, ಹಾಗೆ ಇದೂ ಕೂಡ ಒಂದು" ಎಂದು ಟೀಕಿಸಿದರು.

ವಿಧೇಯಕದ ಪ್ರಮುಖ ಅಂಶಗಳು ಹಾಗೂ ಅಂಗೀಕಾರ

ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಹೆಚ್.ಕೆ. ಪಾಟೀಲ್, ಈ ಕಾನೂನಿನಲ್ಲಿ5 ಪ್ರಮುಖ ಅಂಶಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮರ್ಯಾದೆ ಹತ್ಯೆ ಅಥವಾ ಹಿಂಸೆಯ ಪ್ರಕರಣಗಳು ಕಂಡುಬಂದರೆ ಕಡ್ಡಾಯವಾಗಿ ವರದಿ ಮಾಡಬೇಕು. ಇಂತಹ ಸೂಕ್ಷ್ಮ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳು ನಿರಂತರ ಉಸ್ತುವಾರಿ (ಮಾನಿಟರಿಂಗ್) ಮಾಡಬೇಕು. ಮದುವೆಗೆ ಮೊದಲೇ ಇಬ್ಬರಿಗೂ ಸಂಬಂಧವಿದ್ದರೆ ಆ ಮಾಹಿತಿಯನ್ನೂ ಒದಗಿಸಬೇಕು ಸೇರಿದಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ ಎಂದರು.

ವಿಧೇಯಕದ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಸುದೀರ್ಘ ಚರ್ಚೆ ನಡೆದ ಬಳಿಕ, ಧ್ವನಿಮತದ ಮೂಲಕ ವಿಧಾನಸಭೆಯು ಈ ವಿಧೇಯಕವನ್ನು ಅಂಗೀಕರಿಸಿತು.

Read More
Next Story