ಅಬಕಾರಿ ಇತಿಹಾಸದಲ್ಲೇ ಮದ್ಯ ಪರವಾನಗಿ ಹರಾಜಿನಲ್ಲಿ SC/ST ಸಮುದಾಯಕ್ಕೆ ಮೀಸಲಾತಿ
x

ಅಬಕಾರಿ ಇತಿಹಾಸದಲ್ಲೇ ಮದ್ಯ ಪರವಾನಗಿ ಹರಾಜಿನಲ್ಲಿ SC/ST ಸಮುದಾಯಕ್ಕೆ ಮೀಸಲಾತಿ

ಎಸ್‌ಸಿಯ ಎ ವರ್ಗಕ್ಕೆ ಶೇ.5.25, ಬಿ ವರ್ಗಕ್ಕೆ ಶೇ.5.25, ಸಿ ವರ್ಗಕ್ಕೆ ಶೇ.4.5 ಮತ್ತು ಎಸ್‌ಟಿಗೆ ಶೇ. 3 ಎಂದು ವಿಂಗಡಿಸಲಾಗಿದೆ. ಇದು ಸಮುದಾಯವನ್ನು ವಾಣಿಜ್ಯ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿದೆ.


Click the Play button to hear this message in audio format

ಆಡಳಿತ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯು ಮುಖ್ಯವಾಗಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಸೀಮಿತವಾಗಿತ್ತು. ಆದರೆ, ರಾಜ್ಯ ಸರ್ಕಾರವು ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರವೊಂದು ಈ ಸಾಂಪ್ರದಾಯಿಕ ಗಡಿಗಳನ್ನು ದಾಟಿ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲೂ ಸಾಮಾಜಿಕ ಸಮಾನತೆಯನ್ನು ಪ್ರತಿಷ್ಠಾಪಿಸಿದೆ. ಅಬಕಾರಿ ಇಲಾಖೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮದ್ಯ ಪರವಾನಗಿ ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ, ಸರ್ಕಾರವು ದೇಶಕ್ಕೆ ಹೊಸ ಮಾದರಿಯನ್ನು ಹಾಕಿಕೊಟ್ಟಿದೆ.

ಸರ್ಕಾರವು ಹೊರಡಿಸಿದ ಅಧಿಕೃತ ಅಧಿಸೂಚನೆಯು, ರಾಜ್ಯದ ಅಬಕಾರಿ ನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ. ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968'ರ 5ನೇ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ, ಸಿಎಲ್‌-2A ಮತ್ತು ಸಿಎಲ್‌-9A ಪರವಾನಗಿಗಳ ಇ-ಹರಾಜಿನಲ್ಲಿ ಮೀಸಲಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ತಿದ್ದುಪಡಿಯು ಕರ್ನಾಟಕ ಆಬಕಾರಿ ಕಾಯ್ದೆ, 1965ರ 71ನೇ ವಿಧಿಯಡಿ ಅಧಿಕಾರವನ್ನು ಚಲಾಯಿಸುವ ಮೂಲಕ ಜಾರಿಗೆ ಬಂದಿದೆ.

ಮೀಸಲಾತಿಯ ವಿಭಜನೆ ಮತ್ತು ವರ್ಗೀಕರಣ

ಆದೇಶದ ಪ್ರಮುಖ ಆಕರ್ಷಣೆಯೆಂದರೆ, ಮೀಸಲಾತಿಯನ್ನು ವೈಜ್ಞಾನಿಕವಾಗಿ ಮತ್ತು ಸಮಾನವಾಗಿ ಹಂಚಿಕೆ ಮಾಡಿರುವುದು. ಪರಿಶಿಷ್ಟ ಜಾತಿಯ ಒಳಪಂಗಡಗಳ ನಡುವೆ ಸಮಾನ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರವು ಶೇಕಡಾವಾರು ಮೀಸಲಾತಿಯನ್ನು ನಿಗದಿಪಡಿಸಿದೆ. ಪರಿಶಿಷ್ಟ ಜಾತಿಯ ಎ ವರ್ಗಕ್ಕೆ ಶೇ.5.25, ಬಿ ವರ್ಗಕ್ಕೆ ಶೇ.5.25, ಸಿ ವರ್ಗಕ್ಕೆ ಶೇ.4.5 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3 ಎಂದು ವಿಂಗಡಿಸಲಾಗಿದೆ. ಈ ವರ್ಗೀಕರಣವು ಸಮುದಾಯದೊಳಗಿನ ಅವಕಾಶ ವಂಚಿತರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವುದನ್ನು ಖಚಿತಪಡಿಸುತ್ತದೆ. ಇದು ಕೇವಲ ಅಂಕಿ-ಅಂಶಗಳ ಆಟವಲ್ಲ, ಬದಲಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ವಾಣಿಜ್ಯ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿದೆ.

ದೇಶದ ಇತರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳಗಳಲ್ಲಿ ಮದ್ಯದ ಪರವಾನಗಿ ನೀಡುವುದು ದಶಕಗಳಿಂದ ಆರ್ಥಿಕ ಅರ್ಹತೆ, ಬಂಡವಾಳ ಹೂಡಿಕೆಯ ಸಾಮರ್ಥ್ಯ ಮತ್ತು ತೆರಿಗೆ ಪಾವತಿಯ ಆಧಾರದ ಮೇಲೆ ಮಾತ್ರ ನಡೆಯುತ್ತಿತ್ತು. ಇವು ಸಂಪೂರ್ಣವಾಗಿ ಬಂಡವಾಳಶಾಹಿ ಮಾದರಿಯ ಹರಾಜು ಪ್ರಕ್ರಿಯೆಗಳಾಗಿದ್ದವು. ಆದರೆ, ಕರ್ನಾಟಕವು ಈ ಹರಾಜು ಪ್ರಕ್ರಿಯೆಗೆ ಸಾಮಾಜಿಕ ನ್ಯಾಯದ ಸ್ಪರ್ಶ ನೀಡುವ ಮೂಲಕ ಇಡೀ ದೇಶದಲ್ಲೇ ಇಂತಹ ಕ್ರಮ ಕೈಗೊಂಡ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಇದು ಸಾಮಾಜಿಕ ಒಳಗೊಳ್ಳುವಿಕೆಗೆ ಸರ್ಕಾರ ನೀಡಿದ ಆದ್ಯತೆಯ ಸಂಕೇತವಾಗಿದೆ.

ಈ ಕ್ರಮದ ಸಾಮಾಜಿಕ - ಆರ್ಥಿಕ ಮಹತ್ವ

ಮದ್ಯದ ವ್ಯಾಪಾರವು ಲಾಭದಾಯಕ ವಲಯಗಳಲ್ಲಿ ಒಂದಾಗಿದೆ. ಇಷ್ಟು ದಿನ ಈ ವಲಯವು ಸೀಮಿತ ವರ್ಗಗಳ ಹಿಡಿತದಲ್ಲಿತ್ತು. ಈಗ ಮೀಸಲಾತಿಯ ಮೂಲಕ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಈ ವಲಯದ ಪ್ರವೇಶ ದ್ವಾರ ತೆರೆದಿದೆ. ಇದು ಸಮುದಾಯದ ಉದ್ಯಮಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವ್ಯಾಪಾರ ಕ್ಷೇತ್ರದಲ್ಲಿ ಅವಕಾಶ ಸಿಗದಿರುವುದು ಬಡತನಕ್ಕೆ ಒಂದು ಪ್ರಮುಖ ಕಾರಣ. ಸರ್ಕಾರವು ಈ ಅಡೆತಡೆಯನ್ನು ನಿವಾರಿಸುವುದರ ಮೂಲಕ, ತಳಸಮುದಾಯದ ಯುವಕರಿಗೆ ಉದ್ಯಮಶೀಲತೆಯ ಅವಕಾಶಗಳನ್ನು ನೀಡಿದೆ. ಸಾಮಾಜಿಕ ನ್ಯಾಯವು ಕೇವಲ ರಾಜಕೀಯ ಮೀಸಲಾತಿಗೆ ಸೀಮಿತವಾಗಬಾರದು ಎಂಬ ಸಂವಿಧಾನಾತ್ಮಕ ಆಶಯವನ್ನು ಈ ಆದೇಶವು ಪ್ರತಿಬಿಂಬಿಸುತ್ತದೆ. ಆರ್ಥಿಕತೆಯಲ್ಲಿ ತಳಸಮುದಾಯದ ಪಾಲು ಹೆಚ್ಚಾದಷ್ಟೂ, ರಾಜ್ಯದ ಸಂಪತ್ತಿನ ವಿತರಣೆ ಹೆಚ್ಚು ಸಮಾನವಾಗಿರುತ್ತದೆ.

ಸವಾಲುಗಳು - ಮುಂದಿನ ದಾರಿ

ಮೀಸಲಾತಿ ಜಾರಿಗೆ ತರುವುದು ಒಂದು ಭಾಗವಾದರೆ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತೊಂದು ಸವಾಲು. ಈ ಮೀಸಲಾತಿ ಸೌಲಭ್ಯವನ್ನು ಪಡೆಯುವವರು ಆರ್ಥಿಕವಾಗಿ ಸದೃಢರಾಗಿರಲು ಸರ್ಕಾರವು ಬ್ಯಾಂಕಿಂಗ್ ಸಾಲ ಸೌಲಭ್ಯ ಅಥವಾ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿಯೂ ಚಿಂತಿಸಬೇಕಿದೆ. ಕೇವಲ ಪರವಾನಗಿ ಸಿಕ್ಕರೆ ಸಾಲದು, ಅದನ್ನು ಸಮರ್ಥವಾಗಿ ನಿರ್ವಹಿಸುವ ತರಬೇತಿ ಮತ್ತು ಮಾರ್ಗದರ್ಶನವೂ ಅಗತ್ಯ. ರಾಜ್ಯ ಸರ್ಕಾರದ ಈ ನಿರ್ಧಾರವು ಆಬಕಾರಿ ಇಲಾಖೆಯ ಇತಿಹಾಸದಲ್ಲಿ ಒಂದು ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದೆ. ಸಾಮಾಜಿಕ ನ್ಯಾಯವನ್ನು ಆಡಳಿತದ ಪ್ರತಿಯೊಂದು ಸ್ತರಕ್ಕೂ ಕೊಂಡೊಯ್ಯುವ ಸರ್ಕಾರದ ಈ ಇಚ್ಛಾಶಕ್ತಿಯು ಶ್ಲಾಘನೀಯ. ಇತರ ರಾಜ್ಯಗಳು ಈ ಮಾದರಿಯನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯ ವಿಷಯದಲ್ಲಿ ಕರ್ನಾಟಕವು ದೇಶದ ಉಳಿದ ರಾಜ್ಯಗಳಿಗೆ ಮಾರ್ಗದರ್ಶಿಯಾಗಿ ಉಳಿಯಲಿದೆ. ಈ ಆದೇಶವು ಆಬಕಾರಿ ವಲಯದಲ್ಲಿನ ಏಕಸ್ವಾಮ್ಯವನ್ನು ಮುರಿದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸ್ವಾವಲಂಬನೆಯ ದಾರಿ ತೋರಿಸಿದೆ.

Read More
Next Story