ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
x

ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ

ಬುಧವಾರ ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿ ನ್ಯಾ.ಸೂರಜ್‌ ಗೋವಿಂದರಾಜು ವಿಚಾರಣೆ ಮುಂದೂಡಿದರು.


Click the Play button to hear this message in audio format

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2025'ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯು ಹೊಸ ತಿರುವು ಪಡೆದುಕೊಂಡಿದೆ. ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

ದೇಶದ ಪ್ರಮುಖ ಇ-ಕಾಮರ್ಸ್ ಮತ್ತು ಗ್ರಾಹಕ ತಂತ್ರಜ್ಞಾನ ವೇದಿಕೆಗಳಾದ ಸ್ವಿಗ್ಗಿ, ಜೊಮ್ಯಾಟೊ (ಎಟರ್ನಲ್ ಲಿಮಿಟೆಡ್), ಝೆಪ್ಟೊ, ಅರ್ಬನ್ ಕಂಪನಿ ಮತ್ತು ವಾಲ್ಮೋ ಟ್ರಾನ್ಸ್‌ಪೋರ್ಟಷನ್ (ಮಿಶೋ) ಸಂಸ್ಥೆಗಳು ಜಂಟಿಯಾಗಿ ಹೈಕೋರ್ಟ್ ಮೆಟ್ಟಿಲೇರಿವೆ. ರಾಜ್ಯ ಸರ್ಕಾರದ ಈ ಕಾಯ್ದೆಯು ಅಸಾಂವಿಧಾನಿಕ ಎಂದು ಘೋಷಿಸಬೇಕು ಮತ್ತು ಈ ಕಾಯ್ದೆಯ ಅಡಿ ಸರ್ಕಾರ ಜಾರಿ ಮಾಡಿರುವ ಕಲ್ಯಾಣ ಶುಲ್ಕ ಪಾವತಿ ನೋಟಿಸ್‌ಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕಂಪನಿಗಳ ಪ್ರಮುಖ ವಾದ

ಕೇಂದ್ರ ಸರ್ಕಾರ ಈಗಾಗಲೇ ಸಾಮಾಜಿಕ ಭದ್ರತಾ ಸಂಹಿತೆ-2020 ಜಾರಿಗೆ ತಂದಿದೆ. ಇಡೀ ದೇಶಕ್ಕೆ ಅನ್ವಯವಾಗುವ ಕೇಂದ್ರೀಯ ಕಾನೂನು ಜಾರಿಯಲ್ಲಿರುವಾಗ, ರಾಜ್ಯ ಸರ್ಕಾರವು ಅದೇ ವಿಷಯದ ಮೇಲೆ ಸಮಾನಾಂತರ ಕಾನೂನು ರೂಪಿಸಿರುವುದು ಸಂವಿಧಾನದ ವಿಧಿ 254ರ ಅಡಿ ಕಾನೂನುಬಾಹಿರ. ಕೇಂದ್ರದ ಕಾಯ್ದೆಯಡಿ ಈಗಾಗಲೇ ಕಂಪನಿಗಳು ವಾರ್ಷಿಕ ವಹಿವಾಟಿನ ಆಧಾರದ ಮೇಲೆ ದೇಣಿಗೆ ನೀಡುತ್ತಿವೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಪ್ರತಿ ವಹಿವಾಟಿನ ಮೇಲೆ ಪ್ರತ್ಯೇಕ ಕಲ್ಯಾಣ ಶುಲ್ಕ ವಿಧಿಸುತ್ತಿರುವುದು ಉದ್ಯಮದ ಮೇಲೆ ವಿಪರೀತ ಆರ್ಥಿಕ ಹೊರೆ ಹೇರುತ್ತದೆ. ರಾಜ್ಯ ಕಾಯ್ದೆಯ ಸೆಕ್ಷನ್ 13ರ ಅಡಿ, ಕಂಪನಿಗಳು ತಮ್ಮ ಬೆಲೆ ನಿಗದಿಪಡಿಸುವ ಅಲ್ಗಾರಿದಮ್ ಮತ್ತು ಆಟೋಮೇಟೆಡ್ ವ್ಯವಸ್ಥೆಯ ಕಾರ್ಯವೈಖರಿಯನ್ನು ಬಹಿರಂಗಪಡಿಸಬೇಕಾಗುತ್ತದೆ. ಇದು ಕಂಪನಿಯ ವಾಣಿಜ್ಯ ರಹಸ್ಯ ಮತ್ತು ಸ್ವಾಮ್ಯದ ಹಕ್ಕುಗಳ ಉಲ್ಲಂಘನೆಯಾಗಿದೆ.

ಸರ್ಕಾರದ ನೋಟಿಸ್ - ಕಂಪನಿಗಳ ಅಸಮಾಧಾನ

ರಾಜ್ಯ ಸರ್ಕಾರವು ಇದುವರೆಗೆ ಗಿಗ್ ಕಾರ್ಮಿಕರಿಗಾಗಿ ಯಾವುದೇ ನಿರ್ದಿಷ್ಟ ಕಲ್ಯಾಣ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ, ಜುಲೈ 5ರ ಒಳಗಾಗಿ ಕಡ್ಡಾಯವಾಗಿ ಕಲ್ಯಾಣ ಶುಲ್ಕ ಪಾವತಿಸಬೇಕು ಮತ್ತು ತ್ರೈಮಾಸಿಕ ಲೆಕ್ಕ ಪರಿಶೋಧನೆಗೆ ಒಳಪಡಬೇಕು ಎಂದು ನೋಟಿಸ್ ಜಾರಿ ಮಾಡಿದೆ. ಇದನ್ನು ಕಂಪನಿಗಳು ತೀವ್ರವಾಗಿ ವಿರೋಧಿಸಿವೆ. ತಾವು ಈಗಾಗಲೇ ಕಾರ್ಮಿಕರಿಗೆ ಅಪಘಾತ ವಿಮೆ, ಆರೋಗ್ಯ ವಿಮೆ ಮತ್ತು ಹೆರಿಗೆ ಸೌಲಭ್ಯಗಳನ್ನು ಸ್ವಯಂಪ್ರೇರಿತರಾಗಿ ಒದಗಿಸುತ್ತಿರುವುದಾಗಿ ಕಂಪನಿಗಳು ಸ್ಪಷ್ಟಪಡಿಸಿವೆ.

ಕೇಂದ್ರದ ನಿಲುವು ಏನು?

ಕೇಂದ್ರ ಕಾರ್ಮಿಕ ಸಚಿವಾಲಯವು ಇತ್ತೀಚೆಗೆ ಸ್ಪಷ್ಟಪಡಿಸಿರುವಂತೆ, ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ರೂಪಿಸಿರುವುದು ಸಂವಿಧಾನಬದ್ಧವಲ್ಲ ಎಂಬುದು ಕಂಪನಿಗಳ ಬಲವಾದ ಪ್ರತಿಪಾದನೆ. ಈಗ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರು ವಿಚಾರಣೆಯಿಂದ ಹಿಂದೆ ಸರಿದಿರುವುದರಿಂದ, ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಬೇಕಾಗಿದೆ. ಈ ಕಾನೂನು ವಿವಾದವು ಸಾವಿರಾರು ಗಿಗ್ ಕಾರ್ಮಿಕರ ಭವಿಷ್ಯ ಮತ್ತು ಉದ್ಯಮ ವಲಯದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಂಪನಿಗಳ ಹೂಡಿಕೆಯ ಹಿತಾಸಕ್ತಿ—ಈ ಎರಡರ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಈಗ ನ್ಯಾಯಾಂಗದ ಮುಂದಿರುವ ದೊಡ್ಡ ಸವಾಲಾಗಿದೆ. ಕಾರ್ಮಿಕ ಪರ ಸಂಘಟನೆಗಳು ಸರ್ಕಾರ ರೂಪಿಸಿರುವ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇತ್ತ ಕೆಲವು ಸಂಸ್ಥೆಗಳು ಕಾನೂನಿನ ತಾಂತ್ರಿಕತೆಗಳನ್ನು ಮುಂದಿಟ್ಟುಕೊಂಡು ವಿರೋಧಿಸುತ್ತಿವೆ. ನ್ಯಾಯಾಲಯದಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಯಾವಾಗ ಆರಂಭವಾಗಲಿದೆ ಮತ್ತು ಈ ಕಾಯ್ದೆಯ ಸಿಂಧುತ್ವದ ಬಗ್ಗೆ ನ್ಯಾಯಪೀಠ ಯಾವ ತೀರ್ಪು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story