
ಒಳ ಮೀಸಲಾತಿ' ಕಾವೇರಿದ ಚರ್ಚೆ: ಮುನಿಯಪ್ಪ, ಪರಮೇಶ್ವರ್- ಮಹಾದೇವಪ್ಪ ನಡುವೆ ಜಟಾಪಟಿ?
ಒಳ ಮೀಸಲಾತಿ ವಿಚಾರದ ಬಗ್ಗೆ ಭವಿಷ್ಯದಲ್ಲಿ ಮತ್ತೊಮ್ಮೆ ಕೂಲಂಕಷವಾಗಿ ಚರ್ಚೆ ಮಾಡೋಣ ಎಂದು ಪರಮೇಶ್ವರ್ ಹೇಳಿದ ವೇಳೆ ಮೂವರೂ ಹಿರಿಯ ಸಚಿವರ ನಡುವೆ ಪರ-ವಿರೋಧದ ಚರ್ಚೆ ನಡೆಯಿತು.
ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡುವ ನಿಟ್ಟಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 'ಒಳ ಮೀಸಲಾತಿ' ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಯಿತು. ವಿವಿಧ ಇಲಾಖೆಗಳಲ್ಲಿನ 56,432 ಹುದ್ದೆಗಳ ನೇಮಕಾತಿಗೆ ಹಳೆಯ ಶೇಕಡಾ 50ರ ಮೀಸಲಾತಿಯಡಿಯೇ ಹಸಿರು ನಿಶಾನೆ ತೋರಲು ಸರ್ಕಾರ ಮುಂದಾದಾಗ, ಒಳ ಮೀಸಲಾತಿಯ ಕುರಿತಾಗಿ ಹಿರಿಯ ಸಚಿವರುಗಳ ನಡುವೆ ಏರುಧ್ವನಿಯ ಜಟಾಪಟಿಯೇ ನಡೆಯಿತು. ವಿಶೇಷವಾಗಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್ ಹಾಗೂ ಎಚ್.ಸಿ. ಮಹಾದೇವಪ್ಪ ಅವರ ನಡುವೆ ತೀವ್ರ ವಾಕ್ಸಮರ ನಡೆಯಿತು ಎಂದು ತಿಳಿದುಬಂದಿದೆ.
ಮುನಿಯಪ್ಪ ಪಟ್ಟು
ನೇಮಕ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಳ ಮೀಸಲಾತಿ ಪ್ರಸ್ತಾಪವನ್ನು ತೀವ್ರವಾಗಿ ಸಮರ್ಥಿಸಿಕೊಂಡರು. ಕೋರ್ಟ್ ಸೂಚನೆಯಂತೆ ಶೇಕಡಾ 56ರ ಬದಲು ಶೇಕಡಾ 50ರ ಮೀಸಲಾತಿಯಡಿಯಲ್ಲೇ ನೇಮಕಾತಿ ಮಾಡುವುದಾದರೆ, ಅದೇ ಮಿತಿಯೊಳಗೆ (ಪರಿಶಿಷ್ಟ ಜಾತಿಯ ಶೇ. 15ರ ಕೋಟಾದಲ್ಲಿ) ಒಳ ಮೀಸಲಾತಿಯನ್ನು ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅವರು ಪಟ್ಟು ಹಿಡಿದರು. ಒಳ ಮೀಸಲಾತಿಯನ್ನು ಕೈಬಿಟ್ಟು ನೇಮಕಾತಿ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಮುನಿಯಪ್ಪ ಏರುಧ್ವನಿಯಲ್ಲಿ ವಾದ ಮಂಡಿಸಿದರು.
ಮತ್ತೊಮ್ಮೆ ಚರ್ಚಿಸೋಣ ಎಂದ ಪರಮೇಶ್ವರ್ ಮತ್ತು ಮಹಾದೇವಪ್ಪ
ಮುನಿಯಪ್ಪ ಅವರ ಪಟ್ಟಿಗೆ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಎಚ್.ಸಿ. ಮಹಾದೇವಪ್ಪ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಳ ಮೀಸಲಾತಿ ಜಾರಿಯು ಕಾನೂನಾತ್ಮಕವಾಗಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಏಕಾಏಕಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸದ್ಯಕ್ಕೆ ಹುದ್ದೆಗಳ ಭರ್ತಿ ಅತ್ಯಗತ್ಯವಾಗಿರುವುದರಿಂದ ಹಳೆಯ ಪದ್ಧತಿಯಂತೆಯೇ ನೇಮಕಾತಿ ನಡೆಯಲಿ. ಒಳ ಮೀಸಲಾತಿ ವಿಚಾರದ ಬಗ್ಗೆ ಭವಿಷ್ಯದಲ್ಲಿ ಮತ್ತೊಮ್ಮೆ ಪ್ರತ್ಯೇಕವಾಗಿ, ಕೂಲಂಕಷವಾಗಿ ಚರ್ಚೆ ಮಾಡೋಣ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಈ ವೇಳೆ ಮೂವರೂ ಹಿರಿಯ ಸಚಿವರ ನಡುವೆ ಪರ-ವಿರೋಧದ ಬಿಸಿಬಿಸಿ ಚರ್ಚೆ ನಡೆಯಿತು.
ನೇಮಕಾತಿ ಒತ್ತಡದಲ್ಲಿ ನಾವಿದ್ದೇವೆ: ಸಂತೋಷ್ ಲಾಡ್
ಸಚಿವರ ನಡುವಿನ ಜಟಾಪಟಿಯ ನಡುವೆ ಮಧ್ಯಪ್ರವೇಶಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ರಾಜ್ಯದ ನಿರುದ್ಯೋಗಿ ಯುವಜನತೆಯ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಇತ್ತೀಚೆಗಷ್ಟೇ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿ, ನಮಗೆ 'ಗೋ ಬ್ಯಾಕ್' ಘೋಷಣೆ ಕೂಗಿದ್ದನ್ನು ನಾವು ಕೇಳಿದ್ದೇವೆ. ಯುವಕರು ನಮ್ಮ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ನಾವು ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಆರಂಭಿಸಲೇಬೇಕಾದ ತೀವ್ರ ಒತ್ತಡದಲ್ಲಿ ಇದ್ದೇವೆ. ಮೀಸಲಾತಿ ಗೊಂದಲಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ, ತಕ್ಷಣವೇ ನೇಮಕಾತಿಗೆ ಚಾಲನೆ ನೀಡುವುದು ಅನಿವಾರ್ಯ ಎಂದು ಲಾಡ್ ವಿವರಿಸಿದರು. ಅಂತಿಮವಾಗಿ, ಒಳ ಮೀಸಲಾತಿಯನ್ನು ಕೈಬಿಟ್ಟು ಹಳೆಯ ಪದ್ಧತಿಯಂತೆ ನೇಮಕಾತಿಗೆ ಸಂಪುಟ ಒಪ್ಪಿಗೆ ಸೂಚಿಸಿತು.

