
ಮಾದಕದ್ರವ್ಯ ಹಾಗೂ ಅಂಗಾಂಗ ದಾನ (ಸಾಂದರ್ಭಿಕ ಚಿತ್ರ)
ವ್ಯಸನಮುಕ್ತ ಕರ್ನಾಟಕ|ಅಂಗಾಂಗ ದಾನದಲ್ಲಿ ರಾಜ್ಯಕ್ಕೆ 3ನೇ ಸ್ಥಾನ
ಮಾದಕ ವ್ಯಸನ ದೊಡ್ಡ ಸವಾಲಾಗಿದೆ. ಇದರಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಮಾನಸಿಕ ಮತ್ತು ದೈಹಿಕ ಸಮಸ್ಯೆಯಾಗುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಗೆಳೆಯರ ಒತ್ತಾಯಕ್ಕೋ, ಚಿಕ್ಕವಯಸ್ಸಿನಲ್ಲಿನ ಕುತೂಹಲಕ್ಕೋ ಪ್ರಾಂಭವಾಗುವ ಹವ್ಯಾಸ ನಂತರ ವ್ಯಸನವಾಗಿ ಬದಲಾಗುತ್ತದೆ. ಪೋಷಕರು ಮಕ್ಕಳ ಚಲನವಲನಗಳ ಮೇಲೆ ಗಮನಹರಿಸಬೇಕು. ವ್ಯಸನಮುಕ್ತ ಕರ್ನಾಟಕ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಸಚಿವ ಆರ್. ಗುಂಡೂರಾವ್ ತಿಳಿಸಿದರು.
ಬುಧವಾರ(ಫೆ.11) ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿದ್ದ ನಶಾಮುಕ್ತ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, " ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಅತಿ ಅಗತ್ಯ. ಮಾದಕ ವ್ಯಸನ ದೊಡ್ಡ ಸವಾಲಾಗಿದೆ. ಇದರಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಮಾನಸಿಕ ಮತ್ತು ದೈಹಿಕ ಸಮಸ್ಯೆಯಾಗುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ" ಎಂದರು.
ಇತ್ತೀಚೆಗೆ ಮಂಗಳೂರಿನಲ್ಲಿ ಮಾದಕ ವ್ಯಸನದ ವಿರುದ್ಧ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಸುಮಾರು 10 ಸಾವಿರ ಜನರು ಭಾಗವಹಿಸಿದ್ದರು. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಇವೆಲ್ಲದರ ಕುರಿತು ಜಾಗೃತಿ ಮೂಡಿಸಬೇಕು. ನಮ್ಮ ಇಲಾಖೆಯು ಈ ಕುರಿತು ಸಂಪೂರ್ಣ ಬೆಂಬಲ ನೀಡಲಿದ ಎಂದು ಹೇಳಿದರು.
ಅಂಗಾಂಗ ದಾನದಲ್ಲಿ ರಾಜ್ಯಕ್ಕೆ 3ನೇ ಸ್ಥಾನ
2025ರಲ್ಲಿ ಕರ್ನಾಟಕವು ದಾಖಲೆಯ 198 ಅಂಗಾಂಗ ದಾನಗಳನ್ನು ಪೂರೈಸುವ ಮೂಲಕ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆಯಬೇಕು. ಅಂಗಾಗ ದಾನ ಮಾಡುವವರ ಕುಟುಂಬಗಳನ್ನು ಸಿಎಂ ಸ್ವಾತಂತ್ರ್ಯ ದಿನಾಚರನೆಯಂದು ಸನ್ಮಾನಿಸುತ್ತಾರೆ. ಇದರಿಂದ ಸಾಮಾಜಿಕ ಜಾಗೃತಿ ಮೂಡುತ್ತದೆ. ಸರ್ಕಾರಿ ಆಸ್ಪತ್ರೆಗಳು ಅಂಗಾಂಗ ಕಸಿ ಮಾಡುವ ಸೆಂಟರ್ ಆಗಬೇಕು. ಇದರ ಕುರಿತು ನಿರಂತರ ಚಿಂತನೆ, ಚರ್ಚೆ ಮಾಡುತ್ತಿದ್ದೇವೆ. ಮೆಡಿಸನ್ ದುರುಪಯೋಗ ತಡೆಯಲು ಸೂಕ್ತ ನಿಯಮ ರೂಪಿಸಿ, ಸದಾ ನಿಗಾ ಇಡುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಬಳ್ಳಾರಿಗೆ ಅಗ್ರ ಸ್ಥಾನ
ಅಂಗಾಂಗ ದಾನಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದೆ. ಧಾರವಾಡ ಜಿಲ್ಲೆಯು ಸಹ ನೋಂದಣಿ ಮತ್ತು ದಾನದ ಜಾಗೃತಿಯಲ್ಲಿ ಮುಂಚೂಣಿಯಲ್ಲಿದೆ.

