
ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಕೆಳಮನೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ
ಸಾರ್ವಜನಿಕವಾಗಿ ಅತ್ಯಂತ ತುರ್ತು ಚರ್ಚೆಯ ವಿಷಯಗಳನ್ನು ನಿಲುವಳಿ ಸೂಚನೆ ಅಡಿಯಲ್ಲೇ ಚರ್ಚಿಸಬೇಕು. ಆದರೆ ಸಾರ್ವಜನಿಕ ಮಹತ್ವದ ವಿಚಾರವಾಗಿ ಪರಿವರ್ತಿಸಲಾಗುತ್ತಿದೆ ಎಂಬುದು ಪ್ರತಿಪಕ್ಷ ಆರೋಪವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧಿಗಳ ಅಭಾವ ಹಾಗೂ ಆಂಬುಲೆನ್ಸ್ ಸೇವೆಗಳ ವೈಫಲ್ಯದಿಂದಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಲಾಪದಲ್ಲಿ ಆರೋಗ್ಯ ಇಲಾಖೆಯ ಅವ್ಯವಸ್ಥೆಗಳ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್. ಅಶೋಕ್, "ರಾಜ್ಯದ ಆರೋಗ್ಯ ಇಲಾಖೆಯು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ನಿಲುವಳಿ ಸೂಚನೆಯ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು" ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದರು.
"ಸಾರ್ವಜನಿಕವಾಗಿ ಅತ್ಯಂತ ಮಹತ್ವದ ಮತ್ತು ತುರ್ತು ಚರ್ಚೆಯ ಅಗತ್ಯವಿರುವ ವಿಷಯಗಳನ್ನು ನಿಲುವಳಿ ಸೂಚನೆಯ ಅಡಿಯಲ್ಲೇ ಚರ್ಚಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಗಂಭೀರ ವಿಷಯಗಳನ್ನು ಏಕಾಏಕಿ ಸಾರ್ವಜನಿಕ ಮಹತ್ವದ ವಿಚಾರವನ್ನಾಗಿ (ನಿಯಮ 69ರ ಅಡಿ) ಪರಿವರ್ತಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ವಿಷಯದ ತೀವ್ರತೆ ಮತ್ತು ಗಂಭೀರತೆ ಕಡಿಮೆಯಾಗುತ್ತದೆ. ಮುಖ್ಯಮಂತ್ರಿಯವರು ಅಥವಾ ಸಂಬಂಧಪಟ್ಟ ಸಚಿವರು ಯಥಾರೀತಿ ಉತ್ತರ ನೀಡಿ ಹೋಗುತ್ತಾರೆ. ಇದರಿಂದ ಬಡವರಿಗೆ ಯಾವುದೇ ನ್ಯಾಯ ಸಿಗುವುದಿಲ್ಲ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ರಾಜಕೀಯ ಪ್ರೇರಿತ ಅಥವಾ ಒತ್ತಡದ ವಿಚಾರಗಳಿದ್ದರೆ ಬೇಕಿದ್ದರೆ ಅಂತಹವುಗಳನ್ನು ಪರಿವರ್ತನೆ ಮಾಡಿ. ಆದರೆ, ಬಡವರ ಪ್ರಾಣಕ್ಕೆ ಸಂಬಂಧಿಸಿದ, ಆರೋಗ್ಯ ಇಲಾಖೆಯ ಹದಗೆಟ್ಟ ಸ್ಥಿತಿಯಂತಹ ಜನರ ನೇರ ಸಮಸ್ಯೆಗಳಿದ್ದಾಗ ಅದನ್ನು ಪ್ರಾಥಮಿಕ ವಿಷಯ ಮಂಡನೆಗೆ ಅವಕಾಶ ಮಾಡಿಕೊಡಿ," ಎಂದು ಕೋರಿದರು.
ಸಚಿವರು ಆರೋಗ್ಯವಾಗಿದ್ದಾರೆ... ಇಲಾಖೆ ಅನಾರೋಗ್ಯದಲ್ಲಿದೆ..
"ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದೈಹಿಕವಾಗಿ ತುಂಬಾ ಆರೋಗ್ಯವಾಗಿದ್ದಾರೆ. ಆದರೆ ಅವರ ನೇತೃತ್ವದ ಆರೋಗ್ಯ ಇಲಾಖೆ ಮಾತ್ರ ತೀವ್ರ ಅನಾರೋಗ್ಯಕ್ಕೆ ಈಡಾಗಿದೆ," ಎಂದು ಲೇವಡಿ ಮಾಡಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ನೈಜ ಸ್ಥಿತಿಯನ್ನು ಸದನಕ್ಕೆ ವಿವರಿಸಿದ ಅವರು, "ಇಂದು ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋದರೂ ಅಲ್ಲಿ ಅಗತ್ಯ ಔಷಧಿಗಳು ಸಿಗುತ್ತಿಲ್ಲ. ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಕೇವಲ ವಿರೋಧ ಪಕ್ಷದವರು ಮಾತ್ರವಲ್ಲ, ಸ್ವತಃ ವೈದ್ಯಕೀಯ ಸಂಘದ ಪದಾಧಿಕಾರಿಗಳೇ ಔಷಧಿಗಳ ಕೊರತೆ ಇರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ಪ್ಯಾರಸಿಟಮಾಲ್‌ನಂತಹ ಪ್ರಾಥಮಿಕ ಮಾತ್ರೆಗಳಿಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ," ಎಂದು ದೂರಿದರು.
"ಔಷಧಿ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದಾಗ ರೋಗಿಗಳು ಮತ್ತು ಅವರ ಸಂಬಂಧಿಕರು ಅಲ್ಲಿರುವ ವೈದ್ಯರು ಹಾಗೂ ನರ್ಸ್‌ಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರಿಂದ ವೈದ್ಯಕೀಯ ಸಿಬ್ಬಂದಿಯ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ವೈದ್ಯರು ಮತ್ತು ಸಾರ್ವಜನಿಕರ ನಡುವೆ ನಿರಂತರ ಸಂಘರ್ಷಗಳು ನಡೆಯುತ್ತಿವೆ. ಈ ಎಲ್ಲಾ ಗೊಂದಲಗಳಿಗೆ ಸರ್ಕಾರದ ನಿಷ್ಕ್ರಿಯತೆಯೇ ಕಾರಣ. ಸರ್ಕಾರವು ರಾಜ್ಯದ ಸುಮಾರು 210 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಸದ್ದಿಲ್ಲದೆ ಸಿದ್ಧತೆ ನಡೆಸಿದೆ. ಹಳ್ಳಿಗಳಲ್ಲಿ ಬಡವರಿಗೆ ಆಧಾರವಾಗಿರುವ ಈ ಕೇಂದ್ರಗಳನ್ನು ಮುಚ್ಚಿದರೆ ಗ್ರಾಮೀಣ ಭಾಗದ ಜನರ ಆರೋಗ್ಯದ ಗತಿ ಏನು?" ಎಂದು ಪ್ರಶ್ನಿಸಿದರು.
ಆರೋಗ್ಯ ತುರ್ತು ಪರಿಸ್ಥಿತಿಯ ಆತಂಕ
ಬಿಜೆಪಿಯ ಸದಸ್ಯ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, "ರಾಜ್ಯದಲ್ಲಿ ಪ್ರಸ್ತುತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆಂಬುಲೆನ್ಸ್ ಸೇವೆಗಳು ಸಕಾಲಕ್ಕೆ ಸಿಗುತ್ತಿಲ್ಲ. ಡಯಾಲಿಸಿಸ್ ಕೇಂದ್ರಗಳಲ್ಲಿ ಸಮಸ್ಯೆಗಳಿವೆ ಮತ್ತು ಆಸ್ಪತ್ರೆಗಳ ನಿರ್ವಹಣೆಗೆ ಅನುದಾನದ ಕೊರತೆಯಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಲಿದೆ," ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ವಾಗ್ದಾಳಿಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, "ಸರ್ಕಾರವು ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಯಾವುದೇ ಸಮಯದಲ್ಲೂ ಸಿದ್ಧವಿದೆ. ಇಲಾಖೆಯಲ್ಲಿ ಆಗಿರುವ ಸುಧಾರಣೆಗಳು ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಾವು ಮುಕ್ತವಾಗಿ ಮಾತನಾಡುತ್ತೇವೆ. ಈ ವಿಷಯದ ಗಂಭೀರತೆಯನ್ನು ಗಮನಿಸಿ ಪ್ರತ್ಯೇಕವಾಗಿ ಸುದೀರ್ಘ ಚರ್ಚೆಗೆ ಸಮಯ ನಿಗದಿಪಡಿಸಿ," ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, "ಆರೋಗ್ಯ ಇಲಾಖೆಯ ಸಮಸ್ಯೆಗಳ ಕುರಿತು ಚರ್ಚಿಸಲು ಸದನದಲ್ಲಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗುವುದು. ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ಚರ್ಚೆಗೆ ನೀಡಿ, ಸಚಿವರಿಂದ ಸಮಗ್ರ ಉತ್ತರ ಕೊಡಿಸಲಾಗುವುದು," ಎಂದು ಹೇಳುವ ಮೂಲಕ ಚರ್ಚೆಯನ್ನು ಇತ್ಯರ್ಥಗೊಳಿಸಿದರು.

