ಐಪಿಎಸ್‌ ಅಧಿಕಾರಿಗೆ ಬೆದರಿಕೆ ಪ್ರಕರಣ: ಮಧ್ಯಸ್ಥಿಕೆದಾರರ ನೇಮಕಕ್ಕೆ ಒಪ್ಪಿದ ಎಚ್‌ಡಿಕೆ, ಮುಖಾಮುಖಿ ಭೇಟಿಗೆ ನಕಾರ
x
ಸಂಗ್ರಹ ಚಿತ್ರ.

ಐಪಿಎಸ್‌ ಅಧಿಕಾರಿಗೆ ಬೆದರಿಕೆ ಪ್ರಕರಣ: ಮಧ್ಯಸ್ಥಿಕೆದಾರರ ನೇಮಕಕ್ಕೆ ಒಪ್ಪಿದ ಎಚ್‌ಡಿಕೆ, ಮುಖಾಮುಖಿ ಭೇಟಿಗೆ ನಕಾರ

ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿ, ಸಂಧಾನಕಾರರ ನೇಮಕಕ್ಕೆ ಒಲವು ತೋರಿತು.


Click the Play button to hear this message in audio format

ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಹಾಗೂ ಐಪಿಎಸ್‌ ಅಧಿಕಾರಿ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೈಕೋರ್ಟ್‌ಗೆ ವಿವರಣೆ ನೀಡಿದ್ದಾರೆ. ಪ್ರಕರಣದ ಇತ್ಯರ್ಥಕ್ಕಾಗಿ ವೃತ್ತಿಪರ ಮಧ್ಯಸ್ಥಿಕೆದಾರರ ನೇಮಕಕ್ಕೆ ತಾವು ಸಿದ್ಧರಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಸಂಧಾನದ ವೇಳೆ ಅಧಿಕಾರಿಯ ಎದುರುಬದುರು ಕೂರಲು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಬೆದರಿಕೆ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್.ಡಿ. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಸುರೇಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು. ಈ ವೇಳೆ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು, ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸಲು ಕುಮಾರಸ್ವಾಮಿ ಒಪ್ಪಿದ್ದಾರೆ. ಆದರೆ, ಮಧ್ಯಸ್ಥಿಕೆದಾರರ ಎದುರು ಐಪಿಎಸ್ ಅಧಿಕಾರಿ ಚಂದ್ರಶೇಖರ್‌ ಅವರ ಜೊತೆ ಮುಖಾಮುಖಿಯಾಗಿ ಕೂರಲು ಅವರು ಸಿದ್ಧರಿಲ್ಲ. ಬದಲಾಗಿ, ಮಧ್ಯಸ್ಥಿಕೆದಾರರು ಇಬ್ಬರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಪಡೆಯಬಹುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಧಿಕಾರಿಯ ಆತಂಕದ ಬಗ್ಗೆ ವಕೀಲರ ಪ್ರಸ್ತಾಪ

ಕುಮಾರಸ್ವಾಮಿ ಅವರ ವಾದಕ್ಕೆ ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಆದರೆ ಚಂದ್ರಶೇಖರ್ ಅವರು ಕೇವಲ ಸರ್ಕಾರಿ ಅಧಿಕಾರಿ. ಹೀಗಾಗಿ, ಈ ಪ್ರಕರಣದಲ್ಲಿ ನಮಗಿರುವ ಆತಂಕವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಇಬ್ಬರಿಗೂ ಒಪ್ಪಿಗೆಯಾಗುವಂತಹ ಸೂಕ್ತ ಮಧ್ಯಸ್ಥಿಕೆದಾರರನ್ನು ನ್ಯಾಯಾಲಯವೇ ನಿರ್ಧರಿಸಲಿದೆ. ಆ ಜವಾಬ್ದಾರಿಯನ್ನು ಕೋರ್ಟ್‌ಗೆ ಬಿಡಿ ಎಂದು ಸೂಚಿಸುವ ಮೂಲಕ ಅಧಿಕಾರಿಯ ಆತಂಕವನ್ನು ಶಮನ ಮಾಡುವ ಪ್ರಯತ್ನ ಮಾಡಿದರು.

ಸಂಧಾನ ವಿಫಲವಾದರೆ ಕೋರ್ಟ್ ಇದ್ದೇ ಇದೆ ಎಂದ ಪೀಠ

ವಿಚಾರಣೆ ವೇಳೆ ಲಘು ದಾಟಿಯಲ್ಲಿ ಮಾತನಾಡಿದ ನ್ಯಾಯಪೀಠ, ವಕೀಲರ ಬಳಿಗೆ ಹೋಗುವುದಕ್ಕಿಂತ ಮೊದಲು ಮಧ್ಯಸ್ಥಿಕೆದಾರರ ಬಳಿ ಹೋಗುವುದು ಹೆಚ್ಚು ಸೂಕ್ತ. ಒಂದು ವೇಳೆ ಅಲ್ಲಿಯೂ ಸಂಧಾನ ವಿಫಲವಾದರೆ ನ್ಯಾಯಾಲಯ ಇದ್ದೇ ಇದೆ ಎಂದು ಮಾರ್ಮಿಕವಾಗಿ ನುಡಿಯಿತು. ಹಿಂದಿನ ವಿಚಾರಣೆ ವೇಳೆಯೂ ಪೀಠವು, ಉಭಯ ಪಕ್ಷಕಾರರು ತಮ್ಮ ಸ್ವ-ಪ್ರತಿಷ್ಠೆಯನ್ನು ಬದಿಗೊತ್ತಿ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿತ್ತು. ಇದೀಗ ದೂರುದಾರ ಚಂದ್ರಶೇಖರ್‌ ಅವರ ಜೊತೆ ಸಮಾಲೋಚನೆ ನಡೆಸುವಂತೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಎಸ್‌ಪಿಪಿ) ಬಿ.ಎನ್. ಜಗದೀಶ್‌ ಅವರಿಗೆ ಸೂಚಿಸಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿದೆ.

Read More
Next Story