
ಎಚ್‌ಎಂಟಿ ಭೂ ವಿವಾದ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಈಶ್ವರ ಖಂಡ್ರೆ ತಿರುಗೇಟು
ಭೂ ಪರಿವರ್ತನೆಯಾಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡು ಅದನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಎಚ್‌ಎಂಟಿ ಸಂಸ್ಥೆಯಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಎಚ್‌ಎಂಟಿ ಕಂಪನಿಯ ಸ್ವಾಧೀನದಲ್ಲಿರುವ ಬೃಹತ್ ಭೂಮಿಯ ಒಡೆತನ ಮತ್ತು ಬಳಕೆಯ ವಿಚಾರವು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವ ಪ್ರಕ್ರಿಯೆ ಮತ್ತು ರಿಯಲ್ ಎಸ್ಟೇಟ್ ಲಾಬಿಯ ಆರೋಪಗಳ ನಡುವೆ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಎಚ್‌ಎಂಟಿ ಸಂಸ್ಥೆಯು ತನ್ನ ಸುಪರ್ದಿಯಲ್ಲಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿದೆ ಎಂಬುದು ಸಚಿವ ಈಶ್ವರ ಖಂಡ್ರೆ ಅವರ ಆರೋಪ. ಇದಕ್ಕೆ ಪ್ರತಿಯಾಗಿ, ಅರಣ್ಯ ಇಲಾಖೆ ಎಚ್‌ಎಂಟಿ ಭೂಮಿಯನ್ನು ಅತಿಕ್ರಮಣ ಮಾಡುತ್ತಿದೆ ಮತ್ತು ಈ ಮೂಲಕ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಹುನ್ನಾರ ನಡೆಸಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಈ ಆರೋಪಗಳಿಗೆ ತಿರುಗೇಟು ನೀಡಿರುವ ಸಚಿವ ಈಶ್ವರ ಖಂಡ್ರೆ, ಅರಣ್ಯ ಭೂಮಿಯನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಪ್ರತಿಪಾದಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಆರೋಪ ಏನು?
ಎಚ್ಎಂಟಿಗೆ ರಾಜ್ಯ ಅರಣ್ಯ ಇಲಾಖೆ ನೋಟಿಸ್ ನೀಡಿ ಭೂಮಿ ತೆರವು ಮಾಡಲು ಗಡುವು ವಿಧಿಸಿದೆ ಎಂಬ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈಗಾಗಲೇ ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಗಡುವು ವಿಧಿಸಿ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕೂಡ ಆಗುತ್ತದೆ. ಎಚ್ಎಂಟಿ ವಶದಲ್ಲಿರುವ 430 ಎಕರೆ ಜಮೀನು ಅರಣ್ಯ ಪ್ರದೇಶ ಆಗಿರುವುದರಿಂದ ಕೂಡಲೇ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎನ್.ರವೀಂದ್ರ ಕುಮಾರ್ ಆದೇಶ ನೀಡಿರುವುದು ನ್ಯಾಯಾಂಗ ಕಲಾಪಗಳಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೆ ಈ ಅಧಿಕಾರಿಗೆ ಅಂತಹ ಆದೇಶ ನೀಡುವ ಅಧಿಕಾರ ವ್ಯಾಪ್ತಿಯು ಇರುವುದಿಲ್ಲ. ಈ ಬಗ್ಗೆ ಹೆಚ್ಎಂಟಿ ನ್ಯಾಯಾಲಯದಲ್ಲಿಯೇ ಪ್ರಶ್ನೆ ಮಾಡುತ್ತದೆ ಎಂದು ಹೇಳಿದ್ದಾರೆ.
ಅನೇಕ ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ಎಚ್‌ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಉದ್ದೇಶದಿಂದ ಪ್ರಧಾನಿ ಮತ್ತು ಕೇಂದ್ರದ ಹಣಕಾಸು ಸಚಿವರನ್ನು ಒಪ್ಪಿಸಿ ವಿಶೇಷ ಪ್ಯಾಕೇಜ್ ತರುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೆ. ಈ ಕಾರ್ಖಾನೆಯು ನಾನು ಸಚಿವನಾಗಿರುವ ಬೃಹತ್ ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿ ಇರುವಾಗಲೇ ರಾಜ್ಯ ಸರಕಾರ ದುರುದ್ದೇಶದಿಂದ ಇಂತಹ ನೋಟಿಸ್ ಕೊಡಿಸಿದೆ ಎಂದು ಸಚಿವ ಕುಮಾರಸ್ವಾಮಿ ಆರೋಪ ಮಾಡಿದರು. ಈ ಭೂಮಿಯು ಸುಮಾರು 15 ಸಾವಿರ ಕೋಟಿ ಬೆಲೆ ಬಾಳುತ್ತದೆ ಎಂದು ಈ ಅಧಿಕಾರಿ ಮಹಾಶಯ ಆ ಭೂಮಿಗೆ ಬೆಲೆ ಕಟ್ಟಿದ್ದಾರೆ. ಅಂದ ಮೇಲೆ ಈ ಭೂಮಿಯ ಮೇಲೆ ಯಾರದೋ ಕಾಕದೃಷ್ಟಿ ಬಿದ್ದಿರಬೇಕು ಎಂಬುದು ನನ್ನ ಅನುಮಾನ. ಈಗಾಗಲೇ ಹೆಚ್ಎಂಟಿ ಭೂಮಿಯನ್ನು ಇದೇ ಸರಕಾರದ ಕೃಪೆಯಿಂದ ಅನೇಕರು ಕೊಳ್ಳೆ ಹೊಡೆದಿದ್ದಾರೆ. 175 ಎಕರೆ ಭೂಮಿಯು ಯಾವಾಗ ಮಾರಾಟವಾಯಿತು, ಎಲ್ಲಿ ನೋಂದಣಿ ಆಯಿತು ಎನ್ನುವ ಎಲ್ಲಾ ದಾಖಲೆಗಳು ನನ್ನಲ್ಲಿವೆ. ಆ ಜಾಗದಲ್ಲಿ ಯಾರು ಯಾರು ಮನೆ ಕಟ್ಟಿಕೊಂಡಿದ್ದಾರೆ, ಲೂಟಿ ಹೊಡೆದ ಭೂಮಿಯಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ದೊಡ್ಡದೊಡ್ಡ ಅಪಾರ್ಟ್ಮೆಂಟ್'ಗಳು ಬಂದಿವೆ. ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ? ಎಂದು ಕಿಡಿಕಾರಿದ್ದಾರೆ.
ಈಶ್ವರ್ ಖಂಡ್ರೆ ತಿರುಗೇಟು
ಸಚಿವ ಈಶ್ವರ ಖಂಡ್ರೆ ಅವರು ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡು ಅದನ್ನು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಎಚ್‌ಎಂಟಿ. ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64 ಎ ಅಡಿಯಲ್ಲಿ ಈ ಭೂಮಿಯನ್ನು ತೆರವುಗೊಳಿಸಲು ಕಾನೂನು ಅವಕಾಶವಿದೆ. ಒಮ್ಮೆ ಈ ಭೂಮಿ ಅರಣ್ಯ ಎಂದು ಘೋಷಣೆಯಾದ ಮೇಲೆ ಅಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ಅಥವಾ ರಿಯಲ್ ಎಸ್ಟೇಟ್ ದಂಧೆ ನಡೆಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅರಣ್ಯ ಭೂಮಿಯ ಡಿ-ನೋಟಿಫಿಕೇಶನ್‌ಗಾಗಿ ಅಕ್ರಮವಾಗಿ ಅರ್ಜಿ ಸಲ್ಲಿಸಿದ್ದ ಕೆಲವು ಅಧಿಕಾರಿಗಳನ್ನು ಸರ್ಕಾರ ಈಗಾಗಲೇ ಅಮಾನತು ಮಾಡಿದೆ. ಸರ್ಕಾರದ ಅಥವಾ ಸಚಿವ ಸಂಪುಟದ ಅನುಮತಿ ಇಲ್ಲದೆ ಅರಣ್ಯ ಭೂಮಿಯ ಮೇಲೆ ಹಕ್ಕು ಸಾಧಿಸಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅವರ ಅತಿಕ್ರಮಣ ಆರೋಪವನ್ನು ತಳ್ಳಿಹಾಕಿದ ಸಚಿವರು, ತಾವು ಅಧಿಕಾರಿಗಳೊಂದಿಗೆ ಎಚ್‌ಎಂಟಿ ಪ್ರದೇಶಕ್ಕೆ ಭೇಟಿ ನೀಡಿದಾಗ ಸ್ವತಃ ಎಚ್‌ಎಂಟಿ ಅಧಿಕಾರಿಗಳೇ ಪುಷ್ಪಗುಚ್ಛ ನೀಡಿ ಸ್ವಾಗತಿಸಿದ್ದರು ಎಂದು ನೆನಪಿಸಿದರು. ಸ್ವಾಗತಿಸಿದವರೇ ಆ ನಂತರ ಅತಿಕ್ರಮಣ ಎಂದು ದೂರುತ್ತಿರುವುದು ಹಾಸ್ಯಾಸ್ಪದ ಎಂದರು.
ಜೈವಿಕ ಉದ್ಯಾನವನ ನಿರ್ಮಾಣದ ಕನಸು
ಈ ವಿವಾದದ ಕೇಂದ್ರಬಿಂದು 444 ಎಕರೆಗಳಷ್ಟು ಬೃಹತ್ ಅರಣ್ಯ ಭೂಮಿಯಾಗಿದೆ. ಇದು 7 ಕೋಟಿ ಕನ್ನಡಿಗರ ಆಸ್ತಿ. ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ಗಿಂತಲೂ ದೊಡ್ಡದಾದ ಜೈವಿಕ ಉದ್ಯಾನವನವನ್ನು ಇಲ್ಲಿ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ಈ ಭೂಮಿಯನ್ನು 'ಶ್ವಾಸತಾಣ'ವನ್ನಾಗಿ ಸಂರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದೇ ವೇಳೆ ಎಚ್‌ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ, ಮೊದಲು ಬಳ್ಳಾರಿಯ ಎನ್‌ಎಂಡಿಸಿ ಮತ್ತು ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಮುಂದಾಗಲಿ ಎಂದು ಸಚಿವರು ಸವಾಲು ಹಾಕಿದ್ದಾರೆ. 2014ರಲ್ಲಿ ಕಾರ್ಖಾನೆ ಸ್ಥಾಪನೆಗಾಗಿ ಸಾವಿರಾರು ಎಕರೆ ಭೂಮಿ ಪಡೆದಿದ್ದರೂ, ಕಳೆದ 12 ವರ್ಷಗಳಲ್ಲಿ 50 ಸಾವಿರ ಜನರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಲ್ಲ ಎಂದಿದ್ದಾರೆ.
ಕಾನೂನು ಮತ್ತು ಸತ್ಯಾಸತ್ಯತೆ
1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕ, ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅರಣ್ಯವೇ ಎಂದು ಪರಿಗಣಿಸಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶ. ಈ ಹಿನ್ನೆಲೆಯಲ್ಲಿ ಎಚ್‌ಎಂಟಿ ಭೂಮಿಯನ್ನು ಮಾರಾಟ ಮಾಡುವುದು ಕಾನೂನುಬಾಹಿರ. ಎಚ್‌ಎಂಟಿ ತನ್ನ ಅಫಿಡವಿಟ್‌ನಲ್ಲಿ ಈ ಭೂಮಿಯ ಮೌಲ್ಯ ಸುಮಾರು 14 ಸಾವಿರ ಕೋಟಿ ರೂಪಾಯಿ ಎಂದು ಹೇಳಿಕೊಂಡಿದೆ. ಇಂತಹ ಬೆಲೆಬಾಳುವ ಆಸ್ತಿಯ ಮೇಲೆ ಯಾರ್ಯಾರ ಕಣ್ಣಿದೆ ಎಂಬುದು ಸಾರ್ವಜನಿಕವಾಗಿ ಚರ್ಚೆಯಾಗಬೇಕಾದ ವಿಷಯವಾಗಿದೆ.

