
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕರ ತಂಡ ಶಬರಿಮಲೆಗೆ ತೆರಳಿದರು.
ಇರುಮುಡಿ ಕಟ್ಟಿ ಶಬರಿಮಲೆಯತ್ತ ಕೇಂದ್ರ ಸಚಿವ ಹೆಚ್‌ಡಿಕೆ ಪ್ರಯಾಣ: ಪಡಿ ಪೂಜೆಯಲ್ಲಿ ಭಾಗಿ!
ಸೋಮವಾರ ಮಧ್ಯಾಹ್ನದ ವೇಳೆಗೆ ಪಂಪಾ ನದಿ ತೀರಕ್ಕೆ ತಲುಪಲಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ತಂಡ, ಪಂಪಾ ನದಿಯಲ್ಲಿ ಪುಣ್ಯಸ್ನಾನ ನೆರವೇರಿಸಿ ತದನಂತರ ಬೆಟ್ಟ ಹತ್ತಲಿದ್ದಾರೆ.
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಸೋಮವಾರ (ಜೂ.15) ಬೆಳಗಿನ ಜಾವವೇ ಕೇರಳದ ಕೊಚ್ಚಿ ನಗರದ ಪ್ರಸಿದ್ಧ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರು, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾಂಪ್ರದಾಯಿಕವಾಗಿ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿ, ಗುರುಸ್ವಾಮಿಗಳಿಂದ ಇರುಮುಡಿ ಕಟ್ಟು ತುಂಬಿಸಿಕೊಂಡು ಶಬರಿಮಲೆಯತ್ತ ಪ್ರಯಾಣ ಬೆಳೆಸಿದರು.
ಪಂಪಾ ಸ್ನಾನ
ಸೋಮವಾರ ಮಧ್ಯಾಹ್ನದ ವೇಳೆಗೆ ಪಂಪಾ ನದಿ ತೀರಕ್ಕೆ ತಲುಪಲಿರುವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ತಂಡ, ಪಂಪಾ ನದಿಯಲ್ಲಿ ಪುಣ್ಯಸ್ನಾನ ನೆರವೇರಿಸಿ ತದನಂತರ ಬೆಟ್ಟ ಹತ್ತಲಿದ್ದಾರೆ. ಸಂಜೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಡೆಯಲಿರುವ ಅತ್ಯಂತ ಪವಿತ್ರವಾದ 'ಪಡಿ ಪೂಜೆ'ಯಲ್ಲಿ ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ. ನಂತರ ಅಯ್ಯಪ್ಪ ಸ್ವಾಮಿಗೆ ವಿಶೇಷ 'ಪುಷ್ಪಾಭಿಷೇಕ' ನೆರವೇರಿಸಿ, ದೇಶದ ಹಾಗೂ ರಾಜ್ಯದ ಏಳಿಗೆಗಾಗಿ ಪ್ರಾರ್ಥಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿವಿಧ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.
30ಕ್ಕೂ ಹೆಚ್ಚು ಭಕ್ತರ ತಂಡ
ಕೇಂದ್ರ ಸಚಿವರ ಈ ಧಾರ್ಮಿಕ ಯಾತ್ರೆಗೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮತ್ತು ಶಾಸಕರು ಸಾಥ್ ನೀಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಸಚಿವರುಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರು, ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕರುಗಳಾದ ಮಾಗಡಿ ಮಂಜುನಾಥ್ ಹಾಗೂ ಹೆಚ್.ಎಮ್. ರಮೇಶ್ ಗೌಡ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ತಂಡ ಸಚಿವರ ಜೊತೆಯಲ್ಲಿದೆ. ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆಯೂ ಹಲವು ಬಾರಿ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆದಿದ್ದರೂ, ಕೇಂದ್ರ ಸಚಿವರಾದ ಬಳಿಕ ಕೈಗೊಂಡಿರುವ ಮೊದಲ ಪವಿತ್ರ ಯಾತ್ರೆ ಇದಾಗಿದೆ.

