ಪ್ರಿಯಾಂಕ್ ಖರ್ಗೆಗಿಂತಲೂ ಚೆನ್ನಾಗಿ ಸಂವಿಧಾನ ಅರ್ಥ ಮಾಡಿಕೊಂಡಿದ್ದೇನೆ: ಎಚ್‌ಡಿಕೆ
x

ಪ್ರಿಯಾಂಕ್ ಖರ್ಗೆಗಿಂತಲೂ ಚೆನ್ನಾಗಿ ಸಂವಿಧಾನ ಅರ್ಥ ಮಾಡಿಕೊಂಡಿದ್ದೇನೆ: ಎಚ್‌ಡಿಕೆ

ಸಂವಿಧಾನ ಗೊತ್ತಿದ್ದ ಕಾರಣಕ್ಕೆ ಕೈಗೆ ಸಿಕ್ಕ ದಾಖಲೆಯನ್ನು ಬಹಿರಂಗವಾಗಿ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Click the Play button to hear this message in audio format

ʼನಾನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗಿಂತಲೂ ಚೆನ್ನಾಗಿ ಸಂವಿಧಾನ ಅರ್ಥ ಮಾಡಿಕೊಂಡಿದ್ದೇನೆ. ಬಾಬಾ ಸಾಹೇಬರ ಆಶಯದಂತೆ ನಡೆದುಕೊಳ್ಳುವವರು ನಾವುʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊರಗೆ ಎಲ್ಲೋ ಮಾತಾಡಿದ್ದ ಗೃಹ ಸಚಿವರು ಕುಮಾರಸ್ವಾಮಿ ಅವರಿಗೆ ಸಂವಿಧಾನ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ. ಸಂವಿಧಾನ ಗೊತ್ತಿದ್ದ ಕಾರಣಕ್ಕೆ ನಾನು ನನ್ನ ಕೈಗೆ ಸಿಕ್ಕ ದಾಖಲೆಯನ್ನು ಬಹಿರಂಗವಾಗಿ ಮಾಧ್ಯಮಗೋಷ್ಠಿಯನ್ನು ಕರೆದು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೆ. ಆದರೆ ನೀವೇನು ಮಾಡುತ್ತಿದ್ದೀರಿ? ಸಿಕ್ಕಿದ ದಾಖಲೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸದೆ ಆರೋಪ ಮಾಡಿದ ಪ್ರತಿಪಕ್ಷ ನಾಯಕರನ್ನು, ನೋಟಿಸ್ ನೀಡುವುದು ಸಂವಿಧಾನ ಪಾಲನೆಯೇ? ಎಂದು ಕಿಡಿಕಾರಿದರು.

ಇದೇ ವೇಳೆ, ಪೊಲೀಸರು ತಮಗೆ ನೋಟಿಸ್ ನೀಡಿಲ್ಲ, ಕೇವಲ ವಿವರಣೆ ಕೇಳಲು ಬಂದಿದ್ದರು ಎಂದು ಸ್ಪಷ್ಟಪಡಿಸಿದ ಅವರು, “ನೋಟಿಸ್‌ಗೆ ಉತ್ತರ ನೀಡಬೇಕಿತ್ತು. ತಾವು ಶಾಸಕರಾಗಿದ್ದಾಗ ಪಿಎಸ್‌ಐ ಹಗರಣದ ವಿಚಾರದಲ್ಲಿ ನೀಡಲಾದ ನೋಟಿಸ್‌ಗೆ ಏನು ಉತ್ತರ ಕೊಟ್ಟಿದ್ದೀರಿ ಎಂಬುದನ್ನು ಒಮ್ಮೆ ತೆಗೆದು ನೋಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನ ಕುರಿತು ತಾವು ಹತ್ತು ದಿನಗಳಿಂದ ಮಾತನಾಡಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಅಸಿಸ್ಟೆಂಟ್ ಎಂಜಿನಿಯರ್‌ಗಳ ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಪ್ರಶ್ನಿಸಿದಾಗ ಸರ್ಕಾರ ದಾಖಲೆಗಳನ್ನು ತನ್ನಿ ಎಂದು ಕೇಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ಅಹಿಂದ ಮತ್ತು ದಲಿತ ರಾಜಕಾರಣದ ಆರೋಪ

ಕಾಂಗ್ರೆಸ್ ನಾಯಕರು ಯಾವಾಗಲೂ ಸಂವಿಧಾನದ ಪುಸ್ತಕವನ್ನು ಜೊತೆಯಲ್ಲೇ ಇಟ್ಟುಕೊಂಡು ಓಡಾಡುತ್ತಾ, “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಹಾಗೂ ತಾವು ದಲಿತರ ಪರ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದ ಕೇಂದ್ರ ಸಚಿವರು, ಮೈಸೂರಿನಲ್ಲಿ ನಡೆಯುತ್ತಿರುವ ಸಂವಿಧಾನ ದಿನಾಚರಣೆಯನ್ನು ಯಾರ ನಾಯಕತ್ವದಲ್ಲಿ ಆಚರಿಸಬೇಕು ಎಂಬ ಬಗ್ಗೆ ಕಳೆದ ಎರಡು ತಿಂಗಳಿನಿಂದ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆಯುತ್ತಿತ್ತು ಎಂದು ಆರೋಪಿಸಿದರು. ಕಾಂಗ್ರೆಸ್‌ಗೆ ಅಧಿಕಾರ ಇಲ್ಲದಾಗ ಮಾತ್ರ ಅಹಿಂದ ವರ್ಗ ನೆನಪಾಗುತ್ತದೆ, ಆದರೆ ಅಧಿಕಾರದಲ್ಲಿದ್ದಾಗ ಅಹಿಂದ ವರ್ಗ ನೆನಪಾಗುವುದಿಲ್ಲ ಎಂದು ದೂರಿದ ಅವರು, ಕಾಂಗ್ರೆಸ್ ಪಕ್ಷವು ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಪರಸ್ಪರ ಸಾಮರಸ್ಯವನ್ನು ಕೆಡಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಸಾಧನೆ ಮತ್ತು ಸಂವಿಧಾನದ ಮಹತ್ವ

ಭಾರತದ ಸಂವಿಧಾನವು ಜಗತ್ತಿಗೆ ಮಾದರಿಯಾಗಿದ್ದು, ಈ ದಿನಾಚರಣೆಯು ಸಂವಿಧಾನದ ಮೇಲೆ ತಾವಿಟ್ಟಿರುವ ಗೌರವವನ್ನು ತೋರಿಸುವ ಜವಾಬ್ದಾರಿಯಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಜೆಡಿಎಸ್ ಪಕ್ಷಕ್ಕೆ ಸಿಕ್ಕ ಕಡಿಮೆ ಅವಧಿಯ ಅಧಿಕಾರದಲ್ಲಿಯೇ ಎಲ್ಲಾ ವರ್ಗದ ಜನರನ್ನು ಗುರುತಿಸುವ ಕೆಲಸ ಮಾಡಲಾಗಿದೆ ಎಂದು ಪ್ರತಿಪಾದಿಸಿದ ಅವರು, ಮೀಸಲಾತಿ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲೇ ಹೆಚ್.ಡಿ. ದೇವೇಗೌಡರು ಹಾಸನದಲ್ಲಿ ದಲಿತ ಯುವಕನೊಬ್ಬನನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಸ್ಮರಿಸಿದರು. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕಾದರೆ ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂಬ ದೇವೇಗೌಡರ ಮಾತನ್ನು ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

Read More
Next Story