
ನೈಸ್ ಟೇಕ್ ಓವರ್ ಹಿಂದೆ ಯಾರಿದ್ದಾರೆ? ಸಿಎಂ ಉತ್ತರಿಸಲಿ: ಕುಮಾರಸ್ವಾಮಿ ಆಕ್ರೋಶ
ನೈಸ್ ಕಂಪನಿಯ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ, ರೈತರ ಭೂಮಿಯನ್ನು ಲೂಟಿ ಮಾಡಿರುವ ಯೋಜನೆ ಇದೀಗ ಹೊಸ ಮಾಲೀಕರ ಕೈಗೆ ಹೋಗುವ ಹಂತದಲ್ಲಿದೆ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಸದ್ದು ಮಾಡುತ್ತಿರುವ 'ನೈಸ್' ಯೋಜನೆ ಮತ್ತೊಮ್ಮೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಳೆನರಸೀಪುರದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನೈಸ್ ಯೋಜನೆಯನ್ನು ಯಾರೋ ಒಬ್ಬರು ಟೇಕ್ ಓವರ್ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ನೈಸ್ ಕಂಪನಿಯ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ, ರಾಜ್ಯದ ರೈತರ ಭೂಮಿಯನ್ನು ಲೂಟಿ ಮಾಡಿರುವ ಈ ಯೋಜನೆ ಇದೀಗ ಹೊಸ ಮಾಲೀಕರ ಕೈಗೆ ಹೋಗುವ ಹಂತದಲ್ಲಿದೆ. ಈ ಟೇಕ್ ಓವರ್ ಪ್ರಕ್ರಿಯೆಯ ಹಿಂದೆ ರಾಜ್ಯ ಸರ್ಕಾರದ ಪ್ರಭಾವಿ ನಾಯಕರ ಕೈವಾಡವಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ, ಈ ಯೋಜನೆಯನ್ನು ನೈಸ್ ಕಂಪನಿಯಿಂದ ಬೇರೆಯವರು ಟೇಕ್ ಓವರ್ ಮಾಡಲು ಹೊರಟಿದ್ದಾರೆ. ಆ ವ್ಯಕ್ತಿ ಯಾರು? ಈ ಸರ್ಕಾರದಲ್ಲಿರುವವರಿಗೆ ಇದರಲ್ಲಿ ಪಾಲಿದೆಯೇ? ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರ ದುರುಪಯೋಗ
"ಮುಂದಿನ ಏಳು ತಲೆಮಾರುಗಳು ಖರ್ಚು ಮಾಡಿದರೂ ಮುಗಿಯದಷ್ಟು ಆಸ್ತಿ ಮಾಡಿದ್ದೇನೆ ಎಂದು ಹೇಳುವ ಇವರು, ಆಸ್ತಿ ಗಳಿಕೆಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹರಿಶ್ಚಂದ್ರನಂತೆ ಮಾತನಾಡುತ್ತಾ, ಅಂತರಾಳದಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ವೇದಿಕೆ ಮೇಲೆ ವಿನಯದ ಭಾಷಣ ಮಾಡುವುದು, ಆದರೆ ಒಳಗೆ ನಡೆಯುತ್ತಿರುವುದು ಬೇರೆಯೇ ವ್ಯವಹಾರ. ಇವರ ಹುಟ್ಟುಗುಣ ಬದಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಮೌನ
ನೈಸ್ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಹೈಕೋರ್ಟ್ ಈಗಾಗಲೇ ಹಲವು ಬಾರಿ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಟೋಲ್ ಸಂಗ್ರಹದಲ್ಲಿನ ಅಕ್ರಮ ಮತ್ತು ಒಪ್ಪಂದದ ನಿಯಮಗಳ ಉಲ್ಲಂಘನೆ ಬಗ್ಗೆ ನ್ಯಾಯಾಲಯವೇ ತರಾಟೆಗೆ ತೆಗೆದುಕೊಂಡಿದ್ದರೂ, ಸರ್ಕಾರ ಮಾತ್ರ ಈ ಕಂಪನಿಗೆ ಮಣಿದಿದೆ. ನೈಸ್ ಕಂಪನಿಗೆ ಈ ಸರ್ಕಾರ ಶರಣಾಗಿದೆ. ರಾಜ್ಯದ ಸಂಪತ್ತನ್ನು ಉಳಿಸುವ ಬದಲು, ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ನಾನು ಸರ್ಕಾರಕ್ಕೆ ಪತ್ರ ಬರೆದು, ನ್ಯಾಯಾಲಯದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಜರುಗಿಸಿ ಎಂಬುದಾಗಿ ಕೇಳಿದ್ದೇನೆ. "ಸರ್ಕಾರದ ಮುಖ್ಯಸ್ಥರಾಗಿ ನೀವು ಇದನ್ನು ಸರ್ಕಾರಕ್ಕೆ ವಹಿಸಿಕೊಳ್ಳುತ್ತಿದ್ದೀರಾ ಅಥವಾ ನಿಮ್ಮದೇ ಕಂಪನಿಗಳಿಗೆ ಟೇಕ್ ಓವರ್ ಮಾಡಿಸಿಕೊಳ್ಳುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
ಬಿಎಂಐಸಿ ರಸ್ತೆ: ಇತಿಹಾಸದ ಕರಾಳ ಅಧ್ಯಾಯ
ನೈಸ್ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ನಡೆದಿರುವ ಅಕ್ರಮಗಳ ಬಗ್ಗೆ ಸಚಿವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ ತೀರ್ಪುಗಳನ್ನು ಪಡೆಯಲಾಗಿದೆ. 30 ವರ್ಷ ಕಳೆದರೂ 111 ಕಿಲೋಮೀಟರ್ ರಸ್ತೆಯನ್ನು ಸಂಪೂರ್ಣಗೊಳಿಸಿಲ್ಲ. ಇಡೀ ಯೋಜನೆಯ ಉದ್ದೇಶ ರಸ್ತೆ ನಿರ್ಮಾಣವಲ್ಲ, ಬದಲಾಗಿ ಬೆಂಗಳೂರಿನ ಸುತ್ತಮುತ್ತಲ ಬೆಲೆಬಾಳುವ ಭೂಮಿಯನ್ನು ಲಪಟಾಯಿಸುವುದು ಮಾತ್ರ. ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಾನೂನುಬದ್ಧವಾಗಿ ನಡೆಯುತ್ತಿದ್ದ ಯೋಜನೆ, ನಂತರದ ದಿನಗಳಲ್ಲಿ ಲೂಟಿಯ ತಾಣವಾಯಿತು. ನೈಸ್ ಯೋಜನೆಯ ಅಕ್ರಮಗಳ ವಿರುದ್ಧ ಹೋರಾಡುವುದು ನಮ್ಮ ಕುಟುಂಬದ ಜವಾಬ್ದಾರಿ. ಅಧಿಕಾರ ದುರುಪಯೋಗದ ವಿಷಯದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ. ರಾಜ್ಯದ ಜನತೆಯ ಆಸ್ತಿಯಾದ ಭೂಮಿಯನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

