
ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರಿಲ್ಲ; ಕೃಷ್ಣಾ ನದಿ ನೀರೇ ಗತಿಯೆಂದ ಎಚ್‌ಡಿಕೆ
ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಬಿಜೆಪಿ ಜತೆ ಮಾತುಕತೆ ಆಗಿಲ್ಲ. ಇನ್ನೂ ಸಮಯ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಬರುವುದಿಲ್ಲ. ಬದಲಿಗೆ ಹಣದ ಹೊಳೆ ಹರಿದಿದೆ. ಈ ಎರಡೂ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸುವ ಸಂಬಂಧ ಬಗ್ಗೆ ಶೀಘ್ರವೇ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಚರ್ಚೆ ನಡೆಸುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೋಲಾರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ, ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಹೇಳಿದರು.
ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದ ಮಲ್ಲೇಶ್ ಬಾಬು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಅವತ್ತೇ ಹೇಳಿದ್ದೆ. ಇಲ್ಲಿ ನೀರು ಸಿಗುವುದಿಲ್ಲ, ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದೆ. ಆದರೂ, ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದವರು ಇಂದಿಗೂ ಹನಿ ನೀರು ಹರಿಸಿಲ್ಲ. ಬದಲಿಗೆ 30 ಸಾವಿರ ಕೋಟಿ ನೀರಿನಂತೆ ಹರಿದಿದೆ. ಎತ್ತಿನಹೊಳೆಯಿಂದ ಎರಡು ವರ್ಷಗಳಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದು ಹೇಳಿದ್ದೆ. ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಲೇವಡಿ ಮಾಡಿದರು.
ನೀರು ಕೊಡುವುದಾಗಿ ಹೇಳಿ ಹತ್ತು ವರ್ಷ ಕಳೆದು ಹೋಯಿತು. ಆ ಯೋಜನೆ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎಂಬುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಡಲಾಗಿದೆ. ಕಳಪೆ ಕಾಮಗಾರಿಯಾಗಿ ಹಣ ದುರುಪಯೋಗವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ 30 ಸಾವಿರ ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ. ಇದೆಲ್ಲಾ ನಮ್ಮ ಶ್ರೀನಿವಾಸಪುರದ ಬುದ್ದಿವಂತ ಮಾಜಿ ಶಾಸಕರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಚರಂಡಿ ನೀರೇ ನೀರಿನಿಂದ ಸಮಸ್ಯೆ
ಬೆಂಗಳೂರಿನ ರೊಚ್ಚು ನೀರಿನಿಂದಾಗಿ ಸಣ್ಣ ಮಕ್ಕಳು ಕೂಡ ಕಾಯಿಲೆಗೆ ತುತ್ತಾಗುತ್ತಿವೆ. ನದಿಯ ನೀರು ಕೊಡುತ್ತೇವೆ ಎಂದವರು ರೊಚ್ಚು ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು?, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ! ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಇನ್ನು ಎಷ್ಟು ದಿನ ಬೇಕು?, ಎಷ್ಟು ದಿನ ಹೀಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತೀರಿ?, ನಾಡಿನ ಜನರು 140 ಶಾಸಕರನ್ನು ಗೆಲ್ಲಿಸಿ ಕೊಟ್ಟು ಕೆಲಸ ಮಾಡಿ ಎಂದು ಹೇಳಿದರೆ ಕುರ್ಚಿ ಕಿತ್ತಾಟ ನಡೆಸುತ್ತಿದ್ದಾರೆ. ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಾರೆ. ರಾಜ್ಯದ ಕೆಲಸಗಳಿಗೆ ಸಂಬಂಧಿಸಿ ಈವರೆಗೂ ಸಿಎಂ, ಡಿಸಿಎಂ ಸೇರಿ ಯಾವೊಬ್ಬ ಸಚಿವರು ನಮ್ಮನ್ನು ಭೇಟಿ ಮಾಡಿಲ್ಲ. ಆದರೂ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಮ್ಮ ಪ್ರಯತ್ನದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂದ್ರ ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡಿದೆ. ತಂಬಾಕು ಬೆಳೆಗಾರರ ಹಿತರಕ್ಷಣೆ ಮಾಡಿದ್ದೇವೆ. ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ್ದೇವೆ ಎಂದು ಹೇಳಿದರು.
ರಮೇಶ್ ಕುಮಾರ್ ಗೆ ನೋಟಿಸ್; ನನಗೆ ಸಂಬಂಧವಿಲ್ಲ
ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೋಟಿಸ್ ನೀಡಿರುವುದಕ್ಕೂ ನನಗೂ ಸಂಬಂಧವೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಬಿಡದಿಯಲ್ಲಿ ನನಗೂ ನೋಟಿಸ್ ಕೊಟ್ಟು ಸರ್ಕಾರವು ಕೊಡಬಾರದ ಕಾಟ ನೀಡುತ್ತಿದೆ. ಅದಕ್ಕೆ ರಮೇಶ್ ಕುಮಾರ್ ಅವರು ಕಾರಣ ಎಂದು ಹೇಳಿದರೆ ಆಗುತ್ತದೆಯೇ?, ನನ್ನ ವಿಚಾರಕ್ಕೆ ಎಸ್ ಐಟಿ ರಚನೆ ಮಾಡಿದ್ದಾರೆ. ಅವರ ವಿಚಾರಕ್ಕೆ ಯಾಕೆ ರಚನೆ ಮಾಡಿಲ್ಲ ಎಂದು ಕಿಡಿಕಾರಿದರು.
ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ
ಮಂಡ್ಯ ಅಥವ ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಮಾತುಕತೆ ಆಗಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಬಿಜೆಪಿಯೊಂದಿಗೆ ಪರಸ್ಪರ ಮಾತಿನ ಮೂಲಕ ಎಲ್ಲವನ್ನು ತೀರ್ಮಾನ ಕೈಗೊಳ್ಳುತ್ತೇವೆ. ನಮ್ಮ ಮೊದಲ ಆದ್ಯತೆ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಗಮನ ನೀಡಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.

