ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಲ್ಲ;  ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ
x

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಲ್ಲ; ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ

ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಅನೇಕ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ರಾಜಕೀಯ ಭಿನ್ನಮತ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.


Click the Play button to hear this message in audio format

ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯಕ್ಕೆ ಒಳ್ಳೆದಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ಎಂದೆಂದಿಗೂ ರಾಜ್ಯ ಸರ್ಕಾರದ ಜತೆಗೆ ನಿಲ್ಲುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಉದ್ಗಾಟಿಸಿ ಮಾತನಾಡಿದ ಅವರು, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಅನೇಕ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ರಾಜಕೀಯ ಭಿನ್ನಮತ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನನ್ನ ಕಡೆಯಿಂದ ಏನೇ ಕೆಲಸ ಆಗಬೇಕಿದ್ದರೂ ಯಾರೇ ಆಗಲಿ ನನ್ನನ್ನು ಮುಕ್ತವಾಗಿ ಸಂಪರ್ಕಿಸಬಹುದು. ರಾಜ್ಯಕ್ಕೆ ಒಳ್ಳೆಯದು ಮಾಡುವುದು ನನ್ನ ಕರ್ತವ್ಯ ಎಂಬುದಾಗಿ ಭಾವಿಸಿದ್ದೇನೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಗೆ ಏಮ್ಸ್ ಬೇಕೆನ್ನುವ ಬೇಡಿಕೆ ಇದೆ. ಹಾಗೆಯೇ ತುಂಗಭದ್ರಾ ಜಲಾಶಯಕ್ಕೆ ಸಮಾನಂತರವಾಗಿ ನವಿಲೆ ಜಲಾಶಯ ನಿರ್ಮಾಣದ ಬೇಡಿಕೆ ಕೂಡ ಇದೆ. ಇವು ಸಣ್ಣ ಬೇಡಿಕೆಗಳಲ್ಲ. ಇವೆಲ್ಲವೂ ಈಡೇರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಕೈಗಾರಿಕೆ ಬರಬೇಕು ಎಂಬುದು ಸ್ಥಳೀಯ ನಾಯಕರು ದನಿಗೂಡಿಸಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದೆ. ಯಾವುದಾದರೂ ಒಂದು ಕೈಗಾರಿಕೆಯನ್ನು ಇಲ್ಲಿಗೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ. ರಾಜಕೀಯ ಬೇರೆ, ಅಭಿವೃದ್ಧಿ ಬೇರೆ. ಅಭಿವೃದ್ಧಿ ವಿಷಯದಲ್ಲಿ ಯಾವಾಗಲೂ ರಾಜ್ಯದ ಸರ್ಕಾರ ಜತೆ ನಿಲ್ಲುತ್ತೇನೆ ಎಂದರು.

ನಾ.ರಾ. ಲೋಕೇಶ್ ಮೇಲೆ ಹೊರೆ ಹೊರೆಸುವುದು ಸರಿಯಲ್ಲ

ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ಕರ್ನಾಟಕದ ಬೇಡಿಕೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ಸುಮಾರು 30 ಟಿಎಂಸಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಂಡು ವರ್ಷಕ್ಕೆ ಎರಡು ಬೆಳೆ ತೆಗೆಯುವುದಕ್ಕೆ ಉಳಿದ 30 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ನವಿಲೆ ಜಲಾಶಯದ ನಿರ್ಮಾಣ ಅಗತ್ಯವಾಗಿದೆ. ಅದರ ಜವಾಬ್ದಾರಿಯನ್ನು ಅಥವಾ ಹೊರೆಯನ್ನು ಇನ್ನೂ ಯುವಕರಾಗಿರುವ ನಾ.ರಾ. ಲೋಕೇಶ್ ಮೇಲೆ ಹಾಕುವುದು ಬೇಡ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನೀರಾವರಿ ವಿಷಯಗಳ ಸೂಕ್ಷ್ಮತೆ ಮತ್ತು ಜಟಿಲತೆಯನ್ನು ಬಲ್ಲೆ. ಹೀಗಾಗಿ ಇಂತಹ ಜಟಿಲವಾದ ವಿಷಯವನ್ನು ಲೋಕೇಶ್ ಹೆಗಲಿಗೆ ಹಾಕಲಾರೆ. ಯಾಕೆಂದರೆ ಇದಕ್ಕೆ ಅವರ ರಾಜ್ಯದಲ್ಲಿಯೂ ಪ್ರತಿರೋಧ ಬಂದು ರಾಜಕೀಯ ತಿಕ್ಕಾಟ ಶುರುವಾಗಬಹುದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೆರೆ ರಾಜ್ಯಗಳು. ಭಾಷಾವಾರು ಪ್ರಾಂತ್ಯಗಳಾಗಿ ಒಂದೇ ಬಳ್ಳಿಯ ಹೂವುಗಳು. ನಾವು ಪರಸ್ಪರ ಸೌಹಾರ್ದತೆ ಮತ್ತು ಒಳ್ಳೆಯ ಚರ್ಚೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸ್ವಲ್ಪ ಕಾಲಾವಕಾಶ ಅಗತ್ಯವಾಗಿ ಬೇಕಾಗುತ್ತದೆ. ಇಲ್ಲವಾದರೆ ಕೆಲವರಿಗೆ ಇದೇ ರಾಜಕೀಯ ವಿಷಯವಾಗಿ ಪರಿಸ್ಥಿತಿ ಜಟಿಲವಾಗುತ್ತದೆ ಎಂದು ನುಡಿದರು.

ಈ ಭಾಗದ ರೈತರು ಹಿಂದೆ ವರ್ಷಕ್ಕೆ ಎರಡು ಭತ್ತದ ಬೆಳೆ ತೆಗೆಯುತ್ತಿದ್ದರು. ಈಗ ಒಂದು ಬೆಳೆ ತೆಗೆಯುವುದಕ್ಕೂ ಕಷ್ಟಪಡುತ್ತಿದ್ದಾರೆ. ಅದಕ್ಕೆ ಕಾರಣವೇನು ಎಂಬುದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು. ಅನಿಯಂತ್ರಿತವಾಗಿ ಗಣಿಗಾರಿಕೆ ನಡೆಸಿದ ಫಲವಾಗಿ ಹೂಳು ಬಂದು ಜಲಾಶಯವನ್ನು ತುಂಬಿಕೊಂಡಿದೆ. ಇದಕ್ಕೆ ನಾವು ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ನವಿಲೆ ಜಲಾಶಯವನ್ನು ನಿರ್ಮಾಣ ಮಾಡಬಹುದು. ರಾಜಕೀಯಕ್ಕೆ ಅತೀತವಾಗಿ ಪರಸ್ಪರ ನಂಬಿಕೆ ಮತ್ತು ಸೌಹಾರ್ದ ಮನೋಭಾವದಿಂದ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಗಟ್ಟಿಯಾದ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಬೃಹತ್ ರೋಡ್ ಶೋ, ಎನ್ ಟಿ ಆರ್ ಪ್ರತಿಮೆ ಅನಾವರಣ

ಸೈನಿಕ ಶಾಲೆ ಉದ್ಘಾಟನೆಗೂ ಮೊದಲು ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಸಂಜಯ್ ಸೇಠ್, ಆಂಧ್ರ ಪ್ರದೇಶದ ಸಚಿವ ನಾ.ರಾ. ಲೋಕೇಶ್ ಅವರನ್ನು ರೋಡ್ ಶೋ ಮೂಲಕ ಬರಮಾಡಿಕೊಳ್ಳಲಾಯಿತು. ಸಿಂಧನೂರು ಪಟ್ಟಣದ ಜನರು ಗಣ್ಯರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ, ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದ ಮೇಲೆ ಮೆರವಣಿಗೆಯ ಮೂಲಕ ಕರೆದುಕೊಂಡು ಹೋದರು. ನಂತರ ಗಣ್ಯರು ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

Read More
Next Story