
ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ : ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
ಸರ್ಕಾರವು ಇತ್ತೀಚೆಗೆ ಇಂಧನದ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ. ಇದರಿಂದಾಗಿ ಆಟೋ ಚಾಲಕರ ದೈನಂದಿನ ಜೀವನ ದುಸ್ತರವಾಗಿದೆ. ಸರ್ಕಾರವು ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು.
ಇಂಧನ ಬೆಲೆ ಏರಿಕೆ ಮತ್ತು ತೆರಿಗೆ ಹೊರೆಯಿಂದ ಕಂಗಾಲಾಗಿರುವ ಆಟೋ ಚಾಲಕರ ಹಿತರಕ್ಷಣೆಗಾಗಿ ಸರ್ಕಾರವು 6ನೇ ಗ್ಯಾರಂಟಿ ಘೋಷಿಸಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಗೆ ಮಂಜೂರಾಗಿರುವ ನೂತನ ಸೈನಿಕ ಶಾಲೆಯ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮಾತನಾಡಿ, ರಾಜ್ಯ ಸರ್ಕಾರದ ತೆರಿಗೆ ನೀತಿ ಮತ್ತು ಕೇಂದ್ರ ಸರ್ಕಾರದ ಮೇಲಿನ ಅನಗತ್ಯ ಟೀಕೆಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅಬ್ಬರದ ನಡುವೆ ಶ್ರಮಿಕ ವರ್ಗದವರಾದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ಇತ್ತೀಚೆಗೆ ಇಂಧನದ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ. ಇದರಿಂದಾಗಿ ಆಟೋ ಚಾಲಕರ ದೈನಂದಿನ ಜೀವನ ದುಸ್ತರವಾಗಿದೆ. ಸರ್ಕಾರವು ವಿಧಿಸಿರುವ ಈ ಹೆಚ್ಚುವರಿ ತೆರಿಗೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಕೇವಲ ಐದು ಗ್ಯಾರಂಟಿಗಳಿಗೆ ಸೀಮಿತವಾಗದೆ, ಆಟೋ ಚಾಲಕರ ಬದುಕಿಗೆ ಆಸರೆಯಾಗುವಂತೆ 6ನೇ ಗ್ಯಾರಂಟಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಧನ ಬೆಲೆ ಏರಿಕೆಯಿಂದ ಆಟೋ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪರಿಸ್ಥಿತಿ ತಿಳಿಯಾಗುವವರೆಗೆ ಪ್ರತಿ ಆಟೋ ಚಾಲಕರಿಗೆ ಮಾಸಿಕ 15 ಸಾವಿರ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡಬೇಕು ಎಂಬುದು ಚಾಲಕರ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರಿಗೆ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಜಾಗತಿಕ ತೈಲ ಬಿಕ್ಕಟ್ಟು
ವಿಶ್ವದಾದ್ಯಂತ ಸೃಷ್ಟಿಯಾಗಿರುವ ಯುದ್ಧದ ವಾತಾವರಣವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಗತ್ತಿನಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ತೈಲ ಬೆಲೆ ಏರಿಕೆಗೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿವೆ. ಭಾರತ ಈ ಸಮಸ್ಯೆಯನ್ನು ಬಯಸಿ ತಂದುಕೊಂಡಿಲ್ಲ ಎಂಬುದನ್ನು ಟೀಕಾಕಾರರು ಮೊದಲು ಅರ್ಥಮಾಡಿಕೊಳ್ಳಬೇಕು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದೆ. ಜಾಗತಿಕವಾಗಿ ತೈಲ ಬಿಕ್ಕಟ್ಟು ಎದುರಾಗಿದ್ದರೂ, ಭಾರತಕ್ಕೆ ತೈಲ ಹೊತ್ತ ಹಡಗುಗಳು ಯಾವುದೇ ಅಡೆತಡೆಯಿಲ್ಲದೆ ಬರುತ್ತಿವೆ. ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗದಂತೆ ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ವಿವೇಚನೆಯಿಂದಾಗಿ ಭಾರತದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾಗಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಟೀಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವ ಬದಲು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯನವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನ ವಿಫಲವಾಗಲಿದೆ. ಒಂದು ವೇಳೆ ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಏನಾಗುತ್ತಿತ್ತು? ಅವರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದರಾ? ಹಿಂದಿನ ಅನೇಕ ಬಿಕ್ಕಟ್ಟುಗಳಿಗೆ ಹೋಲಿಸಿದರೆ, ಪ್ರಸ್ತುತ ಭಾರತದ ಸ್ಥಿತಿ ಉತ್ತಮವಾಗಿದೆ. ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಇದನ್ನು ಅರಿಯದ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ರಾಜಕೀಯ ಕಾರಣಕ್ಕಾಗಿ ಕೇಂದ್ರವನ್ನು ಟೀಕಿಸುವುದು ಸರಿಯಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಟೀಕೆ ಮಾಡುವ ಬದಲು ಜನಪರ ಕೆಲಸಗಳತ್ತ ಗಮನ ಹರಿಸಬೇಕು ಎಂದರು.

