ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಶೇ 33 ಮಹಿಳಾ ಮೀಸಲು; ಹೆಚ್.ಡಿ. ದೇವೇಗೌಡ
x
ಬೆಂಗಳೂರಿನಲ್ಲಿ ಜೆಡಿಎಸ್‌ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು

ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಶೇ 33 ಮಹಿಳಾ ಮೀಸಲು; ಹೆಚ್.ಡಿ. ದೇವೇಗೌಡ

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ ಶೇ.33 ರಷ್ಟು ಮೀಸಲು ಮುಂದಿನ ದಿನಗಳಲ್ಲಿನ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆ ಹೆಚ್ಚಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.


ಮುಂದಿನ ವಿಧಾನಸಭೆ ಹಾಗೂ ಲೋಕಸಭೆಯೊಳಗೆ ಮಹಿಳಾ ಮೀಸಲಾತಿ ಬರಬಹುದು. ಡಿಲಿಮಿಟೇಷನ್ ಎಲ್ಲ ಸುಗಮವಾಗಿ ನಡೆದರೆ ಶೇ 33 ರಷ್ಟು ಮೀಸಲಾತಿ ಬರಲಿದೆ. 75-80 ಜನ ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು.

ಬೆಂಗಳೂರಿನ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳಾ ಮೀಸಲಾತಿಗಾಗಿ ನಾನು ಶ್ರಮಿಸಿದೆ. ಮೋದಿ ಅವರು ಅದಕ್ಕೆ ಅಂತಿಮ ಸ್ವರೂಪ ಕೊಟ್ಟರು. ಇದಕ್ಕಾಗಿ ಮೋದಿಯವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಜಿಬಿಎ ಮೀಸಲಾತಿ ಪಟ್ಟಿ ಅಂತಿಮವಾಗಿ ಪ್ರಕಟವಾಗಿದೆ. ಮುಂಬರುವ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡಬೇಕು ಎಂದು ಕರೆ ನೀಡಿದರು.

ಜಿಬಿಎನಲ್ಲಿ 369 ವಾರ್ಡುಗಳಲ್ಲಿ ಜೆಡಿಎಸ್‌ಗೆ ಎಷ್ಟು ವಾರ್ಡ್ ಗಳಲ್ಲಿ ಸ್ಪರ್ಧಿಸುವ ಶಕ್ತಿ ಇದೆ ಎಂಬುದನ್ನು ಗಮನಿಸಬೇಕು. ಬಳಿಕ ಮಹಿಳೆಯರಿಗೆ ಎಷ್ಟು ಜನರಿಗೆ ಅವಕಾಶ ನೀಡಬಹುದು ಎಂದು ತೀರ್ಮಾನ ಮಾಡಿ, ಅದಷ್ಟು ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಸ್ಪರ್ಧೆ ಮಾಡುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಮಹಿಳಾ ಮೀಸಲಿಗೆ ಅರ್ಥ ಬರುತ್ತದೆ ಎಂದು ಒತ್ತಿ ಹೇಳಿದರು.

ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಶೇ.33 ರಷ್ಟು ಮಹಿಳಾ‌ ಮೀಸಲಾತಿ ಕೊಟ್ಟಿದ್ದು ನಾವು. ಶೇ.33 ರಷ್ಟು ಮಹಿಳಾ ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದು ನಾವು. ಇವತ್ತು ಅದೆಲ್ಲವೂ ಜಾರಿಗೆ ಬರುತ್ತಿದೆ. ಈ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ನಮ್ಮ ಮುಖಂಡರು, ಕಾರ್ಯಕರ್ತರು ಜನರಿಗೆ ಈ ವಿಷಯ ಹೇಳಬೇಕು ಎಂದು ಮಾಜಿ ಪ್ರಧಾನಿ ಹೇಳಿದರು.

ಗ್ಯಾರಂಟಿಗಳಿಂದ ತಾತ್ಕಾಲಿಕ ಲಾಭ

ಮಹಿಳೆಯರಿಗಾಗಿ ಜೆಡಿಎಸ್ ಪಕ್ಷ ದೊಡ್ಡ ಕೊಡುಗೆ ನೀಡಿದೆ. ದೇವೇಗೌಡರು ಶೇ.33 ರಷ್ಟು ಮಹಿಳಾ ಮೀಸಲು ನೀಡಲು ನಾಂದಿ ಹಾಡಿದರು. ಕುಮಾರಸ್ವಾಮಿ ಅವರು ಲಾಟರಿ, ಸಾರಾಯಿ ನಿಷೇಧ ಮಾಡಿ ಎಷ್ಟೋ ಹೆಣ್ಣು ಮಕ್ಕಳ ಜೀವನ ಉಳಿಸಿದರು ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಂಚರತ್ನ ಯೋಜನೆ ಭರವಸೆ ನೀಡಿದ್ದರು. ಉಚಿತ ಆರೋಗ್ಯ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಕೊಡುತ್ತೇನೆ ಎಂದು ಹೇಳಿದರು. ಆದರೆ, ಮಹಿಳೆಯರು ಎರಡು ಸಾವಿರ ರೂಪಾಯಿಗೆ ಮಾರು ಹೋದರು. ಪಂಚರತ್ನದಂತಹ ಉತ್ತಮ ಕಾರ್ಯಕ್ರಮಗಳು ಜನರಿಗೆ ಅರ್ಥ ಆಗಲಿಲ್ಲ ಎಂದು ಹೇಳಿದರು.

ಜನರಿಗೆ ಇನ್ನಾದರೂ ಅರ್ಥ ಮಾಡಿಸಬೇಕಿದೆ. ಗ್ಯಾರಂಟಿ ಯೋಜನೆಗಳಿಂದ ತಾತ್ಕಾಲಿಕ ಉಪಯೋಗ ಸಿಗಬಹುದು. ಇದರಿಂದ ಜೀವನ ರೂಪಿಸಿಕೊಳ್ಳಲು ಆಗಲ್ಲ ಎಂದರು.

2032-33ರಲ್ಲಿ ಮಹಿಳಾ ಮೀಸಲಾತಿ?

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ ಶೇ.33 ರಷ್ಟು ಮೀಸಲು ಮುಂದಿನ ದಿನಗಳಲ್ಲಿನ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆ ಹೆಚ್ಚಿಸಲಿದೆ. ನನ್ನ ಮಾಹಿತಿ ಪ್ರಕಾರ 2032-33ರಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವಿಧಾನಸಭೆಯಲ್ಲಿ 75 ಜನ ಮಹಿಳೆಯರೇ ಶಾಸಕಿಯರು ಇರುತ್ತಾರೆ. ಎಲ್ಲ‌ ಪಕ್ಷಗಳ ಮಹಿಳೆಯರು ಮನಸು ಮಾಡಿದರೆ ಮಹಿಳಾ ಮುಖ್ಯಮಂತ್ರಿಯೇ ಆಗಬಹುದು. ಅಂಥ ಅವಕಾಶ‌ ಮೀಸಲಾತಿಯಿಂದ ಸಾಧ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಿಂದ ಇಂದು ರಾಷ್ಟ್ರದಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರುತ್ತಿದೆ. ಅದರ ಕನಸು ಕಂಡಿದ್ದವರು ದೇವೇಗೌಡರು. ಮಹಿಳೆಯರ ಪರವಾಗಿ ದೇವೇಗೌಡರು ಬಹಳಷ್ಟು ಕೆಲಸ ಮಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಥಮ ಬಾರಿಗೆ ಶೇ.70 ರಷ್ಟು ಮಹಿಳಾ ಶಿಕ್ಷಕರನ್ನು ನೇಮಿಸಿಕೊಂಡಿದ್ದು ದೇವೇಗೌಡರು ಎಂದು ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ನೀಡಿದ್ದ ನಾವು

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ‌ ಮೀಸಲಾತಿ ಶೇ.50ರಷ್ಟು ನೀಡಿದ್ದು ದೇವೇಗೌಡರು. 1996ರಲ್ಲಿ ದೇವೇಗೌಡರು ಪ್ರಧಾನಿ ಆಗಿ ಹೋದ ಮೇಲೆ ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲು ನೀಡುವ ವಿಧೇಯಕ ಮಂಡಿಸಿದ್ದರು. ಆದರೆ, ಸಮಾಜವಾದಿ ಪಕ್ಷ, ಆರ್ ಜೆಡಿ ಬೆಂಬಲ ನೀಡದ ಕಾರಣಕ್ಕೆ ಲೋಕಸಭೆಯಲ್ಲಿ ಆ ವಿಧೇಯಕ ಅಂಗೀಕಾರ ಆಗಲಿಲ್ಲ. ಆದರೆ, ದೈವ ಕೃಪೆ ಇತ್ತು. ನಾವು ಇಂದು ಎನ್‌ಡಿಎ ಮೈತ್ರಿಯಲ್ಲಿ ಇದ್ದೇವೆ. ದೇವೇಗೌಡರ ಕನಸನ್ನು ಮೋದಿಯವರು ಲೋಕಸಭೆಯಲ್ಲಿ ನನಸು ಮಾಡಿದರು ಎಂದು ಕುಮಾರಸ್ವಾಮಿ ಹೇಳಿದರು.

ಜಿಬಿಎ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಅದಕ್ಕೆ ಮಹಿಳಾ ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದ ಸಚಿವರು; ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಇಂಥ ವ್ಯವಸ್ಥೆಗೆ ಯಾರು ಕಾರಣ ಅಂತ ನಗರದ ಜನತೆಗೆ ತಿಳಿಸಬೇಕು. ನಮ್ಮ ಪಕ್ಷದ ಮಹಿಳೆಯರು ಸಕ್ರಿಯರಾಗಿ ಕೆಲಸ ಮಾಡಬೇಕು. ನಮ್ಮಿಂದ, ನಮ್ಮ‌ ಮುಖಂಡರಿಂದ ಎಲ್ಲ ಸಹಕಾರ ಸಿಗಲಿದೆ. ಜೆಡಿಎಸ್‌ನಿಂದ ಹೆಚ್ಚಿನ ಮಹಿಳೆಯರು ಸ್ಪರ್ಧಿಸಬೇಕು, ಹೆಚ್ಚಿನ‌ ಮಹಿಳೆಯರು ಗೆದ್ದು ಬರಬೇಕು ಎಂದು ಕರೆ ನೀಡಿದರು.

Read More
Next Story