ರೇಣುಕಾಸ್ವಾಮಿ ಕೊಲೆ ಪ್ರಕರಣ: 4 ಆರೋಪಿಗಳ ಜಾಮೀನು ರದ್ದತಿ ಕೋರಿ ಸರ್ಕಾರದ ಅರ್ಜಿ; ಆಕ್ಷೇಪಣೆಗೆ ಸೂಚನೆ
x

ರೇಣುಕಾಸ್ವಾಮಿ ಕೊಲೆ ಪ್ರಕರಣ: 4 ಆರೋಪಿಗಳ ಜಾಮೀನು ರದ್ದತಿ ಕೋರಿ ಸರ್ಕಾರದ ಅರ್ಜಿ; ಆಕ್ಷೇಪಣೆಗೆ ಸೂಚನೆ

ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ. ವಿನಯ್‌ ಎಂಬುವವರಿಗೆ ಬೆಂಗಳೂರಿನ 56ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹಾಗೂ ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ (ಕಾಮಾಕ್ಷಿಪಾಳ್ಯ ಪೊಲೀಸರು) ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಪ್ರಕರಣದ ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ. ವಿನಯ್‌ ಎಂಬುವವರಿಗೆ ಬೆಂಗಳೂರಿನ 56ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯವು 2024ರ ಡಿಸೆಂಬರ್‌ 23ರಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರ ಪರವಾಗಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರ ಪ್ರಬಲ ವಾದ

ವಿಚಾರಣೆಯ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪಿ. ಪ್ರಸನ್ನ ಕುಮಾರ್‌ ಅವರು, ಇದೊಂದು ಅತ್ಯಂತ ಹೀನವಾದ ಪ್ರಕರಣವಾಗಿದೆ ಎಂದರು. ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ರದ್ದುಪಡಿಸಿದ್ದು, ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ ಎಂಬ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಆಧಾರದ ಮೇಲೆ, ಈ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನನ್ನೂ ರದ್ದುಪಡಿಸಬೇಕು ಎಂದು ಅವರು ಪ್ರಬಲವಾಗಿ ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ಸುಪ್ರೀಂ ಕೋರ್ಟ್‌ ಆದೇಶವಿರುವುದು ನಿಜವಾದರೂ, ಜಾಮೀನು ರದ್ದುಪಡಿಸಬೇಕು ಎಂಬ ಪ್ರಾಸಿಕ್ಯೂಷನ್‌ ಮನವಿಯ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸಬೇಕಿದೆ ಎಂದು ತಿಳಿಸಿತು. ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂಬುದೇನಿಲ್ಲ, ಹಾಗೆಯೇ ಎಲ್ಲಾ ಕೊಲೆ ಪ್ರಕರಣಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸಿದರೆ, ಸಂವಿಧಾನ ನೀಡಿರುವ ಮೂಲಭೂತ ಹಕ್ಕಿಗೆ (ಜೀವಿಸುವ ಹಕ್ಕು) ಚ್ಯುತಿ ಬರುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಈ ಪ್ರಕರಣವು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ನ್ಯಾಯಾಲಯವು ಯಾವುದೇ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. ಅಂತಿಮವಾಗಿ ಜಾಮೀನು ರದ್ದತಿ ಅರ್ಜಿಯ ಕುರಿತು ಲಿಖಿತ ಆಕ್ಷೇಪಣೆ ಅಥವಾ ವಾದಾಂಶಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಾದ ಪವನ್‌ ಹಾಗೂ ಇತರೆ ಮೂವರು ಆರೋಪಿಗಳಿಗೆ ನಿರ್ದೇಶನ ನೀಡಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿತು.

Read More
Next Story