ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಒಂದೇ ದಿನದಲ್ಲೇ 3 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, 3.60 ಕೋಟಿ ರೂ. ಆದಾಯ
x

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಒಂದೇ ದಿನದಲ್ಲೇ 3 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, 3.60 ಕೋಟಿ ರೂ. ಆದಾಯ

ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರ ಮಹಾಪೂರ ಹರಿದುಬರುತ್ತಿದೆ. ಸಾರ್ವಜನಿಕ ದರ್ಶನ ಆರಂಭವಾದ ಒಂದೂವರೆ ದಿನದಲ್ಲೇ 3 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು, ದೇವಾಲಯಕ್ಕೆ 3.60 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.


Click the Play button to hear this message in audio format

ಹಾಸನದ ಪ್ರಸಿದ್ಧ ಶಕ್ತಿ ದೇವತೆಗಳಲ್ಲಿ ಒಂದಾದ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನ ಆರಂಭವಾಗುತ್ತಿದ್ದಂತೆಯೇ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ದೇವಿಯ ದರ್ಶನ ಪಡೆಯಲು ಮುಂಜಾನೆ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದರೊಂದಿಗೆ ದೇವಾಲಯಕ್ಕೆ ಭಕ್ತರ ಭೇಟಿ ಮತ್ತು ಆದಾಯದಲ್ಲೂ ಹೊಸ ದಾಖಲೆ ನಿರ್ಮಾಣವಾಗಿದೆ.

ಹಾಸನಾಂಬೆ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ದರ್ಶನ ಆರಂಭವಾದ ಮೊದಲ ಒಂದೂವರೆ ದಿನದಲ್ಲೇ ಮೂರು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನಿನ್ನೆ ಸಂಜೆಯವರೆಗಿನ ಲೆಕ್ಕಾಚಾರದ ಪ್ರಕಾರವೇ ಭಕ್ತರ ಸಂಖ್ಯೆ ಮೂರು ಲಕ್ಷ ದಾಟಿದ್ದು, ನಿನ್ನೆ ಮತ್ತು ಇಂದು ಮಧ್ಯಾಹ್ನ 11 ಗಂಟೆಯ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಎರಡೇ ದಿನಕ್ಕೆ 3.60 ಕೋಟಿ ರೂ. ಆದಾಯ!

ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಭಾರಿ ಪ್ರಮಾಣದ ಆದಾಯ ಹರಿದುಬಂದಿದೆ. ಕೇವಲ ಒಂದೂವರೆ ದಿನದಲ್ಲೇ ದೇವಾಲಯದ ಆದಾಯ 3.60 ಕೋಟಿ ರೂಪಾಯಿ ತಲುಪಿದೆ. 1,000 ರೂಪಾಯಿ ಹಾಗೂ 300 ರೂಪಾಯಿ ವಿಶೇಷ ದರ್ಶನದ ಟಿಕೆಟ್‌ಗಳು ಮತ್ತು ಲಾಡು ಪ್ರಸಾದ ಮಾರಾಟದಿಂದ ಈ ಆದಾಯ ಸಂಗ್ರಹವಾಗಿದೆ.

ದೇವಾಲಯದ ಆದಾಯದ ವಿವರ ಹೀಗಿದೆ:

ದೇವಾಲಯಕ್ಕೆ ಸಂಗ್ರಹವಾಗಿರುವ ಒಟ್ಟು 3.60 ಕೋಟಿ ರೂಪಾಯಿ ಆದಾಯದಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಮೂಲಕ 1.98 ಕೋಟಿ ರೂಪಾಯಿ ಹಾಗೂ ಭಕ್ತರು ಸ್ಥಳದಲ್ಲೇ ಟಿಕೆಟ್ ಖರೀದಿಸುವ ಮೂಲಕ 1.62 ಕೋಟಿ ರೂಪಾಯಿ ಆದಾಯ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ಭಕ್ತರಿಂದ ದಾಖಲೆಯ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

Read More
Next Story