ಹಾಸನ ಡಿಸಿ ಲಂಚ ವಿವಾದ: ಲೋಕಾಯುಕ್ತ ಮೆಟ್ಟಿಲೇರಿದ ಪ್ರಕರಣ, ಇಡಿ ತನಿಖೆಗೆ ದಿನೇಶ್ ಕಲ್ಲಹಳ್ಳಿ ಆಗ್ರಹ
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಗರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೆಸರೂ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಧಿಕಾರಿ ಕಚೇರಿಯ ಲಂಚದ ಕುರಿತಾದ ವಾಟ್ಸಪ್ ಚಾಟ್ಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಈ ವಿವಾದ ಇದೀಗ ಬೃಹತ್ ಸ್ವರೂಪ ಪಡೆದುಕೊಂಡಿದೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ (ಪಿಎ) ಶಶಿ ಕಿರಣ್ ಅವರ ವಾಟ್ಸಪ್ ಚಾಟ್ನಲ್ಲಿ ಉಲ್ಲೇಖವಾಗಿರುವ ಭ್ರಷ್ಟಾಚಾರದ ಆರೋಪಗಳು ಇದೀಗ ಲೋಕಾಯುಕ್ತ ಮೆಟ್ಟಿಲೇರಿವೆ. ಈ ಬಗ್ಗೆ ಡಿಸಿ ಪಿಎ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳು ಪ್ರಕರಣಕ್ಕೆ ಕ್ಲೀನ್ಚಿಟ್ ನೀಡಿದ್ದಾರೆ. ಆದರೂ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಗರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೆಸರೂ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಲಕ್ಷಾಂತರ ರೂಪಾಯಿಗಳ ವ್ಯವಹಾರದ ಆರೋಪ
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಪ್ ಸಂಭಾಷಣೆಗಳಲ್ಲಿ ಜಿಲ್ಲಾಧಿಕಾರಿಯವರಿಗೆ ಸಂಬಂಧಿಸಿದಂತೆ ಬರೋಬ್ಬರಿ 50 ಲಕ್ಷ, 60 ಲಕ್ಷ ಹಾಗೂ 75 ಲಕ್ಷ ರೂಪಾಯಿಗಳ ಬೃಹತ್ ಮೊತ್ತದ ಪ್ರಸ್ತಾಪವಾಗಿದೆ. ಕೇವಲ ಜಿಲ್ಲಾಧಿಕಾರಿ ಮಾತ್ರವಲ್ಲದೆ, ಉಪವಿಭಾಗಾಧಿಕಾರಿಗೆ (ಎಸಿ) 13 ಲಕ್ಷ ಮತ್ತು 20 ಲಕ್ಷ ರೂಪಾಯಿ, ಹಾಗೂ ಅಪರ ಜಿಲ್ಲಾಧಿಕಾರಿ (ಎಡಿಸಿ), ತಹಶೀಲ್ದಾರ್ ಸೇರಿದಂತೆ ಇತರ ಉನ್ನತ ಅಧಿಕಾರಿಗಳ ಹೆಸರಿನಲ್ಲಿಯೂ ಹಣದ ಹಂಚಿಕೆಯ ಬಗ್ಗೆ ಚರ್ಚೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸರ್ಕಾರಿ ಅಧಿಕಾರಿಗಳ ಹುದ್ದೆಗಳನ್ನು ಬಳಸಿಕೊಂಡು ನಡೆದಿರುವ ಈ ಹಣಕಾಸಿನ ವಹಿವಾಟುಗಳು ಕೇವಲ ಖಾಸಗಿ ವ್ಯವಹಾರವೇ ಅಥವಾ ಸಾರ್ವಜನಿಕ ಸೇವಕರ ಅಧಿಕೃತ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ನಡೆದಿರುವ ಭ್ರಷ್ಟಾಚಾರವೇ ಎಂಬುದನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕ್ರಷರ್ ಕಡತಗಳ ವಿಲೇವಾರಿ
ಈ ಇಡೀ ಜಾಲದಲ್ಲಿ ಡಿಸಿ ಪಿಎ ಸೇರಿದಂತೆ ಹಲವು ಮಧ್ಯವರ್ತಿಗಳು ಸಕ್ರಿಯವಾಗಿರುವ ಅನುಮಾನಗಳಿವೆ. ವಿಶೇಷವಾಗಿ ಸಕಲೇಶಪುರ ಭಾಗದ ಮೂರು ಕ್ರಷರ್ಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿ ಮತ್ತು ಅನುಮೋದನೆ ಕುರಿತು ಚಾಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಿಯಮಾನುಸಾರ ವಿಲೇವಾರಿಯಾಗಬೇಕಿದ್ದ ಕಡತಗಳನ್ನು ಹಣದ ಪ್ರಭಾವ ಹಾಗೂ ಮಧ್ಯವರ್ತಿಗಳ ಮೂಲಕ ಇತ್ಯರ್ಥಪಡಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ, ಈ ಮೂರು ಕ್ರಷರ್ ಕಡತಗಳ ಸಂಪೂರ್ಣ ಆಡಳಿತಾತ್ಮಕ ಪ್ರಕ್ರಿಯೆಯನ್ನು ಕೂಲಂಕಷ ತನಿಖೆಗೆ ಒಳಪಡಿಸಬೇಕು. ಜತೆಗೆ, ಅಧಿಕಾರಿಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದ ಮತ್ತು ಅದನ್ನು ತಲುಪಿಸಿದ ವ್ಯವಸ್ಥೆಯಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳ ನೈಜ ಗುರುತು, ಅವರ ಬ್ಯಾಂಕ್ ವಹಿವಾಟುಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗಿನ ಅವರ ಸಂಪರ್ಕದ ಸ್ವರೂಪವನ್ನು ಪರಿಶೀಲಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಡಿಜಿಟಲ್ ಸಾಕ್ಷ್ಯಗಳ ರಕ್ಷಣೆ
ಪ್ರಕರಣದ ಗಂಭೀರತೆಯನ್ನು ಅರಿತು ಸಾಕ್ಷ್ಯನಾಶಕ್ಕೆ ಅವಕಾಶ ನೀಡದಂತೆ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ. ಮೊಬೈಲ್ ಸಂದೇಶಗಳನ್ನು ಅಳಿಸುವುದು ಅಥವಾ ಮೂಲ ಕಡತಗಳಲ್ಲಿ ತಿದ್ದುಪಡಿ ಮಾಡುವ ಮೊದಲೇ, ಸಂಬಂಧಪಟ್ಟ ಮೊಬೈಲ್ ಸಾಧನಗಳು, ಮೂಲ ವಾಟ್ಸಪ್ ಚಾಟ್ಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯದ (FSL) ಮೂಲಕ ಪರೀಕ್ಷಿಸಬೇಕು. ತನಿಖೆಯ ವೇಳೆ ಕ್ರಿಮಿನಲ್ ಅಪರಾಧಗಳ ಅಂಶಗಳು ಕಂಡುಬಂದರೆ ತಕ್ಷಣವೇ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಲ್ಲಿ ನಡೆದಿರುವುದು ಬೃಹತ್ ಮೊತ್ತದ ಅಕ್ರಮ ಹಣಕಾಸು ವಹಿವಾಟು ಆಗಿರುವುದರಿಂದ, ಈ ಪ್ರಕರಣದ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೂ (ED) ರವಾನಿಸಬೇಕು. ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಗಳಿಗೆ ಮಣಿಯದೆ, ಲೋಕಾಯುಕ್ತ ಪೊಲೀಸ್ ವಿಭಾಗದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಅಧಿಕಾರಿಗಳ ತಂಡದಿಂದ ಕಾಲಮಿತಿಯೊಳಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ.
