
ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ಶೇ.50ರಷ್ಟು ಇಳಿಕೆ? ಅಮೆರಿಕದೊಂದಿಗಿನ ಹೊಸ ಒಪ್ಪಂದದ ಲಾಭ
ಹೊಸ ಒಪ್ಪಂದದ ಪ್ರಕಾರ, 800ಸಿಸಿಯಿಂದ 1600ಸಿಸಿ (800-1600cc) ಎಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಇನ್ಮುಂದೆ ಸುಂಕ ರಹಿತವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಬಹುದು
ಬೈಕ್ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ. ಅಮೆರಿಕದ ಐಕಾನಿಕ್ ಬೈಕ್ ಕಂಪನಿ ಹಾರ್ಲೆ ಡೇವಿಡ್ಸನ್‌ನ (Harley-Davidson) ದುಬಾರಿ ಬೈಕ್‌ಗಳು ಇನ್ಮುಂದೆ ಭಾರತದಲ್ಲಿ ಅಗ್ಗದ ದರದಲ್ಲಿ ಸಿಗಲಿವೆ. ಭಾರತ ಮತ್ತು ಅಮೆರಿಕದ ನಡುವೆ ನಡೆದ ಹೊಸ ಮಧ್ಯಂತರ ವಾಣಿಜ್ಯ ಒಪ್ಪಂದದ ಪರಿಣಾಮವಾಗಿ, ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ.
ಹೊಸ ಒಪ್ಪಂದದ ಪ್ರಕಾರ, 800ಸಿಸಿಯಿಂದ 1600ಸಿಸಿ (800-1600cc) ಎಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಇನ್ಮುಂದೆ ಸುಂಕ ರಹಿತವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಬಹುದು. ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದರಿಂದಾಗಿ ಈ ಪ್ರೀಮಿಯಂ ಬೈಕ್‌ಗಳ ಬೆಲೆಯಲ್ಲಿ ಶೇ.50ರಷ್ಟು ಭಾರಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶಿಯ ಬೈಕ್‌ಗಳಿಗೆ ಮಾರಕ
ಈ ಹಿಂದೆ, ದೇಶೀಯ ಬೈಕ್ ತಯಾರಕರನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರವು ಅಧಿಕ ಎಂಜಿನ್ ಸಾಮರ್ಥ್ಯದ ವಿದೇಶಿ ಬೈಕ್‌ಗಳ ಮೇಲೆ ಶೇ.50 ರಿಂದ ಶೇ.100ರಷ್ಟು ಭಾರಿ ಆಮದು ಸುಂಕವನ್ನು ವಿಧಿಸುತ್ತಿತ್ತು. ಆದರೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಬದಲಾವಣೆ ಮತ್ತು ಅಮೆರಿಕದೊಂದಿಗಿನ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡಿರುವ ಭಾರತ, ಇದೀಗ ತನ್ನ ಹಳೆಯ ನಿಲುವನ್ನು ಸಡಿಲಿಸಿದೆ. ವ್ಯಾಪಕ ವಾಣಿಜ್ಯ ಮಾತುಕತೆಗಳು ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಈ ಮಧ್ಯಂತರ ರಿಯಾಯಿತಿಯನ್ನು ನೀಡಲಾಗಿದೆ.
ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಮಾರಾಟ 2017ರಲ್ಲಿ ಗರಿಷ್ಠ ಮಟ್ಟಕ್ಕೆ (7,000 ಯುನಿಟ್) ತಲುಪಿತ್ತು. ಆದರೆ ನಂತರದ ದಿನಗಳಲ್ಲಿ ಅಧಿಕ ಬೆಲೆ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಮಾರಾಟ ಕುಸಿದಿತ್ತು. ಈಗ ಬೆಲೆ ಇಳಿಕೆಯಾಗುತ್ತಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಬೈಕ್‌ಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.
ಟೆಸ್ಲಾಗೆ ಇಲ್ಲ ವಿನಾಯಿತಿ!
ಬೈಕ್‌ಗಳಿಗೆ ಸುಂಕ ವಿನಾಯಿತಿ ನೀಡಲಾಗಿದ್ದರೂ, ಎಲೆಕ್ಟ್ರಿಕ್ ವಾಹನಗಳಿಗೆ (EV) ಇಂತಹ ಯಾವುದೇ ಕೊಡುಗೆ ಸಿಕ್ಕಿಲ್ಲ. ಅಮೆರಿಕದ ಮತ್ತೊಂದು ದಿಗ್ಗಜ ಕಂಪನಿ ಟೆಸ್ಲಾ (Tesla) ಕೂಡ ಭಾರತದ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಅದಕ್ಕೆ ಸದ್ಯಕ್ಕೆ ಯಾವುದೇ ಸುಂಕ ವಿನಾಯಿತಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಮೋದಿ ಸರ್ಕಾರದ ಆಯ್ದ ಆಟೋಮೊಬೈಲ್ ರಾಜತಾಂತ್ರಿಕತೆಯನ್ನು ತೋರಿಸುತ್ತದೆ.

