Tiger death: ರಾಜ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳ ಅಸಹಜ ಸಾವು: ಅಕ್ರಮ ವಿದ್ಯುತ್ ಬೇಲಿಗೆ ಮತ್ತೊಂದು ಹುಲಿ ಬಲಿ!
x
ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಅಡವಿ ಮಠದ 2 ವರ್ಷದ ಗಂಡು ಹುಲಿ ಮೃತ ಪಟ್ಟಿದೆ.

Tiger death: ರಾಜ್ಯದಲ್ಲಿ ಹೆಚ್ಚುತ್ತಿರುವ ಹುಲಿಗಳ ಅಸಹಜ ಸಾವು: ಅಕ್ರಮ ವಿದ್ಯುತ್ ಬೇಲಿಗೆ ಮತ್ತೊಂದು ಹುಲಿ ಬಲಿ!

ರಾಜ್ಯವು ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಅಕ್ರಮ ವಿದ್ಯುತ್ ಬೇಲಿ ಹಾಗೂ ವಿಷಪ್ರಾಶನದಂತಹ ಮಾನವ ಹಸ್ತಕ್ಷೇಪಗಳಿಂದ ಸಂಭವಿಸುತ್ತಿರುವ ವನ್ಯಜೀವಿಗಳ ಅಸಹಜ ಸಾವುಗಳು ಸಹ ಹೆಚ್ಚಾಗಿವೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಅಡವಿ ಮಠದ ಸಮೀಪ ಹುಲಿಯೊಂದು ಮೃತಪಟ್ಟಿದೆ. ಕೃಷಿ ಜಮೀನಿಗೆ ಅಳವಡಿಸಲಾಗಿದ್ದ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಸುಮಾರು ಎರಡು ವರ್ಷದ ಗಂಡು ಹುಲಿಯೊಂದು ಬಲಿಯಾಗಿದೆ. ವನ್ಯಜೀವಿಗಳ ಆವಾಸಸ್ಥಾನದ ಅಂಚಿನಲ್ಲಿ ನಡೆಯುತ್ತಿರುವ ಮಾನವನ ನಿರ್ಲಕ್ಷ್ಯ ಹಾಗೂ ಕಾನೂನುಬಾಹಿರ ಕೃತ್ಯಗಳಿಗೆ ಈ ಘಟನೆ ನೈಜ ಸಾಕ್ಷಿಯಾಗಿದೆ.

ಏನಿದು ಘಟನೆ?

ಕೇರಳ ಮೂಲದ ರವಿಚಂದ್ರ ಎಂಬುವರಿಗೆ ಸೇರಿದ ಈ ಜಮೀನನ್ನು ಪರಮೇಶ ಎಂಬುವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಈ ಜಮೀನಿನ ಬೆಳೆ ರಕ್ಷಣೆಗಾಗಿ ಕಾನೂನುಬಾಹಿರವಾಗಿ ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿತ್ತು. ಸೋಮವಾರ ರಾತ್ರಿ ಇದೇ ತಂತಿ ಸ್ಪರ್ಶಿಸಿದ ಹುಲಿ, ವಿದ್ಯುತ್‌ ಶಾಕ್‌ನಿಂದ ಸ್ಥಳದಲ್ಲೇ ಮೃತ ಪಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಹುಲಿಗಳ ಸಂಚಾರ ಗಣನೀಯವಾಗಿ ಹೆಚ್ಚಾಗಿದ್ದರಿಂದ ಬಫರ್ ವಲಯದ ಅರಣ್ಯಾಧಿಕಾರಿಗಳು, ಎಚ್ಚೆತ್ತುಕೊಂಡು ರಾತ್ರಿ ವೇಳೆ ಅತ್ಯಾಧುನಿಕ 'ಥರ್ಮಲ್ ಡ್ರೋಣ್' ಬಳಸಿ ಹುಲಿಗಳ ಸಂಚಾರದ ಮೇಲೆ ನಿಗಾ ಇಟ್ಟಿದ್ದರು. ಈ ಕಾರ್ಯಚರಣೆ ವೇಳೆ, ಮೃತ ಸ್ಥಿತಿಯಲ್ಲಿ ಹುಲಿಯ ಕಳೇಬರ ಡ್ರೋನ್‌ ಕ್ಯಾಮರಾದಲ್ಲಿ ಪತ್ತೆಯಾಗಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ವನ್ಯಜೀವಿಯ ಸಾವಿಗೆ ಕಾರಣರಾದವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.‌ ಮೃತ ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಎಷ್ಟಿವೆ ಹುಲಿಗಳು?

2022ರ ಅಖಿಲ ಭಾರತ ಹುಲಿ ಗಣತಿಯ (All-India Tiger Estimation) ಪ್ರಕಾರ ರಾಜ್ಯದಲ್ಲಿ ಒಟ್ಟು 563 ಹುಲಿಗಳಿವೆ. ಈ ಮೂಲಕ ಮಧ್ಯಪ್ರದೇಶದ ನಂತರ ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. 2024ರಲ್ಲಿ ನಡೆದ 'ಹಂತ-4'ರ ಸಮೀಕ್ಷೆಯ ಪ್ರಕಾರ, ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ (ಬಂಡೀಪುರ, ನಾಗರಹೊಳೆ, ಭದ್ರ, ಬಿಆರ್‌ಟಿ, ಮತ್ತು ಕಾಳಿ) ಒಟ್ಟು 393 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.

ಹುಲಿಗಳ ಸಾವಿನ ಸಂಖ್ಯೆ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ದತ್ತಾಂಶಗಳ ಪ್ರಕಾರ, 2012 ರಿಂದ 2024ರ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 179 ಹುಲಿಗಳು ಮೃತ ಪಟ್ಟಿದ್ದರೆ, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 166 ಹುಲಿಗಳು ಮೃತ ಪಟ್ಟಿವೆ. 2020 ರಿಂದ 2025ರ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 75 ರಿಂದ 82 ಹುಲಿಗಳು ಮೃತಪಟ್ಟಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ರಾಜ್ಯದ ಪ್ರಮುಖ ಹುಲಿಧಾಮಗಳಾದ ನಾಗರಹೊಳೆಯಲ್ಲಿ 26 ಹಾಗೂ ಬಂಡೀಪುರದಲ್ಲಿ 22 ಹುಲಿಗಳು ಸೇರಿ, ಒಟ್ಟು 48 ಹುಲಿಗಳು ಈ ಐದು ವರ್ಷಗಳ ಅವಧಿಯಲ್ಲಿ ಮೃತಪಟ್ಟಿವೆ.

ಅರಣ್ಯ ಸಚಿವಾಲಯದ ದತ್ತಾಂಶದ ಪ್ರಕಾರ, ಮೃತಪಟ್ಟ 75 ಹುಲಿಗಳಲ್ಲಿ 62 ಹುಲಿಗಳು ವಯಸ್ಸಾಗಿ, ಕಾಯಿಲೆ ಹಾಗೂ ಕಾಳಗದಂತಹ ಸಹಜ ಕಾರಣಗಳಿಂದ ಮೃತಪಟ್ಟಿವೆ. ಉಳಿದ 13 ಹುಲಿಗಳು ವಿಷಪ್ರಾಶನ, ಅಕ್ರಮ ವಿದ್ಯುತ್ ಬೇಲಿ ಮತ್ತು ಉರುಳುಗಳಿಗೆ ಸಿಲುಕಿ ಅಸಹಜವಾಗಿ ಸಾವನ್ನಪ್ಪಿವೆ.

ಕೆಲ ತಿಂಗಳ ಹಿಂದೆಯಷ್ಟೇ ಘೋರ ಘಟನೆ

2025ರ ಜೂನ್‌ ತಿಂಗಳಿನಲ್ಲಿ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ಒಂದೇ ಬಾರಿಗೆ ಐದು ಹುಲಿಗಳನ್ನು ದಾರುಣವಾಗಿ ಕೊಲ್ಲಲಾಗಿತ್ತು. 11 ವರ್ಷದ ತಾಯಿ ಹುಲಿ ಹಾಗೂ ಅದರ 4 ಮರಿಗಳು ಶವವಾಗಿ ಪತ್ತೆಯಾಗಿದವು. ಹುಲಿಗಳು ಹಸುವೊಂದನ್ನು ಬೇಟೆಯಾಡಿ ತಿಂದಿದ್ದವು. ಹೀಗಾಗಿ ಆ ಹಸುವಿನ ಕಳೇಬರಕ್ಕೆ ಕಿಡಿಗೇಡಿಗಳು ವಿಷ ಬೆರೆಸಿದ್ದರಿಂದ ಈ ಭೀಕರ ದುರಂತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂವರನ್ನು ಬಂಧಿಸಲಾಗಿತ್ತು.

ಮಾನವನ ಹಸ್ತಕ್ಷೇಪದಿಂದ ಸಂಭವಿಸುವ ಅಸಹಜ ಸಾವುಗಳು ಹುಲಿ ಸಂತತಿಯ ಉಳಿವಿಗೆ ಬಹುದೊಡ್ಡ ಬೆದರಿಕೆಯಾಗಿವೆ. ಇದರ ಜತೆಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರ್ಮ ಮತ್ತು ಉಗುರುಗಳಿಗಾಗಿ ನಡೆಯುವ ಬೇಟೆ, ಹಾಗೂ ಅರಣ್ಯದ ನಡುವೆ ಹಾದುಹೋಗುವ ಹೆದ್ದಾರಿ ಅಥವಾ ರೈಲು ಮಾರ್ಗಗಳಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.

Read More
Next Story