ಗೃಹಲಕ್ಷ್ಮಿ ಹಣ ಪಾವತಿಗೆ ಆರ್ಥಿಕ ಸಂಕಷ್ಟ; ಹೈಕೋರ್ಟ್‌ನಲ್ಲಿ ಒಪ್ಪಿಕೊಂಡ ಸರ್ಕಾರ
x

ಗೃಹಲಕ್ಷ್ಮಿ ಹಣ ಪಾವತಿಗೆ ಆರ್ಥಿಕ ಸಂಕಷ್ಟ; ಹೈಕೋರ್ಟ್‌ನಲ್ಲಿ ಒಪ್ಪಿಕೊಂಡ ಸರ್ಕಾರ

2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂಬುದು ಸತ್ಯ. ಸರ್ಕಾರದಲ್ಲಿ ಎದುರಾಗಿರುವ ತೀವ್ರ ಹಣಕಾಸಿನ ಕೊರತೆಯ ಕಾರಣದಿಂದಾಗಿಯೇ ವಿತರಿಸಲು ಸಾಧ್ಯವಾಗಿಲ್ಲ.


Click the Play button to hear this message in audio format

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಜಾರಿಯಾದ ದಿನದಿಂದಲೂ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಪರ-ವಿರೋಧ ಚರ್ಚೆಗಳು ತೀವ್ರವಾಗಿ ನಡೆಯುತ್ತಲೇ ಇವೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯ ಅಂಚಿಗೆ ತಲುಪಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸತತ ವಾಗ್ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವು "ರಾಜ್ಯದ ಬೊಕ್ಕಸ ಸದೃಢವಾಗಿದೆ, ಯಾವುದೇ ಆರ್ಥಿಕ ಮುಗ್ಗಟ್ಟಿಲ್ಲ" ಎಂದು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದರು.

ಆದರೆ, ಈಗ ಈ ಎಲ್ಲಾ ರಾಜಕೀಯ ಸಮರ್ಥನೆಗಳ ಮುಸುಕು ಕಳಚಿಬಿದ್ದಿದೆ. ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್ ಮುಂದೆ ಹಾಜರಾಗಿ, "ಹಣಕಾಸಿನ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ" ಎಂದು ಅಧಿಕೃತ ಪ್ರಮಾಣಪತ್ರ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಇರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ.

ಬೆಂಗಳೂರಿನ ಕಮಲಾನಗರದ ಆರ್. ಗಂಗಾ ಹಾಗೂ ನಂದಿನಿ ಲೇಔಟ್‌ನ ನಿವಾಸಿ ಜಿ.ಡಿ. ಪವಿತ್ರಾ ಎಂಬುವರು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2 ಸಾವಿರ ನೆರವು ಸಕಾಲಕ್ಕೆ ತಲುಪುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ಫಲಾನುಭವಿಗಳ ಖಾತೆಗೆ ತಕ್ಷಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ, ಸರ್ಕಾರದ ಪರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಯೋಜನಾಧಿಕಾರಿ ಸೋನಲ್ ಎಸ್. ಐಗರ್ ಅವರು ಮಹತ್ವದ ಆಕ್ಷೇಪಣಾ ಪ್ರಮಾಣಪತ್ರವನ್ನು ಸಲ್ಲಿಸಿದರು.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂಬುದು ಸತ್ಯ. ಸರ್ಕಾರದಲ್ಲಿ ಎದುರಾಗಿರುವ ತೀವ್ರ ಹಣಕಾಸಿನ ಕೊರತೆಯ ಕಾರಣದಿಂದಾಗಿಯೇ ಈ ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ವಿತರಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರ ಲಿಖಿತವಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಮೂಲಕ ಆಡಳಿತಾರೂಢ ನಾಯಕರು ಹೊರಗೆ ಹೇಳುತ್ತಿದ್ದ ಮಾತಿಗೂ, ಆಡಳಿತಾತ್ಮಕ ವಾಸ್ತವಕ್ಕೂ ಇರುವ ಬೃಹತ್ ಅಂತರ ಬಯಲಾಗಿದೆ.

‘ಹಣಕಾಸಿನ ನೆರವು ಹಕ್ಕಲ್ಲ’: ಪಿಐಎಲ್ ವಜಾಕ್ಕೆ ಸರ್ಕಾರದ ವಾದ

ನ್ಯಾಯಾಲಯದಲ್ಲಿ ಆರ್ಥಿಕ ಕೊರತೆಯನ್ನು ಒಪ್ಪಿಕೊಂಡ ಬೆನ್ನಲ್ಲೇ, ಸರ್ಕಾರದ ಪರ ವಕೀಲರು ಅರ್ಜಿದಾರರ ಮನವಿಯನ್ನು ಬಲವಾಗಿ ವಿರೋಧಿಸಿ ವಾದವೊಂದನ್ನು ಮುಂದಿಟ್ಟರು. ಗೃಹಲಕ್ಷ್ಮಿ ಯೋಜನೆಯು ಬಡ ಮಹಿಳೆಯರ ಸಬಲೀಕರಣ ಮತ್ತು ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮವೇ ಹೊರತು, ಇದು ನಾಗರಿಕರ ಮೂಲಭೂತ ಅಥವಾ ಸಂವಿಧಾನಬದ್ಧ ಹಕ್ಕಲ್ಲ. ಸರ್ಕಾರದ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಕಲ್ಯಾಣ ಯೋಜನೆಗಳನ್ನು ನಿರ್ವಹಿಸಲಾಗುತ್ತದೆ. ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆಯಿರುವಾಗ ಫಲಾನುಭವಿಗಳು ಇದನ್ನು ಕಾನೂನುಬದ್ಧ ನಿರೀಕ್ಷೆಯ ಹಕ್ಕೆಂಬಂತೆ ಕೋರ್ಟ್ ಮೂಲಕ ವಸೂಲಿ ಮಾಡಲು ಸಾಧ್ಯವಿಲ್ಲ.

ಹೀಗಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಯಾವುದೇ ಆದೇಶ ನೀಡಬಾರದು ಮತ್ತು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಸರ್ಕಾರ ಮನವಿ ಮಾಡಿತು. ಸರ್ಕಾರದ ಈ ಆಕ್ಷೇಪಣೆಯನ್ನು ದಾಖಲಿಸಿಕೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಸರ್ಕಾರದ ವಾದಕ್ಕೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.

5 ಸಾವಿರ ಕೋಟಿ ರೂ.ಗಿಂತ ಅಧಿಕ ಬಾಕಿ

2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಪ್ರಮುಖ ಭರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಅಧಿಕಾರಕ್ಕೆ ಬಂದ ನಂತರ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವುದಾಗಿ ಘೋಷಿಸಿ ಜಾರಿಗೊಳಿಸಲಾಯಿತು. ಪ್ರಸ್ತುತ ರಾಜ್ಯದಲ್ಲಿ ಸುಮಾರು 1.26 ಕೋಟಿಗೂ ಅಧಿಕ ನೋಂದಾಯಿತ ಮಹಿಳಾ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಈ ಯೋಜನೆಗೆ ಸರ್ಕಾರಕ್ಕೆ ಸರಿಸುಮಾರು 2,500 ಕೋಟಿ ರೂ.ಗಿಂತ ಅಧಿಕ ಅನುದಾನದ ಅಗತ್ಯವಿದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತು ಪಾವತಿಯಾಗದಿರುವುದರಿಂದ, ಒಟ್ಟು ಬಾಕಿ ಮೊತ್ತವೇ ಬರೋಬ್ಬರಿ 5 ಸಾವಿರ ಕೋಟಿ ರೂ. ದಾಟಿದೆ.

ನಕಲಿ ಖಾತೆಗಳ ಆರೋಪ ನಿರಾಕರಣೆ

ಇದೇ ವೇಳೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಮತ್ತು ಒಂದೇ ಫಲಾನುಭವಿಗೆ ಎರಡು ಖಾತೆಗಳ ಮೂಲಕ ಹಣ ಪಾವತಿಯಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸರ್ಕಾರ ಪ್ರಮಾಣಪತ್ರದಲ್ಲಿ ಬಲವಾಗಿ ತಳ್ಳಿಹಾಕಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆಧಾರ್ ಆಧಾರಿತ ನೇರ ನಗದು ವರ್ಗಾವಣೆ ಮೂಲಕವೇ ಜಮೆ ಮಾಡಲಾಗುತ್ತಿದೆ. ಆಧಾರ್ ಸಂಖ್ಯೆ ಪ್ರತಿಯೊಬ್ಬರಿಗೂ ಅನನ್ಯವಾಗಿರುವುದರಿಂದ, ಒಬ್ಬರಿಗೆ ಎರಡು ಬಾರಿ ಹಣ ಹೋಗಲು ತಾಂತ್ರಿಕವಾಗಿ ಯಾವುದೇ ಅವಕಾಶವಿಲ್ಲ. ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್‌ಟಿ ನೋಂದಾಯಿತ ವ್ಯಾಪಾರಿಗಳ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ. ಇಂತಹವರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವ ಪರಿಶೀಲನಾ ಕಾರ್ಯ ಭರದಿಂದ ಸಾಗುತ್ತಿದೆ. ಅರ್ಹ ಬಡ ಮಹಿಳೆಯರಿಗೆ ಯಾವುದೇ ಅನ್ಯಾಯವಾಗದಂತೆ ಈ ತಪಾಸಣೆ ನಡೆಸಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Read More
Next Story