ಗ್ಯಾರಂಟಿ ಯೋಜನೆಗಳಿಗೆ ಬಿಗ್ ಶಾಕ್: ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಕಡ್ಡಾಯ
x

ಗ್ಯಾರಂಟಿ ಯೋಜನೆಗಳಿಗೆ ಬಿಗ್ ಶಾಕ್

ಗ್ಯಾರಂಟಿ ಯೋಜನೆಗಳಿಗೆ ಬಿಗ್ ಶಾಕ್: ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಕಡ್ಡಾಯ

ಅಕ್ರಮ ತಡೆಗೆ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸಿದ ಸರ್ಕಾರ. ಲಂಚಮುಕ್ತ ಕರ್ನಾಟಕಕ್ಕೆ ಸಿಎಂ ಬಿಗಿ ಪಣ.


Click the Play button to hear this message in audio format

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವ ‘ಗೃಹ ಲಕ್ಷ್ಮಿ’ ಮತ್ತು ‘ಗೃಹ ಜ್ಯೋತಿ’ ಯೋಜನೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ದೊಡ್ಡ ಶಾಕ್ ನೀಡಿದೆ. ಯೋಜನೆಗಳ ದುರ್ಬಳಕೆ ಹಾಗೂ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಹಳೆಯ ಫಲಾನುಭವಿಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ನಡೆದ ಸುದೀರ್ಘ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗಿದೆ.

ನೂರು ಕೋಟಿಗೂ ಹೆಚ್ಚು ಹಣ ದುರುಪಯೋಗ

ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ತನಿಖೆಯ ವೇಳೆ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ರೂ. ಪಡೆಯುತ್ತಿದ್ದ ಕೆಲವು ಮಹಿಳಾ ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಹೆಸರಿನಲ್ಲಿ ಬೇರೆಯವರು ಕಾನೂನುಬಾಹಿರವಾಗಿ ಹಣ ಪಡೆಯುತ್ತಿರುವುದು ಪತ್ತೆಯಾಗಿದೆ. ಈಗಾಗಲೇ ಈ ರೀತಿ 100ಕೋಟಿಗೂ ಅಧಿಕ ಹಣ ಅನರ್ಹರ ಪಾಲಾಗಿದೆ. ಹೀಗಾಗಿ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದೇ ಹೆಸರಲ್ಲಿ ಐದಾರು ಮೀಟರ್‌ಗಳು ಪತ್ತೆ

ಇನ್ನು ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಯಲ್ಲೂ ವ್ಯಾಪಕ ಅಕ್ರಮಗಳು ನಡೆದಿವೆ. ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ 5 ರಿಂದ 6 ವಿದ್ಯುತ್ ಮೀಟರ್‌ಗಳಿರುವುದು ಪತ್ತೆಯಾಗಿದೆ. ವಸತಿ ಸಂಪರ್ಕಗಳ ಹೆಸರಿನಲ್ಲಿ ಉಚಿತ ವಿದ್ಯುತ್ ಪಡೆದು, ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಯೋಜನೆಗಳ ಲಾಭ ಪಡೆಯುತ್ತಿರುವವರು ನಿಜವಾಗಿಯೂ ಅದೇ ಮನೆಯಲ್ಲಿ ವಾಸವಿದ್ದಾರೆಯೇ ಅಥವಾ ಬಾಡಿಗೆದಾರರಿದ್ದಾರೆಯೇ ಮತ್ತು ಈ ಸೌಲಭ್ಯ ನಮ್ಮ ರಾಜ್ಯದವರಿಗೆ ಸಿಗುತ್ತಿದೆಯೇ ಅಥವಾ ಹೊರರಾಜ್ಯದವರ ಪಾಲಾಗುತ್ತಿದೆಯೇ ಎಂಬ ಅನುಮಾನಗಳು ಮೂಡಿವೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಹೊಸ ಅರ್ಜಿಯೊಂದಿಗೆ ಫಲಾನುಭವಿಗಳಿಗೆ ಫೋಟೋ ಸಹಿತ ಗುರುತಿನ ಚೀಟಿ ನೀಡಲು ಕೂಡ ಸರ್ಕಾರ ಉದ್ದೇಶಿಸಿದೆ.

ಮನೆಗೆ ಒಬ್ಬರೇ ಯಜಮಾನಿ ಇರಬೇಕು

ಒಂದೇ ಮನೆಯಲ್ಲಿ ಇಬ್ಬರು-ಮೂವರು ಮಹಿಳೆಯರು ಯಜಮಾನಿ ಎಂದು ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವ ಪ್ರಕರಣಗಳೂ ಸರ್ಕಾರದ ಗಮನಕ್ಕೆ ಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಒಂದು ಮನೆಗೆ ಒಬ್ಬರೇ ಯಜಮಾನಿ ಇರಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು. ಸದ್ಯದಲ್ಲೇ ಮೀಟರ್ ರೀಡರ್‌ಗಳ ಮೂಲಕ ಅಥವಾ ನಿಗದಿತ ವ್ಯವಸ್ಥೆಯಡಿ ಹೊಸ ಅರ್ಜಿಗಳನ್ನು ವಿತರಿಸಲಾಗುವುದು. ಸೂಕ್ತ ದಾಖಲೆಗಳನ್ನು ಒದಗಿಸುವ ಎಲ್ಲ ಅರ್ಹರಿಗೂ ಯೋಜನೆ ಮುಂದುವರಿಯಲಿದ್ದು, ಯಾರ ಸೌಲಭ್ಯವನ್ನೂ ಕಡಿತಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ, ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯೂ ಅರ್ಹರಿಗೇ ಸಿಗುವಂತೆ ಮಾಡಲು ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವಿತರಿಸಲಾಗುವುದು ಎಂದು ತಿಳಿಸಿದರು.

ಲಂಚ ಮುಕ್ತ ನಾಡು

ಆಡಳಿತ ಯಂತ್ರಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಸಿ.ಎಂ ಡಿ.ಕೆ ಶಿವಕುಮಾರ್‌, ಕರ್ನಾಟಕವನ್ನು ಸಂಪೂರ್ಣ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು, ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ದೊಡ್ಡ ಫಲಕಗಳನ್ನು ಅಳವಡಿಸಲಾಗುವುದು. ಯಾರಾದರೂ ಲಂಚ ಕೇಳಿದರೆ ದೂರು ನೀಡಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗುತ್ತದೆ. ಯಾವುದೇ ಸಾರ್ವಜನಿಕ ಕೆಲಸಗಳಿಗೂ ಸಾರ್ವಜನಿಕರು 10 ರೂ. ಕೂಡ ಲಂಚ ನೀಡಬಾರದು. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ. ಅಧಿಕಾರಿಗಳ ಮೇಲೆ ಯಾವುದೇ ರೀತಿಯ ಕಾನೂನುಬಾಹಿರ ಒತ್ತಡ ಹೇರಬಾರದು ಎಂದು ತಮ್ಮ ಸಂಪುಟದ ಸಚಿವರು ಹಾಗೂ ಶಾಸಕರಿಗೂ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಟ್ಟಾರೆ, ಗ್ಯಾರಂಟಿ ಯೋಜನೆಗಳ ಸೋರಿಕೆ ತಡೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

Read More
Next Story