
ಗೃಹಲಕ್ಷ್ಮಿಶಾಶ್ವತ, ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ: ಮುಖ್ಯಮಂತ್ರಿ ಅಭಯ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಂವಾದ ಕಾರ್ಯಕ್ರಮವು ಕಣ್ಣೀರ ಕಥೆಗಳು, ಅಪೂರ್ವ ಸಾಧನೆಗಳು ಹಾಗೂ ಹೆಮ್ಮೆಯ ಯಶೋಗಾಥೆಗಳ ಸಂಗಮವಾಯಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಕೇವಲ ತಿಂಗಳಿಗೆ 2 ಸಾವಿರ ರೂ. ನೀಡುವ ಯೋಜನೆಯಾಗಿ ಉಳಿದಿಲ್ಲ, ಬದಲಿಗೆ ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು, ಅವರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಆರ್ಥಿಕ ಸ್ವಾವಲಂಬನೆಯ ಹೊಸ ಭರವಸೆ ಮೂಡಿಸಿದೆ. ಇದಕ್ಕೆ ಸಾಕ್ಷಿಯಾಗಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ ಸಂವಾದ ಕಾರ್ಯಕ್ರಮವು ಕಣ್ಣೀರ ಕಥೆಗಳು, ಅಪೂರ್ವ ಸಾಧನೆಗಳು ಹಾಗೂ ಹೆಮ್ಮೆಯ ಯಶೋಗಾಥೆಗಳ ಸಂಗಮವಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ತಾಯಂದಿರು, ತಾವು ಪಡೆದ ಆರ್ಥಿಕ ಬೆಂಬಲವನ್ನು ಹೇಗೆ ತಮ್ಮ ಕುಟುಂಬದ ಶ್ರೇಯಸ್ಸಿಗೆ, ಮಕ್ಕಳ ಶಿಕ್ಷಣಕ್ಕೆ ಹಾಗೂ ಸಣ್ಣ ಉದ್ಯಮಗಳ ಬೆಳವಣಿಗೆಗೆ ಬಳಸಿಕೊಂಡಿದ್ದೇವೆ ಎಂಬುದನ್ನು ಎಳೆಎಳೆಯಾಗಿ ಮುಖ್ಯಮಂತ್ರಿಗಳ ಮುಂದೆ ಹಂಚಿಕೊಂಡರು.
ಶಿಕ್ಷಣಕ್ಕೆ ಆಸರೆಯಾದ ಗೃಹಲಕ್ಷ್ಮಿ
ಸಂವಾದದಲ್ಲಿ ಎಲ್ಲರ ಗಮನ ಸೆಳೆದದ್ದು ಚಿಕ್ಕಮಗಳೂರು ಜಿಲ್ಲೆಯ ತಾಯಿಯೊಬ್ಬರ ಮಾತು. "ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಪಿಯುಸಿಯಲ್ಲಿ ಶೇ. 98ರಷ್ಟು ಅಂಕ ಪಡೆದ ಆತನ ಕನಸಿಗೆ ಗೃಹಲಕ್ಷ್ಮಿ ಯೋಜನೆಯೇ ಆಸರೆಯಾಯಿತು. ಇದರಿಂದ ಬಂದ ಸುಮಾರು 59 ಸಾವಿರ ರೂ. ಒಗ್ಗೂಡಿಸಿ ಕಾಲೇಜಿನ ಫೀಸ್ ಕಟ್ಟಿದ್ದೇನೆ. ಜತೆಗೆ, ಶಕ್ತಿ ಯೋಜನೆ ಇರುವುದರಿಂದ ಯಾವುದೇ ಆರ್ಥಿಕ ಹೊರೆಯಿಲ್ಲದೆ ಆಗಾಗ್ಗೆ ಮಗನನ್ನು ಊರಿಗೆ ಹೋಗಿ ನೋಡಿಬರಲು ಅನುಕೂಲವಾಗಿದೆ" ಎಂದು ಅವರು ಭಾವುಕರಾಗಿ ನುಡಿದಾಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು.
ಇನ್ನೊಂದೆಡೆ, ಚನ್ನರಾಯಪಟ್ಟಣದ ತಾಯಿಯೊಬ್ಬರು ತಮ್ಮ ಮಗಳು ಆಶಾಳ ನೃತ್ಯ ಪ್ರತಿಭೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಬಗೆಯನ್ನು ವಿವರಿಸಿದರು. "ಪಿಯುಸಿ ಓದುತ್ತಿರುವ ಮಗಳಿಗೆ ನೃತ್ಯದಲ್ಲಿ ಆಸಕ್ತಿ ಇತ್ತು. ಆಕೆಯನ್ನು ಮಲೇಷ್ಯಾದಲ್ಲಿ ನಡೆದ ನೃತ್ಯ ಕಾರ್ಯಕ್ರಮಕ್ಕೆ ಕಳುಹಿಸಲು ಗೃಹಲಕ್ಷ್ಮಿ ಹಣ ಹಾಗೂ ನನ್ನ ಉಳಿತಾಯದ ಹಣ ದೊಡ್ಡ ಆಸರೆಯಾಯಿತು. ಚನ್ನರಾಯಪಟ್ಟಣದ ಸಾಮಾನ್ಯ ಹೆಣ್ಣುಮಗಳು ಮಲೇಷ್ಯಾದವರೆಗೆ ಹೋಗಲು ಕಾಂಗ್ರೆಸ್ ಸರ್ಕಾರದ ಯೋಜನೆ ನೆರವಾಯಿತು" ಎಂದು ಧನ್ಯವಾದ ಸಲ್ಲಿಸಿದರು. ವಿಜಯಪುರದ ಮತ್ತೊಬ್ಬ ತಾಯಿ, ಮಗಳ ಕ್ರೀಡಾ ತರಬೇತಿ ಶುಲ್ಕವನ್ನು ಈ ಹಣದಿಂದಲೇ ಭರಿಸಿ, ಆಕೆ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದನ್ನು ಹೆಮ್ಮೆಯಿಂದ ಹಂಚಿಕೊಂಡರು.
ಸ್ವಾವಲಂಬನೆಗೆ ಮುನ್ನುಡಿ: ಉದ್ಯಮಶೀಲತೆಯ ಯಶೋಗಾಥೆಗಳು
ಗೃಹಲಕ್ಷ್ಮಿ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರನ್ನು ಕೇವಲ ಗೃಹಿಣಿಯರನ್ನಾಗಿ ಉಳಿಸದೆ ಸಣ್ಣ ಉದ್ಯಮಿಗಳನ್ನಾಗಿ ಪರಿವರ್ತಿಸಿದೆ ಎನ್ನುವುದಕ್ಕೆ ಸಂವಾದದಲ್ಲಿ ಹಲವು ಪುರಾವೆಗಳು ಸಿಕ್ಕವು. ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್, ಗೃಹಲಕ್ಷ್ಮಿ ಹಣ ಹಾಗೂ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿದ್ದು, ಇಂದು ತಾವು ತಯಾರಿಸುವ ರಾಗಿ ಉತ್ಪನ್ನಗಳು, ಚಕ್ಕುಲಿ ಹಾಗೂ ಕೋಡುಬಳೆಯನ್ನು ಹೊರರಾಜ್ಯ ಹಾಗೂ ಹೊರದೇಶಗಳಿಗೂ ಕಳುಹಿಸುತ್ತಿರುವುದಾಗಿ ಹೇಳಿದರು. ಮುಖ್ಯಮಂತ್ರಿಗಳಿಗೆ ತಾವೇ ತಯಾರಿಸಿದ ಚಕ್ಕುಲಿಯನ್ನು ಉಡುಗೊರೆಯಾಗಿ ನೀಡಿ ಸಂತಸ ಹಂಚಿಕೊಂಡರು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿಯ ಸ್ವಸಹಾಯ ಸಂಘದ ಮಹಿಳೆಯರು ಕೇವಲ 5 ಕುರಿಗಳಿಂದ ಆರಂಭಿಸಿ, ಇಂದು 300 ಕುರಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ, ಕುರಿ ಮೇಯಿಸಲು 5 ಜನ ಪುರುಷರಿಗೆ ಉದ್ಯೋಗ ನೀಡಿರುವುದಾಗಿ ಹೇಳಿದಾಗ ಇಡೀ ಸಭೆ ನಿಬ್ಬೆರಗಾಯಿತು.
ಚಿತ್ರದುರ್ಗದ ವಿಧವೆಯೊಬ್ಬರು ಗೃಹಲಕ್ಷ್ಮಿ ಮೊತ್ತವನ್ನು ಕೂಡಿಟ್ಟು ರೊಟ್ಟಿ ಮಾಡುವ ಯಂತ್ರ ಖರೀದಿಸಿದ್ದು, ಇಂದು ಇಬ್ಬರು ಮಹಿಳೆಯರಿಗೆ ಕೆಲಸ ಕೊಟ್ಟು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಹೊಲಿಗೆ ಯಂತ್ರ ಖರೀದಿಸಿ, ಇಂದು ಮೂವರಿಗೆ ಕೆಲಸ ನೀಡಿ ನಿತ್ಯ 1,000 ರೂ. ನಿಂದ 2,000 ರೂ.ವರೆಗೆ ದುಡಿಯುತ್ತಿರುವ ರಾಯಚೂರಿನ ಮಹಿಳೆಯೊಬ್ಬರು, "ಈ ಹಣದಿಂದಾಗಿ ನನಗೆ ಗಂಡನ ಮನೆಯಲ್ಲಿ ಗೌರವ ಹೆಚ್ಚಾಗಿದೆ" ಎಂದು ಸ್ವಾಭಿಮಾನದಿಂದ ನುಡಿದರು. ವಿಜಯಪುರದ ಚಡಚಣದ ಮಹಿಳೆ ಜರ್ಸಿ ಹಸು ಖರೀದಿಸಿ ಹೈನುಗಾರಿಕೆ ಮಾಡುತ್ತಿದ್ದರೆ, ಶಿವಮೊಗ್ಗದ ಮಹಿಳೆ ಚಿಕನ್ ವ್ಯಾಪಾರ ಆರಂಭಿಸಿ ಯಶಸ್ಸು ಕಂಡಿದ್ದಾರೆ.
ಮೊಮ್ಮಗಳಿಗೆ ತೊಟ್ಟಿಲು ಕೊಂಡ ಮುಖ್ಯಮಂತ್ರಿ
ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರು ಈ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿ ಕರಕುಶಲ ವಸ್ತುಗಳ ಉದ್ಯಮ ಆರಂಭಿಸಿದ್ದರು. ಅವರು ತಂದಿದ್ದ ಸುಂದರ ಆಟಿಕೆ ತೊಟ್ಟಿಲು ಮತ್ತು ದೀಪವನ್ನು ನೋಡಿ ಮುಖ್ಯಮಂತ್ರಿಗಳು ಮಾರುಹೋದರು. “ಈ ತೊಟ್ಟಿಲನ್ನು ನನ್ನ ಮೊಮ್ಮಗಳಿಗೆ ಕೊಡುತ್ತೇನೆ, ಎಷ್ಟಮ್ಮಾ ಇದರ ಬೆಲೆ?” ಎಂದು ಪ್ರೀತಿಯಿಂದ ವಿಚಾರಿಸಿ, 500 ರೂ. ನೀಡಿ ಅದನ್ನು ಖರೀದಿಸಿದರು. ಈ ಅಪರೂಪದ ಪ್ರಸಂಗ ಮುಖ್ಯಮಂತ್ರಿಗಳ ಜನಸಾಮಾನ್ಯರ ಮೇಲಿನ ಪ್ರೀತಿಗೆ ಸಾಕ್ಷಿಯಾಯಿತು.
ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯೋಜನೆಯ ಮೂಲ ಪ್ರೇರಣೆ ಕುರಿತು ವಿವರಿಸಿದರು. "ವಿರೋಧ ಪಕ್ಷಗಳು ಏನೇ ಅಪಪ್ರಚಾರ ಮಾಡಿದರೂ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇಂದಿರಾ ಗಾಂಧಿಯವರು ತಂದ ವೃದ್ಧಾಪ್ಯ ವೇತನವನ್ನು ಯಾರಾದರೂ ನಿಲ್ಲಿಸಲು ಸಾಧ್ಯವಾಯಿತೇ? ಹಾಗೆಯೇ ಇದು ಶಾಶ್ವತ" ಎಂದು ಭರವಸೆ ನೀಡಿದರು. ಈವರೆಗೆ ಗೃಹಲಕ್ಷ್ಮಿ ಯೋಜನೆಗೆ 86,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ಈ ಮೊತ್ತ 1 ಲಕ್ಷ ಕೋಟಿ ರೂ. ತಲುಪಿದಾಗ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಗೃಹಲಕ್ಷ್ಮಿಯರ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
