
ಗೃಹಜ್ಯೋತಿಗೆ ಕಡ್ಡಾಯ ಮತದಾರರ ಚೀಟಿ: ಮಾಹಿತಿ ಸಂಗ್ರಹಕ್ಕೆ ಸರ್ಕಾರ ಕಸರತ್ತು?
ಗೃಹಜ್ಯೋತಿಗೆ ಮತದಾರರ ಗುರುತಿನ ಚೀಟಿ ಕೇಳುತ್ತಿರುವುದು ಸರ್ಕಾರದ ಬಳಿ ಇರುವ ಮತದಾರರ ಪಟ್ಟಿಯ ವಾಸ್ತವ ಮಾಹಿತಿಯೊಂದಿಗೆ ತಾಳೆ ನೋಡಲು ನಡೆಸುತ್ತಿರುವ ಕಸರತ್ತು ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ ಬಾಗಿಲಿಗೆ ಇಂಧನ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಇದರ ಬೆನ್ನಲ್ಲೇ ಹೊಸದೊಂದು ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಯಾವುದೇ ಸರ್ಕಾರಿ ಯೋಜನೆಗೆ ಕಡ್ಡಾಯವಲ್ಲದ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಲ್ಲದೇ, ಫಲಾನುಭವಿಗಳ ಜಾತಿ ಹಾಗೂ ಪ್ರವರ್ಗಗಳ (ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತ) ವಿವರಗಳನ್ನೂ ಅಪ್‌ಡೇಟ್ ಮಾಡಲಾಗುತ್ತಿದ್ದು, ಸರ್ಕಾರ ಪರೋಕ್ಷವಾಗಿ ಮತದಾರರ ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆ ತಲೆದೋರಿದೆ.
ಈ ಹಿಂದೆ ಕೇವಲ ಆಧಾರ್ ಸಂಖ್ಯೆ ಮತ್ತು ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆಯನ್ನು ಆಧರಿಸಿ ನೀಡಲಾಗುತ್ತಿದ್ದ ಗೃಹ ಜ್ಯೋತಿ ಸೌಲಭ್ಯಕ್ಕೆ, ಇದೀಗ ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಸರ್ಕಾರದ ಆಡಳಿತಾತ್ಮಕ ದಕ್ಷತೆಯೋ ಅಥವಾ ಪರೋಕ್ಷವಾಗಿ ಮತದಾರರ ನೈಜ ದತ್ತಾಂಶವನ್ನು ಸಂಗ್ರಹಿಸುವ ತಂತ್ರವೋ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಚುನಾವಣಾ ಆಯೋಗವು ಸದ್ಯ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರವು ಮನೆ ಮನೆಗೆ ತೆರಳಿ ಮತದಾರರ ಗುರುತಿನ ಚೀಟಿಯ ವಿವರಗಳನ್ನು ಪಡೆಯುತ್ತಿರುವುದು, ಸರ್ಕಾರದ ಬಳಿ ಇರುವ ಮತದಾರರ ಪಟ್ಟಿಯನ್ನು ವಾಸ್ತವಿಕ ಮಾಹಿತಿಯೊಂದಿಗೆ ತಾಳೆ ನೋಡಲು ನಡೆಸುತ್ತಿರುವ ಕಸರತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಸಬ್ಸಿಡಿ ಸೋರಿಕೆ ತಡೆಗಟ್ಟುವ ಕ್ರಮ
ಬೆಸ್ಕಾಂ ಮೂಲಗಳ ಪ್ರಕಾರ, ರಾಜ್ಯದಲ್ಲಿ ನೆಲೆಸಿರುವ ಹೊರರಾಜ್ಯದವರು ಮತ್ತು ಗೊಂದಲಮಯ ದಾಖಲೆಗಳನ್ನು ಹೊಂದಿರುವವರನ್ನು ಸೋಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದ ಅನೇಕರು ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಸಬ್ಸಿಡಿಯ ಲಾಭ ಪಡೆಯುತ್ತಿದ್ದಾರೆ. ಅವರು ತಮ್ಮ ಮೂಲ ರಾಜ್ಯದಲ್ಲಿ ಮತದಾರರ ಹಕ್ಕನ್ನು ಹೊಂದಿರಬಹುದು. ಆದರೆ ಕರ್ನಾಟಕದಲ್ಲಿ ಮಾತ್ರ ಅವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದನ್ನು ತಡೆಗಟ್ಟಲು ಕರ್ನಾಟಕದ ನೋಂದಾಯಿತ ಮತದಾರರಿಗೆ ಮಾತ್ರ ಯೋಜನೆ ಸೀಮಿತಗೊಳಿಸುವುದು ನಮ್ಮ ಉದ್ದೇಶ ಎಂಬ ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ, ಮರುಪರಿಶೀಲನೆ ವೇಳೆ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸಿದಾಗ, ಅವರ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಮತ್ತು ಆರ್‌ಆರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವಂತೆ ತಿಳಿಸಲಾಗುವುದು. ಅವರು ಕರ್ನಾಟಕದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಕಾರ್ಯವಿಧಾನವನ್ನು ಜಾರಿಗೊಳಿಸಲಾಗಿದೆ ಎನ್ನಲಾಗಿದೆ.
ಪ್ರಸ್ತುತ 1.67 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇಂಧನ ಇಲಾಖೆಯ ಮಾಹಿತಿಯ ಪ್ರಕಾರ, ಸರ್ಕಾರವು 2022–23ರಲ್ಲಿ 5,830 ಕೋಟಿ ರೂ., 2024-25ರಲ್ಲಿ 9,158 ಕೋಟಿ ರೂ., 2025-26ರಲ್ಲಿ 10,260 ಕೋಟಿ ರೂ. ಮತ್ತು 2026–27ರಲ್ಲಿ (ಮೇ 31 ರವರೆಗೆ) 1,762 ಕೋಟಿ ರೂ. ಸಬ್ಸಿಡಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಡುಗಡೆ ಮಾಡಿದೆ. ಸರ್ಕಾರಕ್ಕೆ ಸದ್ಯ ಗೃಹ ಜ್ಯೋತಿ ಯೋಜನೆಗಾಗಿ ವರ್ಷಕ್ಕೆ ಸರಾಸರಿ 8 ಸಾವಿರ ಕೋಟಿ ರೂ.ನಿಂದ 10 ಸಾವಿರ ಕೋಟಿ ರೂ. ನಷ್ಟು ಭಾರಿ ಸಬ್ಸಿಡಿ ವೆಚ್ಚವಾಗುತ್ತಿದೆ. ಈ ಮರುಪರಿಶೀಲನೆಯ ಮೂಲಕ ಕನಿಷ್ಠ 200 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಉಳಿತಾಯ ಮಾಡಬಹುದಾಗಿದೆ. ಈ ಉಳಿತಾಯದ ಹಣವನ್ನು ವಿದ್ಯುತ್ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವುದು ಸರ್ಕಾರದ ಯೋಜನೆಯಾಗಿದೆ ಎಂದು ಹೇಳಲಾಗಿದೆ.
ಬಳಕೆದಾರರಲ್ಲಿ ಮೂಡಿದ ಆತಂಕ
ಸರ್ಕಾರದ ಈ ಹೊಸ ನಿಯಮದಿಂದ ಫಲಾನುಭವಿಗಳು ಆತಂಕಕ್ಕೀಡಾಗಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಲಕ್ಷಾಂತರ ಮಂದಿ ವಲಸಿಗರಿದ್ದಾರೆ. ಉದ್ಯೋಗದ ನಿಮಿತ್ತ ಅಥವಾ ಇತರ ಕಾರಣಗಳಿಗಾಗಿ ವಲಸೆ ಬಂದವರಲ್ಲಿ ಅನೇಕರಿಗೆ ಇನ್ನೂ ತಮ್ಮ ಮತದಾರರ ಪಟ್ಟಿಯನ್ನು ಸ್ಥಳಾಂತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಲವರ ಬಳಿ ಆಧಾರ್ ಕಾರ್ಡ್ ಇದೆ, ಆದರೆ ಮತದಾರರ ಗುರುತಿನ ಚೀಟಿ ಇಲ್ಲ. ಇಂತಹ ಸಂದರ್ಭದಲ್ಲಿ ಸೌಲಭ್ಯದ ಹಕ್ಕನ್ನು ಕಳೆದುಕೊಳ್ಳಬಹುದೇ ಎಂಬ ಪ್ರಶ್ನೆ ಮೂಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜೀವನ ಕಟ್ಟಿಕೊಳ್ಳಲು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಸಾಕಾಷ್ಟು ಮಂದಿ ದಶಕಗಳೇ ಕಳೆದಿದ್ದರೂ, ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡಿಸಿಕೊಂಡಿಲ್ಲ. ಹೊಸ ನಿಯಮದಿಂದ ಯೋಜನೆಯಿಂದ ಹೊರಬೀಳುವ ಭೀತಿ ಉಂಟಾಗಿದೆ.
ಸ್ಮಾರ್ಟ್ ಕಾರ್ಡ್ ವಿತರಣೆಗೆ ಚಿಂತನೆ?
ಸಾರಿಗೆ ಇಲಾಖೆಯ ಶಕ್ತಿ ಯೋಜನೆಯಂತೆ, ಇಂಧನ ಇಲಾಖೆಯೂ ಫಲಾನುಭವಿಗಳಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕಾರ್ಡ್‌ನಲ್ಲಿ ಆಧಾರ್, ಆರ್‌ಆರ್ ಸಂಖ್ಯೆ ಮತ್ತು ಮತದಾರ ಗುರುತಿನ ಚೀಟಿ ಲಿಂಕ್ ಆಗಿರುತ್ತದೆ. ಆದರೆ, ಒಬ್ಬ ವ್ಯಕ್ತಿ ಮನೆ ಬದಲಾಯಿಸಿದರೆ ಅಥವಾ ಬಾಡಿಗೆ ಮನೆ ಬದಲಿಸಿದರೆ ಈ ಕಾರ್ಡ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟ ಮಾರ್ಗಸೂಚಿಗಳು ಇಲ್ಲ. ಬಾಡಿಗೆದಾರರ ವಿಚಾರದಲ್ಲಿ ಈ ಹೊಸ ನಿಯಮಗಳು ಹೇಗೆ ಅನ್ವಯವಾಗುತ್ತವೆ? ಎಂಬುದರ ಬಗ್ಗೆಯೂ ಇಂಧನ ಇಲಾಖೆಯಲ್ಲಿ ಸ್ಪಷ್ಟ ಉತ್ತರ ಇಲ್ಲವಾಗಿದೆ.
ಗ್ಯಾರಂಟಿ ಹೊರೆ ಕಡಿತಕ್ಕೆ ಕ್ರಮ?
ಸರ್ಕಾರಕ್ಕೆ ಸದ್ಯ ಆರ್ಥಿಕ ಒತ್ತಡ ಹೆಚ್ಚಾಗಿರುವುದು ಸತ್ಯ. ಗ್ಯಾರಂಟಿಗಳ ಹೊರೆಯಿಂದಾಗಿ ಖಜಾನೆಯ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಅನಿವಾರ್ಯವಾಗಿ ಇಂತಹ ಕಠಿಣ ಕ್ರಮಗಳಿಗೆ ಮುಂದಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಈ ನಡುವೆ, ಈ ಪ್ರಕ್ರಿಯೆಯು ಬಡಜನರ ಮೇಲೆ ಬೀರುತ್ತಿರುವ ಪರಿಣಾಮ, ದಾಖಲೆಗಳಿಲ್ಲದವರಿಗೆ ಆಗುವ ಅನ್ಯಾಯ ಮತ್ತು ಖಾಸಗಿತನದ ಉಲ್ಲಂಘನೆಯಂತಹ ವಿಷಯಗಳು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರಗಳಾಗಿ ಸಿಕ್ಕಿವೆ.

