
ಮೆಟ್ರೋ ದರ ಏರಿಕೆ ಬೆನ್ನಲ್ಲೇ ಯೋಜನೆ ಲಾಭಕ್ಕಾಗಿ ಶುರುವಾಯ್ತು ಕಿತ್ತಾಟ
ಮೆಟ್ರೋ ನಿಗಮದಲ್ಲಿ ನಿವೃತ್ತ ಅಧಿಕಾರಿಗಳಿಗೆ ಮಾಸಿಕ 3 ರಿಂದ 4 ಲಕ್ಷ ರೂ. ಸಂಬಳ ನೀಡಿ ನೇಮಿಸಿಕೊಳ್ಳಲಾಗುತ್ತಿದೆ. ಇದರ ಅವಶ್ಯಕತೆ ಏನಿದೆ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ʼನಮ್ಮ ಮೆಟ್ರೋʼ ಪ್ರಯಾಣ ದರದ ಜಟಾಪಟಿ ಇದೀಗ ಯೋಜನೆಯ ಲಾಭ ಪಡೆಯುವುದರತ್ತ ಹೊರಳಿದೆ. ಮೆಟ್ರೋ ವಿಸ್ತರಣೆಗೆ ಅನುದಾನ ನೀಡದೇ ಹೋದರೂ ಯೋಜನೆಯ ಲಾಭ ಪಡೆಯಲು ಬಿಜೆಪಿಗರು ಮುಂದಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ.
"ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಅವಧಿಯಲ್ಲಿ ಮೆಟ್ರೋ ತಂದೆವು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದಾಗ ಯೋಜನೆ ಅನುಷ್ಠಾನವಾಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಮೆಟ್ರೋ ಯೋಜನೆಯನ್ನು ʼಬಿಳಿಯಾನೆʼ ಎಂದು ಟೀಕಿಸಿದ್ದರು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಠಕ್ಕರ್ ನೀಡಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಜನರ ಮೇಲೆ ದರ ಏರಿಕೆಯ ಹೊರೆ ಹೇರುತ್ತಿದೆ. ಇದನ್ನೆಲ್ಲಾ ಸಹಿಸಿಕೊಳ್ಳಲು ಬೆಂಗಳೂರು ಹಾಗೂ ರಾಜ್ಯದ ಜನರು ದಡ್ಡರಲ್ಲ ಎಂದು ಕಿಡಿಕಾರಿದ್ದಾರೆ.
ಯೋಜನೆ ಲಾಭ ಪಡೆಯಲು ಬಿಜೆಪಿ ಯತ್ನ
ಮೆಟ್ರೋ ಪ್ರಯಾಣ ದರ ಹೆಚ್ಚಳದ ನೆಪದಲ್ಲೇ ಬಿಜೆಪಿ ನಾಯಕರು ಯೋಜನೆ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಮೆಟ್ರೋ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ 50:50 ಅನುಪಾತದಲ್ಲಿ ಅನುದಾನ ಒದಗಿಸಬೇಕು. ಆದರೆ, ಈವರೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಿಲ್ಲ. ಶೇ 87 ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಕೇವಲ ಶೇ 12 ರಷ್ಟು ಅನುದಾನ ನೀಡಿದೆ. ಹೀಗಿರುವಾಗ ಯೋಜನೆ ಲಾಭ ಪಡೆಯಲು ಬಿಜೆಪಿಗರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಟೀಕಿಸಿದ್ದಾರೆ.
ದರ ಹೆಚ್ಚಳದಲ್ಲಿ ಕೇಂದ್ರದ ಪಾತ್ರವಿಲ್ಲ
ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಆದರೂ, ಜನರ ಕಾಳಜಿ ದೃಷ್ಟಿಯಿಂದ ನಗರಾಭಿವೃದ್ಧಿ ಸಚಿವಾಲಯದಿಂದ ದರ ಏರಿಕೆ ತಡೆ ನೀಡಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ʼಮೆಟ್ರೋ ದರ ಏರಿಸದಂತೆ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲʼ ಎಂಬ ಸರ್ಕಾರದ ವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಪ್ರತಿ ವಿಷಯವೂ ಲಿಖಿತವಾಗಿಯೇ ಇರಬೇಕಿಲ್ಲ, ಕೇಂದ್ರದ ಸೂಚನೆಗಳನ್ನು ಅಧಿಕಾರಿಗಳು ಪಾಲಿಸಬೇಕು. ಜನರ ಮೇಲೆ ಹೊರೆ ಹಾಕುವುದು ಸರಿಯಲ್ಲʼ ಕಿಡಿಕಾರಿದ್ದಾರೆ.
ದೇಶದಲ್ಲಿ ದೆಹಲಿ, ಕೊಲ್ಕತ್ತ, ಮುಂಬೈನಲ್ಲೂ ಮೆಟ್ರೋ ಇದೆ. ಎಲ್ಲಿಯೂ ಬೆಲೆ ಜಾಸ್ತಿ ಇಲ್ಲ. ಆದರೆ, ಕರ್ನಾಟಕ ಸರ್ಕಾರದ ಕಣ್ಣು ಮೆಟ್ರೋ ಮೇಲೆ ಬಿದ್ದಿದೆ. ನಾವು ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದಾಗ 50 ರೂ.ಗಳಿದ್ದ ಬೆಟರ್‌ಮೆಂಟ್ ಚಾರ್ಜ್ ಅನ್ನು 100 ರೂ.ಗಳಿಗೆ ಹೆಚ್ಚಿಸದೇ ಹೋಗಿದ್ದರೆ ಬೆಂಗಳೂರು ಕಥೆ ಏನಾಗುತ್ತಿತ್ತು ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಅಧಿಕಾರಿಗಳ ದುಂದುವೆಚ್ಚಕ್ಕೆ ಕಡಿವಾಣ ಅಗತ್ಯ
ಮೆಟ್ರೋ ನಿಗಮದಲ್ಲಿ ನಿವೃತ್ತ ಅಧಿಕಾರಿಗಳಿಗೆ ಮಾಸಿಕ 3 ರಿಂದ 4 ಲಕ್ಷ ರೂ. ಸಂಬಳ ನೀಡಿ ನೇಮಿಸಿಕೊಳ್ಳಲಾಗುತ್ತಿದೆ. ಇದರ ಅವಶ್ಯಕತೆ ಏನಿದೆ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ತಾಂತ್ರಿಕತೆ ಬೆಳೆದಿರುವ ಈ ಕಾಲದಲ್ಲಿ ಇಂತಹ ವೆಚ್ಚಗಳು ಅನಗತ್ಯ.ಇದರಿಂದ ಮೆಟ್ರೋದ ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ವಾಸಿಸುವವರೆಲ್ಲರೂ ಶ್ರೀಮಂತರಲ್ಲ. ಮಧ್ಯಮ ವರ್ಗದವರು. ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಅವಲಂಬಿಸಿದ್ದಾರೆ. ಆಟೋ ಅಥವಾ ಟ್ಯಾಕ್ಸಿಗಳಿಗಿಂತ ಸುಲಭವಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಇಂತಹ ಸಂದರ್ಭದಲ್ಲಿ ದರ ಹೆಚ್ಚಳ ಮಾಡಿ, ಜನರಿಗೆ ಅನ್ಯಾಯ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದರ ಏರಿಕೆ ಜವಾಬ್ದಾರಿ ಯಾರದ್ದು?
ಸಂಸದ ತೇಜಸ್ವಿ ಸೂರ್ಯ ಶನಿವಾರವಷ್ಟೇ ಕೇಂದ್ರ ಸರ್ಕಾರವು ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ತಡೆ ನೀಡಿದೆ ಎಂದು ಹೇಳಿದ್ದರು. ಕಳೆದ ಕೆಲ ದಿನಗಳ ಹಿಂದೆ ಇದೇ ತೇಜಸ್ವಿ ಸೂರ್ಯ ಅವರು ದರ ಏರಿಕೆಗೂ, ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಬೆಲೆ ಏರಿಕೆಗೆ ಕೇಂದ್ರದ ಜವಾಬ್ದಾರಿ ಅಲ್ಲದೇ ಹೋದರೆ ದರ ಏರಿಕೆಗೆ ಯಾವ ರೀತಿ ತಡೆ ನೀಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.
ಇದೀಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೂಡ ಇದೇ ಮಾತು ಉಚ್ಚರಿಸಿರುವುದು ಸಾರ್ವಜನಿಕರಲ್ಲಿ ಮೆಟ್ರೋ ದರ ಏರಿಕೆಯ ವಿಚಾರ ತೀವ್ರ ಗೊಂದಲ ಸೃಷ್ಟಿಸಿದೆ.

