GBA wakes up to
x

ವರದಿ ಮಾಡುವ ಮೊದಲು ಹಾಗೂ ನಂತರದ ಪೋಟೋ (ಚಿತ್ರ: ರಘು ಆರ್‌.ಡಿ.)

'ದ ಫೆಡರಲ್ ಕರ್ನಾಟಕ' ವರದಿಗೆ ಎಚ್ಚೆತ್ತ ಜಿಬಿಎ: ವಿಠ್ಠಲ್ ಮಲ್ಯ ರಸ್ತೆಯಲ್ಲಿ ಬಾಯ್ತೆರೆದಿದ್ದ ಮ್ಯಾನ್‌ಹೋಲ್ ಬಂದ್

ಕಂಠೀರವ ಕ್ರೀಡಾಂಗಣದ ಸಮೀಪವಿರುವ ಐಟಿಸಿ ಹೋಟೆಲ್‌ ಮುಂಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಮ್ಯಾನ್‌ಹೋಲ್‌ವೊಂದು ತೆರೆದುಕೊಂಡಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಡುವಂತಾಗಿತ್ತು.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಯಿಂದ ಕೂಗಳತೆ ದೂರದಲ್ಲಿರುವ ವಿಠ್ಠಲ್‌ ಮಲ್ಯ ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಯ್ತೆರೆದು ನಿಂತಿದ್ದ ಮ್ಯಾನ್‌ಹೋಲ್‌ ಅನ್ನು ಕೊನೆಗೂ ಮುಚ್ಚಲಾಗಿದೆ. ಈ ಕುರಿತು 'ದ ಫೆಡರಲ್‌ ಕರ್ನಾಟಕ' ಪ್ರಕಟಿಸಿದ್ದ ವಿಡಿಯೋ ವರದಿಗೆ ತ್ವರಿತವಾಗಿ ಸ್ಪಂದಿಸಿರುವ ಜಿಬಿಎ ಅಧಿಕಾರಿಗಳು, ವಾಹನ ಸವಾರರ ಆತಂಕವನ್ನು ದೂರ ಮಾಡಿದ್ದಾರೆ. ಅತ್ಯಂತ ಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿನ ಗಂಭೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲಾಗಿದೆ.

ವಾಹನ ಸವಾರರಿಗೆ ತಪ್ಪಿದ ಕಂಟಕ

ಕಂಠೀರವ ಕ್ರೀಡಾಂಗಣದ ಸಮೀಪವಿರುವ ಐಟಿಸಿ ಹೋಟೆಲ್‌ ಮುಂಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಮ್ಯಾನ್‌ಹೋಲ್‌ವೊಂದು ತೆರೆದುಕೊಂಡಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಡುವಂತಾಗಿತ್ತು. ರಸ್ತೆಯ ಮಧ್ಯಭಾಗದಲ್ಲಿಯೇ ಇದ್ದ ಈ ಅಪಾಯಕಾರಿ ಗುಂಡಿಯಿಂದಾಗಿ ನಿತ್ಯವೂ ಅಪಘಾತದ ಭೀತಿ ಎದುರಾಗಿತ್ತು. ಈ ಗಂಭೀರ ಸಮಸ್ಯೆಯನ್ನು ಎತ್ತಿಹಿಡಿದ 'ದ ಫೆಡರಲ್‌ ಕರ್ನಾಟಕ', ಸ್ಥಳದ ವಸ್ತುಸ್ಥಿತಿಯನ್ನು ವಿಡಿಯೋ ವರದಿ ಮೂಲಕ ಭಿತ್ತರಿಸಿತ್ತು. ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಶೀಘ್ರವಾಗಿ ಈ ಮ್ಯಾನ್‌ಹೋಲ್‌ ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಿ, ಆಗ್ರಹಿಸಿತ್ತು.

ಎಚ್ಚೆತ್ತ ಅಧಿಕಾರಿಗಳಿಂದ ತ್ವರಿತ ಕ್ರಮ

ಶಿವಾಜಿನಗರ, ಶಾಂತಿನಗರ ಹಾಗೂ ಎಂ.ಜಿ. ರಸ್ತೆಯಂತಹ ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ರಿಚ್‌ಮಂಡ್‌ ವೃತ್ತದ ಸಮೀಪವೇ ಈ ಮ್ಯಾನ್‌ಹೋಲ್‌ ತೆರೆದುಕೊಂಡಿದ್ದರೂ, ಅಧಿಕಾರಿಗಳು ಕೇವಲ ಬ್ಯಾರಿಕೇಡ್‌ ಅಡ್ಡವಿಟ್ಟು ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ನಿರಂತರ ಟ್ರಾಫಿಕ್ ದಟ್ಟಣೆ ಇರುವ ಈ ರಸ್ತೆಯಲ್ಲಿನ ಅವ್ಯವಸ್ಥೆಗೆ ವಾಹನ ಸವಾರರು ಹೈರಾಣಾಗಿದ್ದರು. ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಮುನ್ನವೇ ಆಡಳಿತ ಯಂತ್ರ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವರದಿಯ ಬೆನ್ನಲ್ಲೇ ಎಚ್ಚೆತ್ತು ಕಾರ್ಯಪ್ರವೃತ್ತರಾದ ಜಿಬಿಎ ಅಧಿಕಾರಿಗಳು, ಈಗ ಮ್ಯಾನ್‌ಹೋಲ್‌ ಅನ್ನು ಸಂಪೂರ್ಣವಾಗಿ ಮುಚ್ಚಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮ್ಯಾನ್‌ಹೋಲ್‌ ಮುಚ್ಚುವಂತೆ ʼದ ಫೆಡರಲ್‌ ಕರ್ನಾಟಕʼ ಮಾಡಿದ್ದ ವರದಿ

Read More
Next Story