
ಸೋಲದೇವನಹಳ್ಳಿ ರೈಲು ಡಿಪೊ: ಬೆಂಗಳೂರು ಉಪನಗರ ರೈಲು ಜಾಲಕ್ಕೆ ಹೊಸ ಬಲ
ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಆಸಕ್ತ ಗುತ್ತಿಗೆದಾರರು ಆ.12ರೊಳಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಡಿಪೊ ಸೋಲದೇವನಹಳ್ಳಿ ರೈಲು ನಿಲ್ದಾಣ ಬಳಿಯ ಚಿಕ್ಕಬಾಣಾವರ ಬಳಿ ತಲೆ ಎತ್ತಲಿದೆ.
ಟ್ರಾಫಿಕ್ ದಟ್ಟಣೆಯಿಂದ ತತ್ತರಿಸುತ್ತಿರುವ ಸಿಲಿಕಾನ್ ಸಿಟಿಯ ಲಕ್ಷಾಂತರ ಪ್ರಯಾಣಿಕರ ಕನಸಿನ ಕೂಸಾದ ಬೆಂಗಳೂರು ಉಪನಗರ ರೈಲು ಯೋಜನೆ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಯೋಜನೆಯ ಸುಗಮ ಕಾರ್ಯಾಚರಣೆಗೆ ಬೆನ್ನೆಲುಬಾಗಿ ನಿಲ್ಲಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ ನಿರ್ಮಾಣಕ್ಕೆ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ ಚಾಲನೆ ನೀಡಿದ್ದು, ಇದಕ್ಕಾಗಿ ಟೆಂಡರ್ ಆಹ್ವಾನಿಸಿದೆ.
ಈ ಬೃಹತ್ ನಿರ್ವಹಣಾ ಘಟಕದ ನಿರ್ಮಾಣಕ್ಕಾಗಿ ಬಿ-ರೈಡ್ ಸಂಸ್ಥೆಯು ಜಿಎಸ್‌ಟಿ ಹೊರತುಪಡಿಸಿ 200.03 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಿದೆ. ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಆಸಕ್ತ ಗುತ್ತಿಗೆದಾರರು ಆ.12ರೊಳಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಡಿಪೊ ಸೋಲದೇವನಹಳ್ಳಿ ರೈಲು ನಿಲ್ದಾಣದ ಸಮೀಪದ ಚಿಕ್ಕಬಾಣಾವರ ಬಳಿ ತಲೆ ಎತ್ತಲಿದೆ. ಈ ಯೋಜನೆಗಾಗಿ ಸುಮಾರು 26 ಎಕರೆ ಖಾಸಗಿ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ, ಇದು ಯೋಜನೆಯ ವೇಗಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದಷ್ಟೇ, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ 153 ಆಧುನಿಕ ಬೋಗಿಗಳ ಪೂರೈಕೆಗಾಗಿ ಅಧಿಕೃತ ಕಾರ್ಯಾದೇಶ ನೀಡಲಾಗಿತ್ತು. ಈ ನೂತನ ರೈಲುಗಳು ಬೆಂಗಳೂರಿನ ಹಳಿಗಳ ಮೇಲೆ ಸಂಚರಿಸಲು ಆರಂಭಿಸಿದಾಗ, ಅವುಗಳಿಗೆ ನಿಯಮಿತ ನಿರ್ವಹಣೆ, ತಪಾಸಣೆ ಮತ್ತು ದುರಸ್ತಿ ಅತ್ಯಗತ್ಯ.
ಈ ಕುರಿತು ಬಿ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಮಾತನಾಡಿ, "ಯಾವುದೇ ಉತ್ತಮ ಉಪನಗರ ರೈಲು ಜಾಲಕ್ಕೆ ಅತ್ಯಾಧುನಿಕ ನಿರ್ವಹಣಾ ಘಟಕವು ಹೃದಯವಿದ್ದಂತೆ. 153 ಅತ್ಯಾಧುನಿಕ ಬೋಗಿಗಳ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗಾಗಿ ಸೋಲದೇವನಹಳ್ಳಿ ಡೆಪೊ ವಿಶ್ವದರ್ಜೆಯ ಕಾರ್ಯಾಗಾರವನ್ನು ಒದಗಿಸಲಿದೆ. ಬೆಂಗಳೂರಿನ ನಾಗರಿಕರಿಗೆ ಹೈ ಪ್ರೀಕ್ವೆನ್ಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಪ್ರಯಾಣದ ಸೌಲಭ್ಯ ಒದಗಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ. ಈ ಡೆಪೊ ಮುಖ್ಯವಾಗಿ ಕಾರಿಡಾರ್-2 (ಬೈಯಪ್ಪನಹಳ್ಳಿ-ಚಕ್ಕಬಾಣಾವರ) ಮತ್ತು ಕಾರಿಡಾರ್-4 (ಕೈವಾರ-ಬಾಣಸವಾಡಿ) ಗಳ ರೈಲುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಸಂಪೂರ್ಣ ಹೊಣೆ ಹೊರಲಿದೆ.
ಅತ್ಯಾಧುನಿಕ ತಂತ್ರಜ್ಞಾನ -ಸೌಲಭ್ಯಗಳು
ಸೋಲದೇವನಹಳ್ಳಿ ಡೆಪೊ ಕೇವಲ ರೈಲು ನಿಲುಗಡೆಯ ಸ್ಥಳವಲ್ಲ, ಇದು ಒಂದು ತಾಂತ್ರಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಸ್ಟೇಬ್ಲಿಂಗ್ ಲೈನ್‌ಗಳು ರೈಲು ರಾತ್ರಿಯ ವೇಳೆ ಅಥವಾ ಕಾರ್ಯಾಚರಣೆ ಇಲ್ಲದ ಸಮಯದಲ್ಲಿ ಸುರಕ್ಷಿತವಾಗಿ ನಿಲ್ಲಲು ಇರುವ ತಾಂತ್ರಿಕ ಮಾರ್ಗಗಳಾಗಿವೆ. ವರ್ಕ್‌ಶಾಪ್ ಲೈನ್‌ಗಳು ಮತ್ತು ಇನ್ಸ್‌ಪೆಕ್ಷನ್ ಬೇ ರೈಲುಗಳ ಎಂಜಿನ್ ಮತ್ತು ಬಿಡಿಭಾಗಗಳ ತಾಂತ್ರಿಕ ತಪಾಸಣೆ ನಡೆಸಲು ಇಲ್ಲಿ ವಿಶೇಷ ವ್ಯವಸ್ಥೆ ಇರಲಿದೆ. ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅತ್ಯಾಧುನಿಕ ಸ್ವಯಂಚಾಲಿತ ಯಂತ್ರಗಳ ಮೂಲಕ ರೈಲುಗಳನ್ನು ತೊಳೆಯುವ ವ್ಯವಸ್ಥೆಯಾಗಿದೆ.
ಬಿ-ರೈಡ್ ಸಂಸ್ಥೆಯು ಕೇವಲ ರೈಲು ಸಾರಿಗೆಯತ್ತ ಮಾತ್ರ ಗಮನಹರಿಸದೆ, ಪರಿಸರ ಕಾಳಜಿಯನ್ನೂ ಪ್ರದರ್ಶಿಸಿದೆ. ಸಂಸ್ಥೆಯ ನೆಟ್-ಝೀರೋ ಕಾರ್ಬನ್ ನೀತಿಗೆ ಅನುಗುಣವಾಗಿ, ಈ ಘಟಕದಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಅಲ್ಲದೆ, ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯು ಜರ್ಮನಿಯ ಕೆಎಫ್‌ಡಬ್ಲ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಸಾಕಾರಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಈ ಘಟಕವು, ಮುಂದಿನ ದಶಕಗಳಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಬೆಂಗಳೂರು ಉಪನಗರ ರೈಲು ಯೋಜನೆಯು ಕೇವಲ ರೈಲು ಹಳಿಗಳ ನಿರ್ಮಾಣವಲ್ಲ, ಅದು ನಗರದ ಸಾರಿಗೆ ಜಾಲದಲ್ಲಿ ಕ್ರಾಂತಿಕಾರಿ ಬದಲಾವಣೆ. ಸೋಲದೇವನಹಳ್ಳಿ ನಿರ್ವಹಣಾ ಘಟಕದ ನಿರ್ಮಾಣವು ಈ ಯೋಜನೆಯಲ್ಲಿನ ಪ್ರಮುಖ ಕೊಂಡಿಯಾಗಿದೆ. ಕೋವಿಡ್-ನಂತರದ ದಿನಗಳಲ್ಲಿ ನಗರದ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಉಪನಗರ ರೈಲು ಯೋಜನೆ ಮತ್ತು ಅದಕ್ಕೆ ಪೂರಕವಾದ ನಿರ್ವಹಣಾ ವ್ಯವಸ್ಥೆಗಳು ಬೆಂಗಳೂರಿಗರಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

