
ಬಿಐಎಎಲ್‌ನಲ್ಲಿ 'ಬೆಂಗಳೂರಿನ ಆತ್ಮ' ಅನಾವರಣ; ಟರ್ಮಿನಲ್-2 ಮೆರಗು ಹೆಚ್ಚಿಸಿದ ಕಲಾಕೃತಿ
ಬೆಂಗಳೂರು ನಗರವು ಹೇಗೆ ಭಿನ್ನ-ವಿಭಿನ್ನ ಸಂಸ್ಕೃತಿಗಳು, ನಾವೀನ್ಯತೆ ಹಾಗೂ ಸೃಜನಶೀಲತೆಯ ಸಂಗಮವಾಗಿದೆ ಎಂಬುದನ್ನು ಕಲಾಕೃತಿಯಲ್ಲಿ ಪ್ರದರ್ಶಿಸಲಾಗಿದೆ.
ಸಿಲಿಕಾನ್ ಸಿಟಿ ಎಂದೇ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರಿನ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬೆಂಗಳೂರಿನ ಆತ್ಮ' ಹೆಸರಿನ ಸುಂದರ ಹಾಗೂ ಬೃಹತ್ ಕಲಾಕೃತಿ ನಿರ್ಮಿಸಲಾಗಿದೆ.
ಬಯೊಕಾನ್ ಫೌಂಡೇಷನ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಸಹಯೋಗದಲ್ಲಿ ಈ ಕಲಾಕೃತಿಯನ್ನು ಟರ್ಮಿನಲ್-2ರ ಮುಂಭಾಗ ಸ್ಥಾಪಿಸಲಾಗಿದೆ. ಸ್ಪೇನ್‌ನ ಖ್ಯಾತ ಕಲಾಕಾರ ಜೌಮೆ ಪ್ಲೆನ್ಸಾ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಶಿಲ್ಪವು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.
ಭಾರತದಲ್ಲಿರುವ ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಅವರು ಕಲಾಕೃತಿಯನ್ನು ಅನಾವರಣಗೊಳಿಸಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್ ಮತ್ತು ಕಲಾಕೃತಿಯ ರೂವಾರಿ ಜೌಮೆ ಪ್ಲೆನ್ಸಾ ಇದ್ದರು.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ಬೆಂಗಳೂರು ಆತ್ಮ ಹೆಸರಿನ ಕಲಾಕೃತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುಂದಾರ್ ಶಾ, ಪ್ರೆಂಚ್ ರಾಯಭಾರಿ ಅನಾವರಣ ಮಾಡಿದರು
ಕಲಾಕೃತಿಯ ವೈಶಿಷ್ಟ್ಯ ಏನು?
ಬಣ್ಣ ಬಳಿದಿರುವ ಸ್ಟೇನ್‌ಲೆಸ್ ಸ್ಟೀಲ್ ಲೋಹದಿಂದ ಕಲಾಕೃತಿ ನಿರ್ಮಿಸಲಾಗಿದೆ. ಇದು 500 x 319 x 375 ಸೆಂ.ಮೀ ಗಾತ್ರ ಹೊಂದಿದೆ. ಬೆಂಗಳೂರು ನಗರವು ಹೇಗೆ ಭಿನ್ನ-ವಿಭಿನ್ನ ಸಂಸ್ಕೃತಿಗಳು, ನಾವೀನ್ಯತೆ ಹಾಗೂ ಸೃಜನಶೀಲತೆಯ ಸಂಗಮವಾಗಿದೆ ಎಂಬುದನ್ನು ಕಲಾಕೃತಿಯಲ್ಲಿ ಪ್ರದರ್ಶಿಸಲಾಗಿದೆ. ಕಲಾವಿದ ಜೌಮೆ ಪ್ಲೆನ್ಸಾ ಅವರು ಶಿಕಾಗೊ, ನ್ಯೂಯಾರ್ಕ್, ಲಂಡನ್, ಟೋಕಿಯೊ, ಬಾರ್ಸಿಲೋನಾ, ಮ್ಯಾಡ್ರಿಡ್ ಸೇರಿ ಜಗತ್ತಿನ ಬಹುದೊಡ್ಡ ಮಹಾನಗರಗಳಲ್ಲಿ ಸಾರ್ವಜನಿಕ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.
ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮಾತನಾಡಿ, "ನಗರದ ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಲ್ಲ. ಕಲೆ ಮತ್ತು ಸಂಸ್ಕೃತಿಯಲ್ಲೂ ಹೂಡಿಕೆ ಮಾಡುವುದು ಅತ್ಯಗತ್ಯ ಎಂಬುದು ಬಯೊಕಾನ್ ಫೌಂಡೇಷನ್ ನಂಬಿಕೆಯಾಗಿದೆ. ಇಂತಹ ಸಾರ್ವಜನಿಕ ಕಲಾಕೃತಿಗಳು ನಾಗರಿಕರು ಬಳಸುವ ಸ್ಥಳಗಳಿಗೆ ಮಾನವೀಯತೆಯ ಸ್ಪರ್ಶ ನೀಡುತ್ತವೆ. 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪದ ಸ್ಥಾಪನೆಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಚಾರ,” ಎಂದು ತಿಳಿಸಿದರು.
ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಪ್ರತಿಕ್ರಿಯಿಸಿ, "ವಿಮಾನ ನಿಲ್ದಾಣದ ಟರ್ಮಿನಲ್ -2ನ್ನು ಕೇವಲ ಪ್ರಯಾಣದ ತಾಣವಾಗಿಸದೇ ಸಾಂಸ್ಕೃತಿಕ ಹೆಬ್ಬಾಗಿಲಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಕಲೆ ಮತ್ತು ಮೂಲಸೌಕರ್ಯಗಳ ಅದ್ಭುತ ಸಮ್ಮಿಲನವಿದೆ. ಜೌಮೆ ಪ್ಲೆನ್ಸಾ ಅವರ ಕಲಾಕೃತಿಯು, ಜಾಗತಿಕವಾಗಿ ಸಂಪರ್ಕ ಹೊಂದಿರುವ ಜೊತೆಗೆ ನಮ್ಮ ಮೂಲ ವೈವಿಧ್ಯತೆ ಎತ್ತಿಹಿಡಿಯುತ್ತದೆ. ಲಕ್ಷಾಂತರ ದೇಶ-ವಿದೇಶಿ ಪ್ರಯಾಣಿಕರಿಗೆ ಈ 'ಬೆಂಗಳೂರಿನ ಆತ್ಮ' ಶಿಲ್ಪವು ಉದ್ಯಾನ ನಗರಿಯ ಮರೆಯಲಾಗದ ನೆನಪು ಕಟ್ಟಿಕೊಡಲಿದೆ,” ಎಂದು ಹೇಳಿದರು.
ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ವಿಶಿಷ್ಟ ವಿನ್ಯಾಸ ಮತ್ತು ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಸಂಯೋಜಿಸುವ ಮೂಲಕ, ಬಿಎಲ್‌ಆರ್ ವಿಮಾನ ನಿಲ್ದಾಣವು ಈಗಾಗಲೇ ಸಾಂಸ್ಕೃತಿಕ ಹೆಬ್ಬಾಗಿಲಾಗಿ ಗುರುತಿಸಿಕೊಂಡಿದೆ. ಈ ಕಲಾಕೃತಿಯ ಸ್ಥಾಪನೆ ಇದಕ್ಕೆ ಮತ್ತಷ್ಟು ಮೆರುಗು ನೀಡಿದೆ. ಸ್ಕೈಟ್ರ್ಯಾಕ್ಸ್‌ನ 2026ರ 'ವಿಶ್ವದ ಅತ್ಯುತ್ತಮ ಕಲಾ ವಿಮಾನ ನಿಲ್ದಾಣ' ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದು, ಇದು ಬಿಐಎಎಲ್‌ನ ಕಲಾ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.

