ದಕ್ಷಿಣ ನಗರ ಪಾಲಿಕೆ ಬಜೆಟ್: ಜನಸಾಮಾನ್ಯರ ಕುಂದುಕೊರತೆ ಆಲಿಸಲು ಹೊಸ ಅಭಿಯಾನ
x
ಬೆಂಗಳೂ ದಕ್ಷಿಣ ಪಾಲಿಕೆ ಬಜೆಟ್‌ ಮಂಡನೆಗೂ ಮುನ್ನ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್‌, ಆಯುಕ್ತ ರಮೇಶ್‌ ಇತರರು ಇದ್ದರು

ದಕ್ಷಿಣ ನಗರ ಪಾಲಿಕೆ ಬಜೆಟ್: ಜನಸಾಮಾನ್ಯರ ಕುಂದುಕೊರತೆ ಆಲಿಸಲು ಹೊಸ ಅಭಿಯಾನ

ಪೌರಕಾರ್ಮಿಕರ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗಲು 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಪಾಸಣೆಗಾಗಿ 5 ಕೋಟಿ ರೂ. ಮೀಸಲಿಡಲಾಗಿದೆ.


Click the Play button to hear this message in audio format

ದಕ್ಷಿಣ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯ ಗುರಿಯೊಂದಿಗೆ ದಕ್ಷಿಣ ನಗರ ಪಾಲಿಕೆ ಆಯವ್ಯಯ ಮಂಡನೆ ಮಾಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್‌.ರಮೇಶ್ ಅವರು ಒಟ್ಟು 3,826.43 ಕೋಟಿ ರೂ. ಬೃಹತ್ ಗಾತ್ರದ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ಮೂಲಸೌಕರ್ಯ, ಪೌರಕಾರ್ಮಿಕರ ಕ್ಷೇಮ, ಮಹಿಳಾ ಸಬಲೀಕರಣ, ಹಸಿರು ಬೆಂಗಳೂರು ಮತ್ತು ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಬಜೆಟ್‌ನಲ್ಲಿ ಸಮಾಜದ ಕೆಳಹಂತದ ಜನರ ಮತ್ತು ಪೌರಕಾರ್ಮಿಕರ ಜೀವನಮಟ್ಟ ಸುಧಾರಿಸಲು ಗಣನೀಯ ಮೊತ್ತವನ್ನು ಮೀಸಲಿಡಲಾಗಿದೆ. ಪೌರಕಾರ್ಮಿಕರ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗಲು 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ಹಿಂದುಳಿದ ವರ್ಗದ ಪೌರಕಾರ್ಮಿಕರಿಗೆ ಪರಿಸರ ಸ್ನೇಹಿ ಸಂಚಾರಕ್ಕಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನೀಡಲು 6 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಪಾಸಣೆ ಮತ್ತು ಸುರಕ್ಷತಾ ಸಾಮಗ್ರಿ ನೀಡಲು 5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ ವಿತರಣೆಗೆ 2 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಉಚಿತ ಲ್ಯಾಪ್‌ಟಾಪ್ ನೀಡಲು 5 ಕೋಟಿ ರೂ. ಮೀಸಲಿರಿಸಲಾಗಿದೆ. ಹಿಂದುಳಿದ ವರ್ಗಗಳ ಸಮುದಾಯಕ್ಕೆ ಆಟೋ ಮತ್ತು ಕಾರು ಖರೀದಿಸಲು 12 ಕೋಟಿ ರೂ.ಗಳ ಅನುದಾನ ನೀಡುವ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಪಾಲಿಕೆ ಮುಂದಾಗಿದೆ. ಬೀದಿಬದಿ ವ್ಯಾಪಾರಿಗಳನ್ನು ಉತ್ತೇಜಿಸಲು 11.92 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ನಿಗದಿಪಡಿಸಲಾಗಿದೆ. ವಿಶೇಷ ಚೇತನರ ಸುಗಮ ಸಂಚಾರಕ್ಕಾಗಿ ಉಚಿತ ತ್ರಿ-ಚಕ್ರ ವಾಹನಗಳನ್ನು ವಿತರಿಸಲು 2.96 ಕೋಟಿ ರೂ. ವ್ಯಯಿಸಲು ತಿಳಿಸಲಾಗಿದೆ.

ಮೂಲಸೌಕರ್ಯ, ಸಂಚಾರ ವ್ಯವಸ್ಥೆ

ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ರಸ್ತೆಗಳ ಸುಧಾರಣೆಗೆ ಬಜೆಟ್‌ನಲ್ಲಿ ಮಹತ್ವದ ಯೋಜನೆಗಳನ್ನು ರೂಪಿಸಲಾಗಿದೆ. ರಸ್ತೆಗಳ ಡಾಂಬರೀಕರಣಕ್ಕಾಗಿ 433 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, 300 ಕಿ.ಮೀ ಉದ್ದದ ರಸ್ತೆಯನ್ನು ಕಸ ಮುಕ್ತಗೊಳಿಸಲು ಹೊಸ ಯಂತ್ರಗಳನ್ನು ಖರೀದಿಸಲಾಗುವುದು. ಪ್ರಮುಖ ರಸ್ತೆಗಳ ಅಗಲೀಕರಣಕ್ಕಾಗಿ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬಹುದಿನಗಳ ಬೇಡಿಕೆಯಾದ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಪಾದಚಾರಿಗಳ ಸುರಕ್ಷತೆಗಾಗಿ ಪಿಪಿಪಿ ಮಾದರಿಯಲ್ಲಿ 18 ಕಡೆಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲಾಗುವುದು. ವಿಶೇಷವಾಗಿ ಬನಶಂಕರಿ ಜಂಕ್ಷನ್ ಬಳಿ 32 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸ್ಕೈವಾಕ್ ನಿರ್ಮಾಣವಾಗಲಿದೆ. ಬನಶಂಕರಿ ದೇವಸ್ಥಾನದ ಮುಂಭಾಗ ಪಾಲಿಕೆಯ ಸ್ವಂತ ಭವ್ಯ ಕಟ್ಟಡ ನಿರ್ಮಾಣಕ್ಕೆ 150 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ

ಸ್ವಚ್ಛ ಬೆಂಗಳೂರು ನಿರ್ಮಾಣಕ್ಕಾಗಿ ಘನತ್ಯಾಜ್ಯ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕೋರಮಂಗಲ ಹಾಗೂ ಹೆಚ್.ಎಸ್.ಆರ್ ಬಡಾವಣೆಗಳಲ್ಲಿ ಅತ್ಯಾಧುನಿಕ ತ್ಯಾಜ್ಯ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ಮೂಲಕ ಇಂಧನ ಸ್ವಾವಲಂಬನೆಗೆ ಚಾಲನೆ ನೀಡಲಾಗುವುದು. ಮೃತ ಪ್ರಾಣಿಗಳ ವೈಜ್ಞಾನಿಕ ವಿಲೇವಾರಿಗಾಗಿ ಸಂಚಾರಿ ಚಿತಾಗಾರ ಪ್ರಾರಂಭಿಸಲಾಗುವುದು. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗಾಗಿ ಹೊಸ ಎಬಿಸಿ (ಅನಿಮಲ್ ಬರ್ಥ್ ಕಂಟ್ರೋಲ್) ಸೆಂಟರ್ ಮತ್ತು ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ದನದ ದೊಡ್ಡಿಗಳನ್ನು ನಿರ್ಮಿಸಲಾಗುವುದು.

ಆರೋಗ್ಯ ಹಾಗೂ ಶಿಕ್ಷಣ

ಈಜಿಪುರದಲ್ಲಿ ಹೊಸ ಹೆರಿಗೆ ಆಸ್ಪತ್ರೆ ನಿರ್ಮಿಸಲು 18.96 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮ ಕ್ಲಿನಿಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿಗೆ 13.03 ಕೋಟಿ ರೂ. ನೀಡಲಾಗುವುದು. ಸೊಳ್ಳೆಗಳ ನಿಯಂತ್ರಣಕ್ಕೆ 8.50 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಶಾಲೆ-ಕಾಲೇಜುಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದು, ಎನ್‌ಜಿಒಗಳ ಸಹಯೋಗದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ.

ಪರಿಸರ, ಕೆರೆಗಳ ಅಭಿವೃದ್ಧಿ

ದಕ್ಷಿಣ ಬೆಂಗಳೂರಿನ ಹಸಿರೀಕರಣವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಔಷಧೀಯ ಗುಣವುಳ್ಳ ಗಿಡಗಳನ್ನು ಬೆಳೆಸಲು 'ಸ್ಮೃತಿವನ'ಗಳನ್ನು ನಿರ್ಮಿಸಲಾಗುವುದು. ಅಂತರ್ಜಲ ವೃದ್ಧಿಗಾಗಿ 200 ಕಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬೇಗೂರು ಮತ್ತು ಮಡಿವಾಳ ಕೆರೆಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪಿಪಿಪಿ ಮಾದರಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಕೆರೆಗಳ ರಕ್ಷಣೆಗೆ 'ಕೆರೆಗಳ ಮಿತ್ರ' ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.

ಆದಾಯ ಮೂಲಗಳು

ಪಾಲಿಕೆಯ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ವಿವಿಧ ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ: ಆಸ್ತಿ ತೆರಿಗೆಯಿಂದ 1011.30 ಕೋಟಿ ರೂ., ಬಿ ಟು ಇ ಖಾತಾದಿಂದ 225 ಕೋಟಿ ರೂ., ಜಾಹೀರಾತು ನೀತಿಯಿಂದಾಗಿ 126 ಕೋಟಿ ರೂ., ಪಾರ್ಕಿಂಗ್ ನೀತಿಯಿಂದಾಗಿ 40 ಕೋಟಿ ರೂ., ಮುನ್ಸಿಪಲ್ ಬಾಂಡ್‌ನಿಂದ 200 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಪಾಲಿಕೆಯ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ಆಯುಕ್ತರ ನಡೆ ಮನೆ ಮನೆಗೆ ಎಂಬ ಹೊಸ ಅಭಿಯಾನವನ್ನು ರೂಪಿಸಲಾಗಿದೆ. ಗ್ರೇಟರ್ ಬೆಂಗಳೂರು ಮಹಾ ಯೋಜನೆಯ ಸಿದ್ಧತೆಗಾಗಿ 5 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

Read More
Next Story