ಮೂಕ ಪ್ರಾಣಿಗಳ ಮೃತ್ಯುಪಾಶ ಚೀನಾ ಮಾಂಜಾ; ನಿವಾಸಿಗಳಿಂದ ಗಿಡುಗ ರಕ್ಷಣೆ
x

ಮರದಲ್ಲಿ ಸಿಲುಕಿಕೊಂಡಿದ್ದ ಕಪ್ಪು ಗಿಡುಗ

ಮೂಕ ಪ್ರಾಣಿಗಳ ಮೃತ್ಯುಪಾಶ ಚೀನಾ ಮಾಂಜಾ; ನಿವಾಸಿಗಳಿಂದ ಗಿಡುಗ ರಕ್ಷಣೆ

ಮಾಂಜಾ ದಾರದಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಕಪ್ಪು ಗಿಡುಗವನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ 'ಪೀಪಲ್ ಫಾರ್ ಅನಿಮಲ್ಸ್' (PFA) ಸಂಸ್ಥೆಗೆ ಹಸ್ತಾಂತರಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ರಾಜರಾಜೇಶ್ವರಿನಗರದ ಗಿರಿಧಾಮ ಬಡಾವಣೆಯ ನಿವಾಸಿಗಳ ಕಾರ್ಯಾಚರಣೆಯಿಂದಾಗಿ, ಗಾಳಿಪಟದ ಚೀನಾ ಮಾಂಜಾ ದಾರದಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಕಪ್ಪು ಗಿಡುಗವೊಂದು (Black Kite) ಭಾನುವಾರ ಮಧ್ಯಾಹ್ನ ರಕ್ಷಿಸಲ್ಪಟ್ಟಿದೆ.

ಬಡಾವಣೆ ನಿವಾಸಿ ಗೌತಮ್ ಅವರು ತಮ್ಮ ಮನೆಯ ಬಳಿಯ 'ರೋಸಿಯಾ ಟ್ಯಾಬೆಬುಯಾ' (Pink Trumpet Tree) ಮರದ ಕೊಂಬೆಯಲ್ಲಿ ಗಿಡುಗವೊಂದು ಒದ್ದಾಡುತ್ತಿರುವುದನ್ನು ಗಮನಿಸಿ, ಕೂಡಲೇ ನೆರೆಹೊರೆಯವರ ಗಮನಕ್ಕೆ ತಂದಿದ್ದಾರೆ. ಹರಿತವಾದ ಮಾಂಜಾ ದಾರವು ಮರದ ಕೊಂಬೆ ಮತ್ತು ಗಿಡುಗದ ರೆಕ್ಕೆಗಳಿಗೆ ಬಲವಾಗಿ ಸುತ್ತಿಕೊಂಡಿದ್ದರಿಂದ ಹಕ್ಕಿಯು ಹಾರಲಾಗದೆ ಅಸಹಾಯಕ ಸ್ಥಿತಿಯಲ್ಲಿತ್ತು.

ಕೂಡಲೇ ನಿವಾಸಿಗಳೆಲ್ಲರೂ ಒಗ್ಗೂಡಿ ಜಾಗರೂಕತೆಯಿಂದ ಗಿಡುಗವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅದರ ಮೈಮೇಲಿದ್ದ ಮಾಂಜಾ ದಾರಗಳನ್ನು ತೆರವುಗೊಳಿಸಿ, ತೀವ್ರ ಆಘಾತ ಮತ್ತು ದಣಿವಿನಲ್ಲಿದ್ದ ಗಿಡುಗನಿಗೆ ನೀರು ಕುಡಿಸಿ ಉಪಚರಿಸಿದ್ದಾರೆ.

ಈ ಬಗ್ಗೆ ಮಾಹಿತಿ ದೊರೆತ ಕೂಡಲೇ, 'ಪೀಪಲ್ ಫಾರ್ ಅನಿಮಲ್ಸ್' (PFA) ಸಂಸ್ಥೆಯ ರಕ್ಷಣಾ ಸಿಬ್ಬಂದಿ ಪಕ್ಷಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಗಿಡುಗಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಆಹಾರ ನೀಡಿ, ಅದು ಸಂಪೂರ್ಣ ಚೇತರಿಸಿಕೊಂಡ ನಂತರ ಮತ್ತೆ ಹಾರಾಟಕ್ಕೆ ಬಿಡುವುದಾಗಿ ಸಂಸ್ಥೆಯು ಭರವಸೆ ನೀಡಿದೆ.

ನಿತ್ರಾಣ ಸ್ಥಿತಿಯಲ್ಲಿರುವ ಕಪ್ಪು ಗಿಡುಗ

ಹಿಂದೆಯೂ ಅನೇಕ ಪ್ರಕರಣ

ಬೆಂಗಳೂರಿನ ಪ್ರಮುಖ ಹಸಿರು ವಲಯಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಎತ್ತರದ ಮರಗಳಿರುವುದರಿಂದ, ಇಲ್ಲಿ ಗಾಳಿಪಟದ ದಾರಗಳು ಸಿಲುಕಿಕೊಳ್ಳುವುದು ಸಾಮಾನ್ಯ. ಈ ಮರಗಳಲ್ಲಿ ಗೂಡು ಕಟ್ಟುವ ಗಿಡುಗಗಳು ಮತ್ತು ಪಾರಿವಾಳಗಳು ಆಗಾಗ ದಾರಕ್ಕೆ ಸಿಲುಕಿ ರೆಕ್ಕೆಗಳನ್ನು ಕಳೆದುಕೊಂಡ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ವಾಹನ ಸವಾರನಿಗೆ ಗಾಯ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಗಾಳಿಪಟ ಹಾರಿಸುವಾಗ ರಸ್ತೆಗೆ ಬಿದ್ದ ಮಾಂಜಾ ದಾರಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರರೊಬ್ಬರ ಕುತ್ತಿಗೆಗೆ ಗಾಯವಾಗಿತ್ತು. ಅದೇ ಸಮಯದಲ್ಲಿ ಅಲ್ಲಿನ ವಿದ್ಯುತ್ ಕಂಬಗಳ ಮೇಲೆ ಸಿಲುಕಿದ್ದ ಹಲವು ಪಾರಿವಾಳಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದರು. ಒಂದು ವರ್ಷದ ಹಿಂದೆ ಹೆಬ್ಬಾಳ ಕೆರೆ ಸಮೀಪದ ಮರವೊಂದರಲ್ಲಿ ರಾತ್ರಿ ವೇಳೆ ಹಾರಾಡುವ ಗೂಬೆಯೊಂದು ಮಾಂಜಾ ದಾರಕ್ಕೆ ಸಿಲುಕಿತ್ತು. ರೆಕ್ಕೆಗಳಿಗೆ ತೀವ್ರ ಗಾಯವಾಗಿದ್ದ ಆ ಗೂಬೆಯನ್ನು ವನ್ಯಜೀವಿ ರಕ್ಷಕರು ರಕ್ಷಿಸಿ 'ಪೀಪಲ್ ಫಾರ್ ಅನಿಮಲ್ಸ್' ಕೇಂದ್ರಕ್ಕೆ ದಾಖಲಿಸಿದ್ದರು.

ಯಲಹಂಕ ಮತ್ತು ಹೆಣ್ಣೂರು ಭಾಗಗಳಲ್ಲಿ ಗಾಳಿಪಟ ಹಾರಿಸುವ ಹವ್ಯಾಸ ಹೆಚ್ಚಿರುವುದರಿಂದ, ಇಲ್ಲಿನ ರಸ್ತೆ ಬದಿಯ ಮರಗಳಲ್ಲಿ ಸಿಲುಕುವ ದಾರಗಳಿಂದಾಗಿ ಅನೇಕ ಕಪ್ಪು ಗಿಡುಗಗಳು (Black Kites) ಬಲಿಯಾಗಿವೆ. ಕೆಲವು ಪ್ರಕರಣಗಳಲ್ಲಿ ದಾರಕ್ಕೆ ಸಿಲುಕಿದ ಪಕ್ಷಿಗಳು ಆಹಾರವಿಲ್ಲದೆ ಮರದಲ್ಲೇ ಪ್ರಾಣ ಬಿಟ್ಟ ಉದಾಹರಣೆಗಳೂ ಇವೆ. ಇಂತಹ ಸರಣಿ ಘಟನೆಗಳಿಂದಾಗಿ ಮತ್ತು ಮನುಷ್ಯರಿಗೂ ಪ್ರಾಣಾಪಾಯ ಉಂಟಾಗುತ್ತಿದ್ದ ಕಾರಣ, ಕರ್ನಾಟಕ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಗಾಜಿನ ಪುಡಿ ಸವರಿದ ಮತ್ತು ಪ್ಲಾಸ್ಟಿಕ್ ಮಾಂಜಾ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಹೀಗಿದ್ದರೂ, ಬಳಕೆಯಲ್ಲಿರುವ ನಿಷೇಧಿತ ಪ್ಲಾಸ್ಟಿಕ್ ಮಾಂಜಾ ಮತ್ತು ಮರಗಳ ಮೇಲೆ ಉಳಿದುಹೋಗುವ ದಾರಗಳು ಮೂಕ ಪ್ರಾಣಿಗಳಿಗೆ ಮರಣಶಾಸನವಾಗುತ್ತಿವೆ.

Read More
Next Story