ಪೀಣ್ಯ ಮೇಲ್ಸೇತುವೆ ಸಂಚಾರ ನಿರಾತಂಕ; ಲೋಡ್‌ ಟೆಸ್ಟಿಂಗ್‌ ಪ್ರಕ್ರಿಯೆ ಮುಂದೂಡಿಕೆ
x
ಪೀರ್ಣ ಮೇಲ್ಸೇತುವೆ ಸಂಚಾರ ಸ್ಥಗಿತ ಸಾಂದರ್ಭಿಕ ಚಿತ್ರ

ಪೀಣ್ಯ ಮೇಲ್ಸೇತುವೆ ಸಂಚಾರ ನಿರಾತಂಕ; ಲೋಡ್‌ ಟೆಸ್ಟಿಂಗ್‌ ಪ್ರಕ್ರಿಯೆ ಮುಂದೂಡಿಕೆ

ಏ.15 ರಂದು ಪ್ರಧಾನಿ ಮೋದಿ ಅವರು ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದು, ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ಸಾಧ್ಯತೆ ಹಿನ್ನೆಲೆ ಹಾಗೂ ಸಂಚಾರದ ದಟ್ಟಣೆ ಸಾಧ್ಯತೆ ಮನಗಂಡು ಸಂಚಾರ ಸ್ಥಗಿತ ಆದೇಶ ಹಿಂಪಡೆಯಲಾಗಿದೆ.


ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಜಿಲ್ಲೆಗಳ ಪ್ರವೇಶ ಮಾರ್ಗವಾದ ಬೆಂಗಳೂರಿನ ಗೊರಗುಂಟೆಪಾಳ್ಯದ ಪೀಣ್ಯ ಮೇಲ್ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದ್ದ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಿಂಪಡೆದಿದೆ.

ಮೇಲ್ಸೇತುವೆಯಲ್ಲಿ ಅಂತಿಮ ಹಂತದ ಲೋಡ್‌ ಟೆಸ್ಟಿಂಗ್ ಪ್ರಕ್ರಿಯೆ ನಡೆಸುವ ಹಿನ್ನೆಲೆ ನಾಳೆಯಿಂದ (ಏ.13) ಐದು ದಿನಗಳ ಕಾಲ ಮೇಲ್ಸೇತುವೆ ಸಂಚಾರ ಸ್ಥಗಿತಗೊಳಿಸಿ ಆದೇಶಿಸಿತ್ತು. ಆದರೆ, ಈಗ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ದಿಢೀರ್‌ ಮುಂದೂಡಿದ್ದು, ಸೋಮವಾರದಿಂದ ಎಂದಿನಂತೆ ವಾಹನ ಸಂಚಾರ ಇರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು ಫ್ಲೈಓವರ್‌ ಸಂಚಾರ ಸ್ಥಗಿತಗೊಳಿಸಿ ಆದೇಶಿಸಿದ್ದರು

ಮುಂದೂಡಿಕೆಗೆ ಕಾರಣವೇನು?

ಕೇಬಲ್ ದುರಸ್ತಿ ಕಾಮಗಾರಿ ಪೂರ್ಣಗೊಂಡ ನಂತರ ಅದರ ಸಾಮರ್ಥ್ಯ ಪರೀಕ್ಷಿಸಲು ಏ.13ರ ಬೆಳಿಗ್ಗೆ 5 ಗಂಟೆಯಿಂದ ಏಪ್ರಿಲ್ 17ರ ಬೆಳಿಗ್ಗೆ 11 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿತ್ತು. ಆದರೆ, ಏ.15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದು, ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ಸಾಧ್ಯತೆ ಇರುವ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆಯ ಕಾರಣ ಮೇಲ್ಸೇತುವೆ ಬಂದ್‌ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು ಏ.11ರಿಂದ 14ರವರೆಗೆ ಸರಣಿ ರಜೆ ಇರುವುದರಿಂದ ಬೆಂಗಳೂರಿನಿಂದ ಹೊರಹೋಗುವ ಮತ್ತು ಒಳಬರುವ ವಾಹನಗಳ ಸಂಖ್ಯೆ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೇಲ್ಸೇತುವೆ ಸಂಚಾರ ಸ್ಥಗಿತಗೊಳಿಸಿದರೆ ಅತಿ ಹೆಚ್ಚು ವಾಹನ ದಟ್ಟಣೆ ಎದುರಾಗಲಿದೆ. ಇದರಿಂದ ಸಾರ್ವಜನಿಕರ ಆಕ್ರೋಶ ಎದುರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಲೋಡ್‌ ಟೆಸ್ಟಿಂಗ್‌ ಪ್ರಕ್ರಿಯೆ ಮುಂದೂಡಲಾಗಿದೆ.

ಪೀಣ್ಯ ಮೇಲ್ಸೇತುವೆಯಲ್ಲಿ ಲೋಡ್‌ ಟೆಸ್ಟಿಂಗ್‌ ಪ್ರಕ್ರಿಯೆ ಮುಂದೂಡಿರುವ ಕುರಿತು ಬೆಂಗಳೂರು ನಗರ ಪೊಲೀಸರ ಪ್ರಕಟಣೆ

ಸಾರ್ವಜನಿಕರಿಗೆ ನಿರಾಳ

ಸಾಲು ಸಾಲು ರಜೆಗಳಿರುವುದರಿಂದ ಸಂಚಾರ ದಟ್ಟಣೆ ಎದುರಾಗಲಿದೆ ಎಂದು ಪೀಣ್ಯ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಹುದು ಎಂದು ಎಚ್ಚರಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರವು, ಲೋಡ್‌ ಟೆಸ್ಟಿಂಗ್ ಪರೀಕ್ಷೆ ಮುಂದೂಡಿದೆ. ಇದರಿಂದಾಗಿ ತುಮಕೂರು ರಸ್ತೆಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಮುಂದಿನ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದು, ಅಲ್ಲಿಯವರೆಗೆ ಮೇಲ್ವೇತುವೆಯಲ್ಲಿ ಎಲ್ಲಾ ರೀತಿಯ ಲಘು ಮತ್ತು ಭಾರೀ ವಾಹನಗಳ ಸಂಚಾರವು ಮುಕ್ತವಾಗಿರಲಿದೆ ಎಂದು ಪ್ರಾಧಿಕಾರ ಹೇಳಿದೆ.

Read More
Next Story