
ಪೀಣ್ಯ - ನಾಗಸಂದ್ರ ಮೇಲ್ಸೇತುವೆ
Peenya Flyover| ತುಮಕೂರು ರಸ್ತೆ ಸವಾರರ ಗಮನಕ್ಕೆ: ಮುಂದಿನ ವಾರ 84 ಗಂಟೆಗಳ ಕಾಲ ಪೀಣ್ಯ ಫ್ಲೈಓವರ್ ಬಂದ್!
ಏ. 13ರ ರಾತ್ರಿ 11 ಗಂಟೆಯಿಂದ ಏ. 17 ರ ಬೆಳಿಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸುವಂತೆ ಎನ್‌ಎಚ್‌ಐಎ ಕೋರಿದೆ.
ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮುಂದಿನ ವಾರ ಸಂಚಾರ ದಟ್ಟಣೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಪೀಣ್ಯ ಮೇಲ್ಸೇತುವೆಯ (ಪೀಣ್ಯ ಫ್ಲೈಓವರ್) ದೃಢತೆ ಹಾಗೂ ಸುರಕ್ಷತೆಯನ್ನು ಪರೀಕ್ಷಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸತತ 84 ಗಂಟೆಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಏನಿದು ಲೋಡ್ ಪರೀಕ್ಷೆ?
ಫ್ಲೈಓವರ್‌ನ ಸುಸ್ಥಿತಿಯನ್ನು ಪರಿಶೀಲಿಸಲು ಅಂತಿಮ ಹಂತದ 'ಲೋಡ್ ಟೆಸ್ಟ್' ನಡೆಸಲಾಗುತ್ತಿದೆ. ಮೇಲ್ಸೇತುವೆಯ ಮೇಲೆ ಭಾರವಾದ ವಾಹನಗಳನ್ನು ನಿಲ್ಲಿಸಿ ಅದರ ತಾಂತ್ರಿಕ ಸಾಮರ್ಥ್ಯವನ್ನು ತಜ್ಞರು ಅಳೆಯಲಿದ್ದಾರೆ. ಈ ಪ್ರಕ್ರಿಯೆಯು ಸತತ 84 ಗಂಟೆಗಳ ಕಾಲ ನಡೆಯಲಿದ್ದು, ಆ ಅವಧಿಯಲ್ಲಿ ಮೇಲ್ಸೇತುವೆಯ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ನಾಲ್ಕು ಆಯ್ದ ಸ್ಪ್ಯಾನ್‌ಗಳ ಮೇಲೆ ತಲಾ 32 ಟನ್ ತೂಕದ ಎಂಟು ಟ್ರಕ್‌ಗಳನ್ನು ನಿಲ್ಲಿಸಿ ಸೇತುವೆಯ ಸಾಮರ್ಥ್ಯವನ್ನು ಅಳೆಯುತ್ತೇವೆ. ಈ ಪರೀಕ್ಷೆ ಯಶಸ್ವಿಯಾದರೆ, ಫ್ಲೈಓವರ್ ಸಂಪೂರ್ಣ ಸುರಕ್ಷಿತವೆಂದು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಬೆಂಗಳೂರು ಸಂಚಾರ ಪೊಲೀಸರಿಗೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ಏ. 13 ರ ರಾತ್ರಿ 11 ಗಂಟೆಯಿಂದ ಏ. 17 ರ ಬೆಳಿಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋರಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಸುಮಾರು 1,422 ಪ್ರಿಸ್ಟ್ರೆಸ್ಸಿಂಗ್ ಕೇಬಲ್‌ಗಳನ್ನು ಬದಲಾಯಿಸಲಾಗಿದ್ದು, ಈ ದುರಸ್ತಿ ಕಾರ್ಯದ ಯಶಸ್ಸನ್ನು ಪತ್ತೆಹಚ್ಚಲು ಈ ಪರೀಕ್ಷೆ ಅನಿವಾರ್ಯವಾಗಿದೆ.
2010 ರಲ್ಲಿ ಲೋಕಾರ್ಪಣೆಗೊಂಡ ಈ 4.2 ಕಿಮೀ ಉದ್ದದ ಫ್ಲೈಓವರ್, ಡಿಸೆಂಬರ್ 2021 ರಲ್ಲಿ ಕೇಬಲ್‌ಗಳ ಸವೆತದಿಂದಾಗಿ ಭಾರಿ ವಾಹನಗಳಿಗೆ ನಿಷೇಧಿಸಲಾಗಿತ್ತು. ನಂತರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಜ್ಞರ ಸಮಿತಿಯ ಶಿಫಾರಸ್ಸಿನಂತೆ, 32 ಕೋಟಿ ರೂ. ವೆಚ್ಚದಲ್ಲಿ ಹಳೆಯ ಕೇಬಲ್‌ಗಳನ್ನು ತೆಗೆದು ಹೊಸದಾಗಿ ಜಿಂಕ್ ಲೇಪಿತ ಮತ್ತು ಬಹು-ಪದರದ ರಕ್ಷಣೆ ಹೊಂದಿರುವ ಕೇಬಲ್‌ಗಳನ್ನು ಅಳವಡಿಸಲಾಗಿತ್ತು.
ಸಂಚಾರ ದಟ್ಟಣೆಯ ಭೀತಿ
ಪೀಣ್ಯದಿಂದ ನಾಗಸಂದ್ರದವರೆಗಿನ ಈ ಮೇಲ್ಸೇತುವೆ ಮುಚ್ಚಲ್ಪಟ್ಟರೆ, ಎಲ್ಲಾ ವಾಹನಗಳು ಕೆಳಗಿನ ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಐದು ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಿರುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಸಂಚಾರ ಪೊಲೀಸ್ ಅಧಿಕಾರಿಗಳು ಈ ವಿನಂತಿಯನ್ನು ಪರಿಶೀಲಿಸುತ್ತಿದ್ದು, ದಟ್ಟಣೆ ನಿರ್ವಹಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಸಂಪರ್ಕ ಹೆಬ್ಬಾಗಿಲು
ಬೆಂಗಳೂರಿನಿಂದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸುತುವೆ ರಾಜಧಾನಿ ಹಾಗೂ ಉತ್ತರ ಕರ್ನಾಟಕವನ್ನು ಬೆಸೆಯುವ ಮೂಲಕ ನಗರ ಟ್ರಾಫಿಕನ್ನು ಕಡಿಮೆ ಮಾಡುತ್ತದೆ. ವೇಗದೂತ ಬಸ್, ಲಾರಿ, ಟ್ರಕ್‌ಗಳಿಗೆ ಸಂಚಾರಕ್ಕೆ ಅನುಕೂಲವಾಗಿರುವ ಈ ಸೇತುವೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕದ ಭಾಗದ ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ಮಾರ್ಗವಾಗಿದೆ.

