
ನೈಸ್ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ಚಿರತೆ
Leopard Death| ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ; ಮೂರು ವರ್ಷದ ಚಿರತೆ ಸಾವು, ಪ್ರಕರಣ ದಾಖಲು
ಭಾನುವಾರ (ಮಾ.15) ಮುಂಜಾನೆ ಕನಕಪುರ ಮತ್ತು ಬನ್ನೇರುಘಟ್ಟ ನಡುವಿನ ನೈಸ್ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ರಾಜ್ಯದಲ್ಲಿ ಇತ್ತೀಚೆಗೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ ಕಾಡುಪ್ರಾಣಿಗಳ ಸಾವಿನ ಪ್ರಕರಣಗಳೂ ಏರಿಕೆಯಾಗುತ್ತಿವೆ. ಬೆಂಗಳೂರಿನ ತಾವರೆಕೆರೆ ಸಮೀಪ ಕಲ್ಲು ಗಣಿಗಾರಿಕೆ ಸ್ಫೋಟದಿಂದ ಗರ್ಭಿಣಿ ಚಿರತೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ನೈಸ್ ರಸ್ತೆಯಲ್ಲಿ ಭಾನುವಾರ (ಮಾ.15) ಮುಂಜಾನೆ ಮೂರು ವರ್ಷದ ಚಿರತೆಯೊಂದು ವಾಹನ ಡಿಕ್ಕಿಯಿಂದ ಮೃತಪಟ್ಟಿದೆ.
ಕನಕಪುರ ಮತ್ತು ಬನ್ನೇರುಘಟ್ಟ ನಡುವಿನ ನೈಸ್ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ನೈಸ್ ರಸ್ತೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಚಿರತೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಹೆಚ್ಚುತ್ತಲೇ ಇದೆ ಸಾವು
2024 ಫೆಬ್ರವರಿಯಲ್ಲಿ ರಾಮನಗರ ಜಿಲ್ಲೆಯ ಮಾಗಡಿ ಬಳಿಯ ಸೂರಪ್ಪನಹಳ್ಳಿ ಸಮೀಪ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ವೇಗವಾಗಿ ಬಂದ ವಾಹನ ಡಿಕ್ಕಿಯಾಗಿ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಮೃತಪಟ್ಟಿತ್ತು. 2021 ಜನವರಿಯಲ್ಲಿ ಕನಕಪುರ - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಸಾತನೂರು ಬಳಿ 6 ವರ್ಷದ ಗಂಡು ಚಿರತೆಯೊಂದು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತಪಟ್ಟಿತ್ತು.
2015 ಫೆಬ್ರವರಿಯಲ್ಲಿ ನೈಸ್ ರಸ್ತೆಯ ಕನಕಪುರ ರಸ್ತೆ ಜಂಕ್ಷನ್ ಬಳಿ ಸುಮಾರು 3 ವರ್ಷದ ಗಂಡು ಚಿರತೆ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿತ್ತು. ಇದರ ಬೆನ್ನುಮೂಳೆ ಮತ್ತು ಲಿವರ್‌ಗೆ ತೀವ್ರ ಪೆಟ್ಟಾಗಿತ್ತು. 2014 ಅಕ್ಟೋಬರ್‌ನಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಕಲ್ಕೆರೆ ಸರ್ಕಲ್ ಬಳಿ ಗರ್ಭಿಣಿ ಚಿರತೆಯೊಂದು ವಾಹನಕ್ಕೆ ಬಲಿಯಾಗಿತ್ತು. ಇದು ಅರಣ್ಯ ಪ್ರೇಮಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಐದು ವರ್ಷದಲ್ಲಿ 23 ಚಿರತೆ ಮೃತ
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಂಡದ ಅಧ್ಯಯನದ ಪ್ರಕಾರ 2009 ರಿಂದ 2014ರ ನಡುವೆ ಕರ್ನಾಟಕದಲ್ಲಿ ಸುಮಾರು 23 ಚಿರತೆಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿವೆ. ಅದರಲ್ಲಿ ಸುಮಾರು 9 ಚಿರತೆಗಳು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಬನ್ನೇರುಘಟ್ಟ, ಕಗ್ಗಲಿಪುರ, ರಾಮನಗರ ಮತ್ತು ತುಮಕೂರು ಭಾಗದಲ್ಲೇ ಸಾವನ್ನಪ್ಪಿವೆ. ಅಂದರೆ ಸರಾಸರಿಯಾಗಿ ಪ್ರತಿ 3-4 ತಿಂಗಳಿಗೊಮ್ಮೆ ಒಂದು ಚಿರತೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಆಹಾರ ಅರಸಿ ಬರುವ ಚಿರತೆಗಳು
ಬನ್ನೇರುಘಟ್ಟ ಮತ್ತು ಕನಕಪುರ ಅರಣ್ಯ ಪ್ರದೇಶದ ಸಮೀಪವೇ ನೈಸ್ ರಸ್ತೆ ಹಾದು ಹೋಗಿದೆ. ಚಿರತೆಗಳು ಆಹಾರ ಅಥವಾ ನೀರಿಗಾಗಿ ರಸ್ತೆ ದಾಟಿ ಅಕ್ಕಪಕ್ಕದ ತೋಟ, ಗ್ರಾಮಗಳಿಗೆ ಹೋಗಲು ಪ್ರಯತ್ನಿಸುತ್ತವೆ. ಈ ವಲಯವು 'ವನ್ಯಜೀವಿ ಕಾರಿಡಾರ್' ಆಗಿದ್ದರೂ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿರುವುದೇ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಅರಣ್ಯದಂಚಿನ ಭಾಗಗಳಲ್ಲಿ ರಸ್ತೆಗಳ ವಿಸ್ತರಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲವು ಮಾಂಸದ ಅಂಗಡಿಗಳು ರಸ್ತೆ ಪಕ್ಕ ಕೋಳಿ ತ್ಯಾಜ್ಯ ಸುರಿಯುವುದರಿಂದಲೂ ಚಿರತೆಗಳು ರಸ್ತೆ, ನಗರಗಳ ಅಂಚಿನ ಗ್ರಾಮಗಳಿಗೆ ಬರುತ್ತವೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕಕ್ಕೆ 3ನೇ ಸ್ಥಾನ
2022ರ ಚಿರತೆ ಗಣತಿ ವರದಿಯ ಪ್ರಕಾರ, ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ 1,879 ಕ್ಕೆ ಏರಿಕೆಯಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಚಿರತೆಗಳಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮಧ್ಯಪ್ರದೇಶವು 3,907 ಚಿರತೆಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, 1,985 ಚಿರತೆಗಳನ್ನು ಹೊಂದುವ ಮೂಲಕ ಮಹಾರಾಷ್ಟ್ರವು ಎರಡನೇ ಸ್ಥಾನದಲ್ಲಿದೆ.
ಇತ್ತೀಚೆಗೆ ನಡೆದ ಚಿರತೆ ದಾಳಿಗಳು
ವರ್ಷದ ಆರಂಭದಲ್ಲೇ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಮಂಡ್ಯ ಮೂಲದ ಪ್ರವೀಣ್ (35) ಎಂಬ ಭಕ್ತನ ಮೇಲೆ ತಾಳುಬೆಟ್ಟದ ಬಳಿ ಚಿರತೆ ದಾಳಿ ನಡೆಸಿ ಬಲಿ ಪಡೆದಿತ್ತು. ಘಟನೆಯ ನಂತರ ಪಾದಯಾತ್ರೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ದಾಳಿ ನಡೆಸಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದು, ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದರು.
2025 ನವೆಂಬರ್‌ನಲ್ಲಿ ಬನ್ನೇರುಘಟ್ಟದಲ್ಲಿ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ ಮೇಲೆ ಹತ್ತಿ ಕಿಟಕಿಯ ಮೂಲಕ ಚೆನ್ನೈ ಮೂಲದ ಪ್ರವಾಸಿಗ ಮಹಿಳೆಯ ಮೇಲೆ ದಾಳಿ ಮಾಡಿ ಸಣ್ಣಪುಟ್ಟ ಗಾಯಗಳನ್ನು ಮಾಡಿತ್ತು. ಈ ಘಟನೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಯು ನಾನ್ ಎಸಿ ಬಸ್ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
2025 ಡಿಸೆಂಬರ್‌ನಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನ ಕಟ್ಟರಘಟ್ಟ ಗ್ರಾಮದ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಕಿರಣ್ ಎಂಬ ಯುವಕನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಯುವಕನ ಮುಖ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು. 2025 ಜುಲೈನಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ಮತ್ತು ತಿಪಟೂರು ಭಾಗಗಳಲ್ಲಿ ಒಂದೇ ದಿನದಲ್ಲಿ ಐವರು ವ್ಯಕ್ತಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಜಾನುವಾರು ಮೇಯಿಸುತ್ತಿದ್ದ ಸುಜಾತ ಎಂಬ ಮಹಿಳೆಯ ಮೇಲೂ ದಾಳಿ ನಡೆದಿತ್ತು.

