‘ಕೆಎಸ್‌ಪಿ ರನ್-2026’: ರಾಜ್ಯಾದ್ಯಂತ  ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಆಚರಣೆ.
x

ಕೆಎಸ್‌ಪಿ ರನ್’ (KSP Run) ನ ಮೂರನೇ ಆವೃತ್ತಿಯ ಟಿ-ಶರ್ಟ್ ಮತ್ತು ಪದಕ ಅನಾವರಣಗೊಳಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹಾಗೂ ಇತರ ಗಣ್ಯರು

‘ಕೆಎಸ್‌ಪಿ ರನ್-2026’: ರಾಜ್ಯಾದ್ಯಂತ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಆಚರಣೆ.

ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಗೌರವಾರ್ಥ ಮಾ.1 ರಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಗಾಗಿ 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಘೋಷವಾಕ್ಯದಡಿ ಬೃಹತ್ ಓಟವನ್ನು (KSP Run) ಆಯೋಜಿಸಲಾಗಿದೆ.


Click the Play button to hear this message in audio format

ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಆಯೋಜಿಸಲಾಗುತ್ತಿರುವ ‘ಕೆಎಸ್‌ಪಿ ರನ್’ (KSP Run) ನ ಮೂರನೇ ಆವೃತ್ತಿಯು ಮಾರ್ಚ್ 1 ರ ಭಾನುವಾರದಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.

ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ಉತ್ತಮ ಸಂಬಂಧ ವೃದ್ಧಿಸುವ ಹಾಗೂ ಸದೃಢ ಆರೋಗ್ಯದ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿಯ ಓಟವನ್ನು "ನಮ್ಮ ಪೊಲೀಸ್ ನಮ್ಮ ಹೆಮ್ಮೆ" ಎಂಬ ಘೋಷವಾಕ್ಯದೊಂದಿಗೆ ನಡೆಸಲಾಗುತ್ತಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬೆಂಗಳೂರು ವೃತ್ತದ ಸಹಯೋಗದೊಂದಿಗೆ ನಡೆಯಲಿರುವ ʼಕೆಎಸ್‌ಪಿ ರನ್ʼ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎರಡೂ ಓಟಗಳು ಅಂದು ಬೆಳಗ್ಗೆ ವಿಧಾನಸೌಧದ ಮುಂಭಾಗದಿಂದ ಆರಂಭವಾಗಿ, ಕಬ್ಬನ್ ಪಾರ್ಕ್ ಮೂಲಕ ಸಾಗಿ ಮತ್ತೆ ವಿಧಾನಸೌಧದಲ್ಲೇ ಮುಕ್ತಾಯಗೊಳ್ಳಲಿದೆ.

ಓಟದ ಆರಂಭದ ಸಾಲಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್‌ನ ಗಾಂಭೀರ್ಯದ ಪ್ರದರ್ಶನ ಇರಲಿದೆ. ಮಾರ್ಗದುದ್ದಕ್ಕೂ ಅಶ್ವ ದಳದ ಕುದುರೆಗಳು ಸ್ಪರ್ಧಿಗಳಲ್ಲಿ ಉತ್ಸಾಹ ತುಂಬಲಿವೆ. ಓಟ ಪೂರ್ಣಗೊಳಿಸಿದ ಸ್ಪರ್ಧಿಗಳಿಗೆ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಗಳೇ ಪದಕಗಳನ್ನು ವಿತರಿಸುವ ಮೂಲಕ ನಾಗರಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ. ನೋಂದಾಯಿತ ಪ್ರತಿಯೊಬ್ಬರಿಗೂ ಟಿ-ಶರ್ಟ್, ಫಿನಿಶರ್ ಪದಕ ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವ್ಯಾವ ವಿಭಾಗ

ಟೈಮ್ಡ್ 10K ರನ್: ವೃತ್ತಿಪರ ಮತ್ತು ಅನುಭವಿ ಓಟಗಾರರಿಗಾಗಿ ಸಮಯ ನಿಗದಿಪಡಿಸಿದ ಸ್ಪರ್ಧೆ ಇದಾಗಿದೆ.

ಅವೇರ್‌ನೆಸ್ 5K ರನ್: ಇದು ಎಲ್ಲರಿಗೂ ಮುಕ್ತವಾಗಿದ್ದು, ದೈಹಿಕ ಸಧೃಡ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಿದೆ.

ಟೈಮ್ಡ್ 5 K ರನ್ ನ ಮಾರ್ಗ

ಟೈಮ್ಡ್ 10K ರನ್ ನ ಮಾರ್ಗ

ಬಹುಮಾನ ವಿತರಣೆ

ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಒಟ್ಟು 18 ಲಕ್ಷ ರೂ.,ಗಳಿಗೂ ಅಧಿಕ ಮೊತ್ತದ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ವಿಶೇಷ ಚೇತನ ಸ್ಪರ್ಧಿಗಳಿಗೂ ಈ ಓಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಮೂಲಕ ಸಮಾನತೆ ಮತ್ತು ಒಳಗೊಳ್ಳುವಿಕೆಯ ಸಂದೇಶ ಸಾರಲಾಗಿದೆ ಎಂದು ಪೊಲೀಸರು ಹೇಳಿದರು. ಮಣಿಪಾಲ್ ಆಸ್ಪತ್ರೆಗಳು ವೈದ್ಯಕೀಯ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತಿವೆ.

ಘೋಷಣೆಗಳೇನು?

ಸಾಮಾಜಿಕ ಜಾಗೃತಿಯೇ ಈ ಓಟದ ಮಂತ್ರವಾಗಿದ್ದು, ಕೇವಲ ಆರೋಗ್ಯವಷ್ಟೇ ಅಲ್ಲದೆ, ಯುವ ಜನಾಂಗವನ್ನು ವ್ಯಸನಗಳಿಂದ ದೂರವಿಡುವ ಉದ್ದೇಶಕ್ಕಾಗಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಎಂಬ ಘೋಷವಾಕ್ಯ ಮೊಳಗಲಿದೆ. ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ವಹಿಸಬೇಕೆಂಬ ನಿಟ್ಟಿನಲ್ಲಿ ಸೈಬರ್ ಅಪರಾಧ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಬೆಳವಣಿಗೆಯ ಉತ್ತೇಜನಕ್ಕಾಗಿ ಹಸಿರು ಬೆಂಗಳೂರು ಎಂಬ ಫಲಕಗಳನ್ನು ಹಿಡಿದು ಸ್ಪರ್ಧಿಗಳು ಓಟದ ಮೂಲಕ ಜಾಗೃತಿ ಮೂಡಿಸಲಿದ್ದಾರೆ.

ಎಲ್ಲ ಜಿಲ್ಲೆಗಳಲ್ಲಿಯು ಆಯೋಜನೆ

ಕಾರ್ಯಕ್ರಮದ ಅಂಗವಾಗಿ ಟಿ-ಶರ್ಟ್ ಮತ್ತು ಪದಕ ಅನಾವರಣಗೊಳಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, "ಕೆಎಸ್‌ಪಿ ರನ್ ಕೇವಲ ಒಂದು ಓಟವಲ್ಲ, ಇದು ಆರೋಗ್ಯ ಮತ್ತು ಸಮುದಾಯದ ಬದ್ಧತೆಯ ಆಚರಣೆ. ನಮ್ಮ ಅಧಿಕಾರಿಗಳೊಂದಿಗೆ ಹೆಜ್ಜೆ ಹಾಕಲು ಪ್ರತಿಯೊಬ್ಬರನ್ನು ಈ ಮೂಲಕ ಆಹ್ವಾನಿಸುತ್ತೇನೆ. ಈ ಓಟವು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಏಕಕಾಲದಲ್ಲಿ ನಡೆಯಲಿದೆ," ಎಂದು ತಿಳಿಸಿದರು.

Read More
Next Story