
Namma Metro| ಗುಲಾಬಿ ಮಾರ್ಗದಲ್ಲಿ ಶೀಘ್ರ ಮೆಟ್ರೋ ಸಂಚಾರ; ಅಂತಿಮ ಹಂತದ ಕಾಮಗಾರಿ ಪರಿಶೀಲನೆ
ಗುಲಾಬಿ ಮಾರ್ಗದ ರೀಚ್-6ರ ಎಲಿವೇಟೆಡ್ ವಿಭಾಗದ ಪರಿಶೀಲನೆಯು ಮೆಟ್ರೋ ಕಾರ್ಯಾರಂಭ ಪ್ರಕ್ರಿಯೆಯ ಪ್ರಥಮ ಹಂತವಾಗಿದೆ.
'ನಮ್ಮ ಮೆಟ್ರೋ' ಯೋಜನೆಯ ಹಂತ-2ರ ಗುಲಾಬಿ ಮಾರ್ಗದ (Pink Line) ರೀಚ್-6ರ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳು ಭಾಗಶಃ ಪೂರ್ಣಗೊಂಡಿದ್ದು, ಶೀಘ್ರವೇ ಮೆಟ್ರೋ ರೈಲುಗಳ ಕಾರ್ಯಾಚರಣೆ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ಅವರು ಕಾಮಗಾರಿಗಳ ಪ್ರಗತಿ, ಭದ್ರತಾ ನಿಯಮಾವಳಿಗಳು ಹಾಗೂ ಎಂಜಿನಿಯರಿಂಗ್ ಮಾನದಂಡಗಳನ್ನು ಖುದ್ದು ಪರಿಶೀಲಿಸಿದರು. ಸಿವಿಲ್ ಕಾಮಗಾರಿಗಳು, ನಿಲ್ದಾಣಗಳ ಅಭಿವೃದ್ಧಿ, ವಯಾಡಕ್ಟ್ ನಿರ್ಮಾಣ, ಸಿಸ್ಟಮ್ ಅಳವಡಿಕೆ ಹಾಗೂ ಸಂಬಂಧಿತ ಮೂಲಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಗುಲಾಬಿ ಮಾರ್ಗದ ರೀಚ್-6ರ ಎಲಿವೇಟೆಡ್ ವಿಭಾಗದ ಪರಿಶೀಲನೆಯು ಮೆಟ್ರೋ ಕಾರ್ಯಾರಂಭ ಪ್ರಕ್ರಿಯೆಯ ಪ್ರಥಮ ಹಂತವಾಗಿದೆ. ಈ ಮಾರ್ಗದಲ್ಲಿ ಸೇವೆ ಆರಂಭವಾದರೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಸುಧಾರಿಸಲಿದೆ. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಗದಿತ ಅವಧಿಯಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗುಲಾಬಿ ಮಾರ್ಗ ಎಲ್ಲಿಂದ ಎಲ್ಲಿಗೆ?
ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ನಾಗವಾರದವರೆಗಿನ 21.26 ಕಿ.ಮೀ. ಉದ್ದದ ಈ ಗುಲಾಬಿ ಮಾರ್ಗದ ಎತ್ತರಿಸಿದ ಹಂತದ (Elevated Section) ಕಾಮಗಾರಿಗಳು ಬಹುತೇಕ ಮುಗಿದಿವೆ. ಈ ಹಿಂದೆ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿತ್ತು. ಆದರೆ, ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿತ್ತು. ಇದೀಗ ರೀಚ್-6 ವಿಭಾಗದಲ್ಲಿ ಕಾರ್ಯಾರಂಭಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.
ಈ ಮಾರ್ಗದಲ್ಲಿ ತಾವರೆಕೆರೆ, ಜಯದೇವ ಇಂಟರ್ಚೇಂಜ್ ನಿಲ್ದಾಣ, ಜೆ.ಪಿ. ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳು ಬರಲಿವೆ. ರೈಲು ಹಳಿ ಹಾಕುವ ಕಾರ್ಯ ಮುಗಿದಿದ್ದು, ವಯಾಡಕ್ಟ್ ಬ್ರಿಡ್ಜ್ ಕೂಡ ಸಿದ್ಧವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ನಿಲ್ದಾಣಗಳಿಗೆ ವಿಶೇಷ ಕಲಾತ್ಮಕ ವಿನ್ಯಾಸ ನೀಡಲಾಗಿದ್ದು, ಜೆ.ಪಿ. ನಗರ ನಿಲ್ದಾಣವು ಹಂತ-3ರ ಮೆಟ್ರೋಗೂ ಸಂಪರ್ಕ ಕಲ್ಪಿಸಲಿದೆ. ಪ್ರಸ್ತುತ ಸಿಗ್ನಲಿಂಗ್ ಮತ್ತು ಟೆಲಿ ಕಮ್ಯುನಿಕೇಶನ್ ಕಾಮಗಾರಿಗಳು ಪ್ರಗತಿಯಲ್ಲಿವೆ.
ಒಟ್ಟು 18 ನಿಲ್ದಾಣಗಳು
ನಮ್ಮ ಮೆಟ್ರೋ ಎರಡನೇ ಹಂತದ ಈ ಯೋಜನೆಯು ಒಟ್ಟು 21.26 ಕಿ.ಮೀ. ಉದ್ದವಿದ್ದು, ಒಟ್ಟು 18 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 7.5 ಕಿ.ಮೀ. ಎತ್ತರಿಸಿದ ಮಾರ್ಗವಿದ್ದು (ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆವರೆಗೆ - 6 ನಿಲ್ದಾಣಗಳು), ಉಳಿದ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ (ಡೇರಿ ವೃತ್ತದಿಂದ ನಾಗವಾರದವರೆಗೆ - 12 ನಿಲ್ದಾಣಗಳು).

