
ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಅಪ್‌ಡೇಟ್: ಮೇ 2026ರಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಎತ್ತರಿಸಿದ ಮಾರ್ಗ ಸಂಚಾರಕ್ಕೆ ಸಿದ್ಧ
Namma Metro|ಮೆಟ್ರೋ ಪಿಂಕ್ ಲೈನ್ ಕಾರ್ಯಾಚರಣೆಗೆ ದಿನಗಣನೆ ಶುರು!
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಮೇ ತಿಂಗಳಲ್ಲಿ ಓಪನ್ ಆಗಲಿದೆ.
ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಪಿಂಕ್ ಲೈನ್‌ನ ಮೊದಲ ಹಂತದ ಉದ್ಘಾಟನೆಗೆ ಬಿಎಂಆರ್‌ಸಿಎಲ್ ವೇದಿಕೆ ಸಿದ್ಧಪಡಿಸುತ್ತಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗವನ್ನು ಈ ವರ್ಷದ ಮೇ ತಿಂಗಳೊಳಗೆ ಸಾರ್ವಜನಿಕ ಮುಕ್ತಗೊಳಿಸುವ ಗುರಿಯೊಂದಿಗೆ ಇಂದಿನಿಂದ ಭರದ ಸಿದ್ದತೆ ನಡೆಸುತ್ತಿದೆ.
ಈ ಗುರಿಯನ್ನು ತಲುಪುವ ಉದ್ದೇಶದಿಂದ ಇಂದಿನಿಂದ ಏಪ್ರಿಲ್ 5ರವರೆಗೆ ಒಟ್ಟು 16 ದಿನಗಳ ಕಾಲ ಆರ್‌ಡಿಎಸ್ಒ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ಪರಿಶೀಲನಾ ಕಾರ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ತಜ್ಞರ ತಂಡವು ಮೆಟ್ರೋ ರೈಲಿನ ವೇಗ ಮತ್ತು ಲೋಡ್ ಸಾಮರ್ಥ್ಯದ ಪರೀಕ್ಷೆಯ ಜೊತೆಗೆ ಟ್ರ್ಯಾಕ್‌ನ ದಕ್ಷತೆ, ನಿಲ್ದಾಣಗಳ ಸೌಲಭ್ಯಗಳು ಹಾಗೂ ವಿದ್ಯುತ್ ಪೂರೈಕೆಯ ಸ್ಥಿತಿಗತಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಲಿದೆ.
ಈಗಾಗಲೇ ಪಿಂಕ್ ಲೈನ್ ಕಾರ್ಯಾಚರಣೆಗಾಗಿ ನಾಲ್ಕು ರೈಲುಗಳು ಆಗಮಿಸಿದ್ದು, ಈ ತಿಂಗಳ ಅಂತ್ಯಕ್ಕೆ ಐದನೇ ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಈ ಮೂಲಕ ಮೊದಲ ಹಂತದಲ್ಲಿ ಒಟ್ಟು ಆರು ಚಾಲಕರಹಿತ ರೈಲುಗಳು ಸಂಚಾರ ನಡೆಸಲಿದ್ದು, ಕಾಳೇನ ಅಗ್ರಹಾರದಿಂದ ನಾಗವಾರದ ನಡುವೆ ಸಂಪರ್ಕ ಕಲ್ಪಿಸಲಿವೆ.
ಒಟ್ಟು 21.25 ಕಿಲೋಮೀಟರ್ ಉದ್ದದ ಈ ಪಿಂಕ್ ಲೈನ್ ಯೋಜನೆಯು 18 ನಿಲ್ದಾಣಗಳನ್ನು ಒಳಗೊಂಡಿದ್ದು, ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್‌ಗಳಾಗಿವೆ. ಸದ್ಯಕ್ಕೆ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ಎತ್ತರಿಸಿದ ನಿಲ್ದಾಣಗಳ ಮಾರ್ಗವನ್ನು ಉದ್ಘಾಟಿಸಲು ಸಿದ್ಧತೆ ನಡೆಯುತ್ತಿದ್ದು, ಉಳಿದ 13.76 ಕಿಲೋಮೀಟರ್ ಉದ್ದದ ಭೂಗತ ಮಾರ್ಗದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವು ಪೂರ್ಣಗೊಂಡ ನಂತರ ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿಲೋಮೀಟರ್ ಉದ್ದವಿರುವ ಈ ಪಿಂಕ್ ಲೈನ್, ನಗರದ ಹೃದಯಭಾಗದ ಪ್ರಮುಖ ಪ್ರದೇಶಗಳನ್ನು ಬೆಸೆಯಲಿದೆ. ಜಯದೇವ, ಎಂ.ಜಿ. ರೋಡ್ ಮತ್ತು ಶಿವಾಜಿನಗರದಂತಹ ಪ್ರಮುಖ ಕೇಂದ್ರಗಳ ಮೂಲಕ ಹಾದುಹೋಗುವುದರಿಂದ ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸುವ ಸಮಯ ಗಣನೀಯವಾಗಿ ಉಳಿತಾಯವಾಗಲಿದೆ. ಈ ಮಾರ್ಗವು ಪೂರ್ಣಗೊಂಡರೆ ಬನ್ನೇರುಘಟ್ಟ ರಸ್ತೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವ ಲಕ್ಷಾಂತರ ವಾಹನ ಸವಾರರಿಗೆ ಮೆಟ್ರೋ ಸುಲಭ ಮತ್ತು ವೇಗದ ಪರ್ಯಾಯ ವ್ಯವಸ್ಥೆಯಾಗಲಿದೆ. ಇದರಿಂದ ಇಂಧನ ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಕೂಡ ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

