
Namma Metro| ಆಮೆಗತಿ ಕಾಮಗಾರಿ: ದೆಹಲಿ, ಮುಂಬಯಿಗಿಂತಲೂ ನಮ್ಮ ಮೆಟ್ರೋ ದುಬಾರಿ
ʼನಮ್ಮ ಮೆಟ್ರೋʼ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ 2011 ರಿಂದ ಮೆಟ್ರೋ ಮಾರ್ಗವು ವಾರ್ಷಿಕ ಸರಾಸರಿ 6-7 ಕಿ.ಮೀ. ಲೆಕ್ಕದಲ್ಲಿ ಈವರೆಗೆ 96 ಕಿ.ಮೀ. ಮಾತ್ರ ವಿಸ್ತರಿಸಿದೆ. ದೆಹಲಿಯಲ್ಲಿ ವಾರ್ಷಿಕ 16 ಕಿ.ಮೀ. ಲೆಕ್ಕದಲ್ಲಿ ವಿಸ್ತರಣೆಯಾಗುತ್ತಿದೆ.
ಬೆಂಗಳೂರಿನ ʼನಮ್ಮ ಮೆಟ್ರೋʼ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಫೆ.9 ರಿಂದ ದರ ಪರಿಷ್ಕರಣೆ ಜಾರಿಯಾಗಲಿದ್ದು, ಶೇ 5 ರಷ್ಟು ಶುಲ್ಕ ಏರಿಕೆಯಿಂದ ʼನಮ್ಮ ಮೆಟ್ರೋʼ ಗರಿಷ್ಠ ಪ್ರಯಾಣ ದರ 95 ರೂ. ಗಳಿಗೆ ತಲುಪಲಿದೆ. ಬೆಂಗಳೂರಿನ ದರ ಏರಿಕೆಯು ದೇಶದ ಇತರೆ ಮೆಟ್ರೋ ರೈಲು ನಿಗಮಗಳಿಗಿಂತ ದುಬಾರಿಯಾಗಿದೆ.
ದೇಶದಲ್ಲಿ ಅತಿ ಹೆಚ್ಚು ಉದ್ದದ 394 ಕಿ.ಮೀ. ಮೆಟ್ರೋ ಜಾಲ ಹೊಂದಿರುವ ದೆಹಲಿಯಲ್ಲಿ ಮೆಟ್ರೋ ಗರಿಷ್ಠ ಪ್ರಯಾಣ ದರವನ್ನು 2025 ಆಗಸ್ಟ್ ತಿಂಗಳಲ್ಲಿ 64 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಮುಂಬೈನಲ್ಲಿ 60 ಕ್ಕೂ ಹೆಚ್ಚು ಕಿ.ಮೀ. ಮೆಟ್ರೋ ಮಾರ್ಗವಿದ್ದು, 42 ಕಿ.ಮೀ. ನಂತರದ ಪ್ರಯಾಣಕ್ಕೆ ಗರಿಷ್ಠ ಪ್ರಯಾಣ ದರ 80 ರೂ.ಗಳಿದೆ.
ದೇಶದಲ್ಲೇ ಎರಡನೇ ಅತಿ ಹೆಚ್ಚು ಉದ್ದದ ಮಾರ್ಗ ಹೊಂದಿರುವ ಬೆಂಗಳೂರಿನಲ್ಲಿ ಗರಿಷ್ಠ ಪ್ರಯಾಣ ದರ ಶತಕದ ಸಮೀಪ ಬಂದಿರುವುದು ಪ್ರಯಾಣಿಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇದೀಗ ʼನಮ್ಮ ಮೆಟ್ರೋʼ ದರ ಏರಿಕೆ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಜಾರಿಯಲ್ಲಿರುವ ಮೆಟ್ರೋ ಪ್ರಯಾಣ ದರ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹೈದರಾಬಾದ್ ಮೆಟ್ರೋ
ಹೈದರಾಬಾದ್ ಮೆಟ್ರೋ ನಿಗಮವು ಒಟ್ಟು 71 ಕಿ.ಮೀ. ಜಾಲ ಹೊಂದಿದ್ದು, ಕನಿಷ್ಠ ಪ್ರಯಾಣ ದರ 11 ರೂ.ಗಳಿಂದ (2 ಕಿ.ಮೀ ) ಗರಿಷ್ಠ 69 ರೂ.ಗಳವರೆಗೆ ಇದೆ. 24 ಕಿ.ಮೀ ಗಿಂತ ಹೆಚ್ಚು ದೂರದ ಪ್ರಯಾಣಕ್ಕೆ ಗರಿಷ್ಠ ದರ ಅನ್ವಯವಾಗಲಿದೆ. 2025 ಮೇ ತಿಂಗಳಲ್ಲಿ ಹೈದರಾಬಾದ್ ಮೆಟ್ರೋ ನಿಗಮವು ದರ ಪರಿಷ್ಕರಣೆ ಮಾಡಿತ್ತು
ಕೊಲ್ಕತ್ತಾ ಮೆಟ್ರೋ
ದೇಶದಲ್ಲೇ ಅತ್ಯಂತ ಅಗ್ಗದ ಮೆಟ್ರೋ ಪ್ರಯಾಣ ದರ ಕೊಲ್ಕತ್ತಾದಲ್ಲಿದೆ. ಒಟ್ಟು 73 ಕಿ.ಮೀ. ಮೆಟ್ರೋ ಜಾಲ ಹೊಂದಿದೆ. ಇಲ್ಲಿ ಕನಿಷ್ಠ ದರ 5 ರೂ. ಇದ್ದರೆ, 30 ಕಿ.ಮೀ.ನಂತರದ ಪ್ರಯಾಣಕ್ಕೆ ಗರಿಷ್ಠ ದರ 50 ರೂ.ಗಳಿದೆ. ವಿಶೇಷವೆಂದರೆ ಮೆಟ್ರೋ ಬಳಕೆದಾರರು ಹಾಗೂ ವಿದ್ಯಾರ್ಥಿಗಳಿಗೆ ಶೇ. 60 ರವರೆಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.
ಚೆನ್ನೈ ಮೆಟ್ರೋ
ಚೆನ್ನೈ ಮೆಟ್ರೋ ಪ್ರಯಾಣ ದರವು ದೂರ ಆಧರಿಸಿ ನಿರ್ಧರಿಸಲಾಗುತ್ತದೆ. ಒಟ್ಟು 54 ಕಿ.ಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಕನಿಷ್ಠ ಪ್ರಯಾಣ ದರ 10 ರೂ.ಗಳಿಂದ ಗರಿಷ್ಠ 50 ರೂ.ಗಳಾಗಿದೆ. ಚೆನ್ನೈ ಮೆಟ್ರೋ ರೈಲು ನಿಗಮವು ಆ್ಯಪ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸುವ ಪ್ರಯಾಣಿಕರಿಗೆ ರಿಯಾಯಿತಿ ನೀಡಿದೆ.
ದೆಹಲಿ ಮೆಟ್ರೋ
ದೇಶದಲ್ಲೇ ಅತಿ ಹೆಚ್ಚು ಉದ್ದದ ಮೆಟ್ರೋ ಜಾಲ ಹೊಂದಿರುವ ದೆಹಲಿಯಲ್ಲಿ ಕನಿಷ್ಠ ಪ್ರಯಾಣ ದರ 11 ರೂ.ಗಳಿದ್ದು, 32 ಕಿ.ಮೀ. ನಂತರದ ಪ್ರಯಾಣಕ್ಕೆ ಗರಿಷ್ಠ ಪ್ರಯಾಣ ದರ 64 ರೂ.ಗಳಿದೆ.
ಡಿಎಂಆರ್‌ಸಿಯು ಎಂಟು ವರ್ಷಗಳ ನಂತರ ದರ ಏರಿಕೆಯನ್ನು ಕಳೆದ 2025 ಆಗಸ್ಟ್ ತಿಂಗಳಲ್ಲಿ ಪರಿಷ್ಕರಿಸಿತ್ತು. ದರ ಹೆಚ್ಚಳವು ಪ್ರಯಾಣದ ದೂರ ಆಧರಿಸಿ 1 ರಿಂದ 4 ರೂ.ಗಳವರೆಗೆ ಏರಿಕೆ ಮಾಡಲಾಗಿತ್ತು. ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಗರಿಷ್ಠ 5 ರೂ. ವರೆಗೆ ಹೆಚ್ಚಿಸಲಾಗಿತ್ತು.
ಮುಂಬೈ ಮೆಟ್ರೋ
ಮುಂಬೈ ಮಹಾನಗರದಲ್ಲಿ ಮೆಟ್ರೋ ಜಾಲವು ಒಟ್ಟು 60 ಕ್ಕೂ ಹೆಚ್ಚು ಕಿ.ಮೀ. ಇದೆ. ಕನಿಷ್ಠ ದರ 10 ರಿಂದ 80 ರೂ.ಗಳವರೆಗೆ ಇದೆ. ಮೂರು ಕಿ.ಮೀ. ಒಳಗೆ 10 ರೂ, 3 ರಿಂದ 12 ಕಿ.ಮೀ.ವರೆಗೆ 20 ರೂ. ಮತ್ತು 42 ಕಿ.ಮೀ ಗಿಂತ ಹೆಚ್ಚಿನ ದೂರಕ್ಕೆ 80 ರೂ. ನಿಗದಿಪಡಿಸಲಾಗಿದೆ. ಪ್ರವಾಸಿ ಪಾಸ್‌ಗಳನ್ನು ಒಳಗೊಂಡಿದೆ.
ಜೈಪುರ ಮೆಟ್ರೋ
ರಾಜಸ್ಥಾನದಲ್ಲಿ ಮೆಟ್ರೋ ಜಾಲವು 12 ಕಿ.ಮೀ. ಇದೆ. ಪ್ರಯಾಣ ದರ ಕನಿಷ್ಠ 15 ರೂ.ಗಳಿದೆ. ಇಲ್ಲಿ ಒಟ್ಟು 11ನಿಲ್ದಾಣಗಳಿದ್ದು, ಗರಿಷ್ಠ ಪ್ರಯಾಣ ದರ 30 ರೂ.ಗಳಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಟೋಕನ್ ದರಕ್ಕಿಂತ ಶೇ.10 ರಷ್ಟು ರಿಯಾಯಿತಿ ಸಿಗಲಿದೆ. 2025 ಜ.31 ರಂದು ಕೊನೆಯದಾಗಿ ದರ ಪರಿಷ್ಕರಿಸಲಾಗಿದೆ.
ಉತ್ತರ ಪ್ರದೇಶ ಮೆಟ್ರೋ (ಲಖನೌ, ಕಾನ್ಪುರ, ಆಗ್ರಾ, ನೋಯ್ಡಾ)
ಉತ್ತರಪ್ರದೇಶದ ಲಖನೌ, ಕಾನ್ಪುರ, ಆಗ್ರಾ ಹಾಗೂ ನೋಯ್ಡಾ ನಗರಗಳಲ್ಲಿ ಮೆಟ್ರೋ ಸೇವೆಯಿದೆ. ಲಖನೌ ನಗರದಲ್ಲಿ ಕನಿಷ್ಠ 10 ರಿಂದ ಗರಿಷ್ಠ 60 ರೂ.ಗಳವರೆಗೆ ಪ್ರಯಾಣ ದರವಿದೆ. ಇಲ್ಲಿ ʼಗೋ ಸ್ಮಾರ್ಟ್ʼ ಕಾರ್ಡ್ ಬಳಸುವವರಿಗೆ ಶೇ 10 ರಷ್ಟು ರಿಯಾಯಿತಿ ನೀಡಲಾಗಿದೆ.
ಆಗ್ರಾದಲ್ಲಿ ಮೆಟ್ರೋ ದರವು ದೂರವನ್ನು ಅವಲಂಬಿಸಿದೆ. 1 ಕಿ.ಮೀ.ವರೆಗೆ 10 ರೂ., 1ರಿಂದ 2 ಕಿ.ಮೀ.ವರೆಗೆ 15 ರೂ., 2ರಿಂದ 6 ಕಿ.ಮೀ.ವರೆಗೆ 20 ರೂ. ದರ ನಿಗದಿಪಡಿಸಲಾಗಿದೆ. ಕಾನ್ಪುರ ಮೆಟ್ರೋದಲ್ಲಿ ಕನಿಷ್ಠ ಪ್ರಯಾಣ ದರ 10 ರಿಂದ ಗರಿಷ್ಠ 40 ರವರೆಗೆ ದರ ನಿಗದಿಪಡಿಸಲಾಗಿದೆ.
ನೋಯ್ಡಾದಲ್ಲಿ ನಿಲ್ದಾಣಗಳ ಸಂಖ್ಯೆ ಆಧರಿಸಿ ಪ್ರಯಾಣ ದರ ನಿಗದಿಪಡಿಸಲಾಗಿದೆ. ಕನಿಷ್ಠ 10 ರಿಂದ 50 ರೂ.ವರೆಗೆ ಪ್ರಯಾಣ ದರವಿದೆ. ಸ್ಮಾರ್ಟ್ ಕಾರ್ಡ್ದಾರರಿಗೆ ಶೇ 10 ರಿಯಾಯಿತಿ ಸಿಗಲಿದೆ. ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ 40 ರೂ. ದರ ಇರಲಿದೆ.
ಪಾಟ್ನಾ ಮೆಟ್ರೋ
ಬಿಹಾರದ ಪಟ್ನಾದಲ್ಲಿ 30 ಕಿ.ಮೀ. ಉದ್ದದ ಮೆಟ್ರೋ ಜಾಲವಿದೆ. ಕನಿಷ್ಠ ಪ್ರಯಾಣ ದರವು 10 ರಿಂದ ಗರಿಷ್ಠ 50 ರೂ.ಗಳವರೆಗೆ ಇದೆ.
ಅಹಮದಾಬಾದ್ ಮೆಟ್ರೋ
ಗುಜರಾತಿನ ಅಹಮದಾಬಾದ್ ಹಾಗೂ ಗಾಂಧಿನಗರ ಸಂಪರ್ಕಿಸುವ ಮೆಟ್ರೋ ಮಾರ್ಗವು 68 ಕಿ.ಮೀ. ಉದ್ದವಿದೆ. 2.5 ಕಿ.ಮೀ ವರೆಗೆ 10ರೂ. ಇದ್ದರೆ, ಗರಿಷ್ಠ ದೂರದ ಪ್ರಯಾಣಕ್ಕೆ 50 ರೂ. ಪ್ರಯಾಣ ಶುಲ್ಕವಿದೆ. ಮೆಟ್ರೋ ರೈಲು ನಿಗಮಗಳಲ್ಲಿ ರೈಲು ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚಗಳನ್ನು ಆಧರಿಸಿ ಬೆಲೆ ಏರಿಕೆ ಮಾಡಲಾಗುತ್ತದೆ.
ಆಮೆಗತಿಯಲ್ಲಿ ʼನಮ್ಮ ಮೆಟ್ರೋʼ ಕಾಮಗಾರಿ
ದೇಶದ ಬೇರೆ ಬೇರೆ ನಗರಗಳ ಮೆಟ್ರೋ ಕಾಮಗಾರಿಗೆ ಹೋಲಿಸಿದರೆ ʼನಮ್ಮ ಮೆಟ್ರೋʼ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ 2011 ರಿಂದ ಮೆಟ್ರೋ ಮಾರ್ಗವು ವಾರ್ಷಿಕವಾಗಿ ಸರಾಸರಿ 6-7 ಕಿ.ಮೀ. ಲೆಕ್ಕದಲ್ಲಿ ಈವರೆಗೆ ಕೇವಲ 96 ಕಿ.ಮೀ. ಮಾತ್ರ ವಿಸ್ತರಿಸಿದೆ. ಇದರಿಂದ ಯೋಜನಾ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಮೆಟ್ರೋ ವ್ಯವಸ್ಥೆ ಮೇಲೆ ಸಾರ್ವಜನಿಕರು ಮೂಗು ಮುರಿಯುವಂತಾಗಿದೆ.
ದೆಹಲಿ ಮೆಟ್ರೋ 2002 ರಿಂದ ಈವರೆಗೆ 394 ಕಿ.ಮೀ.ವರೆಗೆ ವಿಸ್ತರಿಸಿದೆ. ವಾರ್ಷಿಕವಾಗಿ ಸರಾಸರಿ 16 ರಿಂದ 17 ಕಿ.ಮೀ. ವೇಗದಲ್ಲಿ ಮಾರ್ಗ ವಿಸ್ತರಣೆ ನಡೆಯುತ್ತಿದೆ. ಬೃಹತ್ ಜಾಲ ಹೊಂದಿರುವ ದೆಹಲಿ ಮೆಟ್ರೋ ಪ್ರಯಾಣ ದರವು ಗರಿಷ್ಠ 64 ರೂ. ಇದೆ. ಭಾನುವಾರ ಮತ್ತು ರಜೆ ದಿನಗಳಲ್ಲಿ 32 ಕಿ.ಮೀ. ಮೀರಿದ ಪ್ರಯಾಣಕ್ಕೆ 43 ರೂ. ಇದೆ. ಆದರೆ, ಬೆಂಗಳೂರು ಮೆಟ್ರೋ 25 ಕಿ.ಮೀ. ಮೀರಿದ ದೂರಕ್ಕೆ 90 ರೂ. ದುಬಾರಿಯಾಗಿದೆ.
"ದೆಹಲಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ದರ ದುಪ್ಪಟ್ಟಾಗಿದೆ. ನಾನು ದೆಹಲಿಯಿಂದ ಬಂದಿದ್ದೇನೆ. ಅಲ್ಲಿ ಮೆಟ್ರೋದಲ್ಲಿ ಓಡಾಡಿದ್ದೇನೆ. ಆದರೆ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ತುಂಬಾ ಹೆಚ್ಚಾಗಿದೆ" ಎಂದು ಖಾಸಗಿ ಕಂಪನಿ ಉದ್ಯೋಗಿ ಮನೋಜ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

