ನಮ್ಮ ಮೆಟ್ರೋ ನೀಲಿ ಮಾರ್ಗ: ಹಂತ ಹಂತವಾಗಿ ಸೇವೆ ಆರಂಭಿಸಲು ತೀರ್ಮಾನ
ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗವು ಕಾನೂನು ತೊಡಕುಗಳು ನಿವಾರಣೆಯಾಗಿ ಕಾಮಗಾರಿಗಳು ವೇಗ ಪಡೆದುಕೊಂಡಿದೆ.
ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಐಟಿ ಕಾರಿಡಾರ್ ಆದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಆರಂಭವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗವು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೆಟ್ರೋ ಕಾರಿಡಾರ್ಗಳಲ್ಲಿ ಒಂದಾಗಿದೆ. ಇತ್ತೀಚಿನ ಕಾನೂನು ತೊಡಕುಗಳು ನಿವಾರಣೆಯಾಗಿರುವುದು ಮತ್ತು ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿರುವುದು ನಗರದ ಲಕ್ಷಾಂತರ ಪ್ರಯಾಣಿಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಮಾರ್ಗದ ಉದ್ದ 19.75 ಕಿ.ಮೀ ಇದ್ದು, ಕೆ.ಆರ್. ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮಾರ್ಗವು ಒಟ್ಟು 38.44 ಕಿ.ಮೀ ಉದ್ದ ಇದೆ. ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ವಿಮಾನ ನಿಲ್ದಾಣವರೆಗೆ ಒಟ್ಟು 58-60 ಕಿ.ಮೀ ಉದ್ದದ ಬೃಹತ್ ಮಾರ್ಗ ನಿರ್ಮಾಣವಾಗಲಿದ್ದು, ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳನ್ನು ಉತ್ತರ ಭಾಗದಲ್ಲಿರುವ ವಿಮಾನ ನಿಲ್ದಾಣದೊಂದಿಗೆ ನೇರವಾಗಿ ಬೆಸೆಯಲಿದೆ. ಈ ಮಾರ್ಗವು ನಗರದ ಪ್ರಮುಖ ವಾಣಿಜ್ಯ, ವಸತಿ ಮತ್ತು ತಂತ್ರಜ್ಞಾನ ಕೇಂದ್ರಗಳ ಮೂಲಕ ಹಾದುಹೋಗುತ್ತದೆ. ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್, ಇಬ್ಬಲೂರು, ಬೆಳ್ಳಂದೂರು, ಮಾರತ್ಹಳ್ಳಿ, ಕೆ.ಆರ್. ಪುರಂ, ಕಸ್ತೂರಿನಗರ, ನಾಗವಾರ ಮತ್ತು ಹೆಬ್ಬಾಳ ಮಾರ್ಗವಾಗಿ ಯಲಹಂಕ ದಾಟಿ ವಿಮಾನ ನಿಲ್ದಾಣವನ್ನು ತಲುಪಲಿದೆ.
ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ
ಮೆಟ್ರೋ ಕಾಮಗಾರಿ ಪೂರ್ಣಗೊಂಡ ನಂತರ ಒಮ್ಮೆಲೇ ಇಡೀ ಮಾರ್ಗವನ್ನು ತೆರೆಯುವ ಬದಲು, ಸಿದ್ಧವಾದ ಭಾಗಗಳನ್ನು ಹಂತ ಹಂತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಯೋಜನೆಯ ಮೊದಲ ಮೈಲಿಗಲ್ಲಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಈ ಪ್ರಾಯೋಗಿಕ ಸಂಚಾರದ ಮೂಲಕ ಸಿಗ್ನಲಿಂಗ್, ಹಳಿಯ ಸಾಮರ್ಥ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರೀಕ್ಷಿಸಲಾಗುತ್ತದೆ. ನವೆಂಬರ್ ಮೊದಲ ವಾರದಿಂದಲೇ ಕಾಮಗಾರಿ ಪೂರ್ಣಗೊಂಡ ಒಂದೊಂದೇ ನಿಲ್ದಾಣಗಳನ್ನು ಸಾರ್ವಜನಿಕ ಸೇವೆಗೆ ಅಣಿಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಕಾಮಗಾರಿ ಎದುರಿಸಿದ ಸವಾಲುಗಳು
ನೀಲಿ ಮಾರ್ಗದ ನಿರ್ಮಾಣವು ಆರಂಭದಿಂದಲೂ ಹಲವು ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ವಿಶೇಷವಾಗಿ ಕೆ.ಆರ್. ಪುರಂನಿಂದ ನಾಗವಾರ ಮತ್ತು ಹೆಬ್ಬಾಳವರೆಗಿನ ಮಾರ್ಗವು ಅತ್ಯಂತ ಸಂಕೀರ್ಣವಾದ ಭೂಪ್ರದೇಶ ಮತ್ತು ಸಾಂದ್ರ ಜನವಸತಿಯನ್ನು ಹೊಂದಿದ್ದು, ಕಾಮಗಾರಿ ತಡವಾಗಲು ಮುಖ್ಯ ಕಾರಣವಾಯಿತು. ಯೋಜನೆ ವಿಳಂಬವಾಗಲು ಪ್ರಮುಖ ಕಾರಣಗಳಲ್ಲಿ ಪರಿಸರ ಸಂಬಂಧಿತ ಕಾನೂನು ಪ್ರಕ್ರಿಯೆಗಳೂ ಒಂದಾಗಿದೆ. ಕೆ.ಆರ್. ಪುರಂ ಬಳಿ ಹಂತ 2ರ ಕಾಮಗಾರಿ ಆರಂಭಿಸಲು ಮರಗಳನ್ನು ಕಡಿಯುವುದಕ್ಕೆ ನ್ಯಾಯಾಲಯದಿಂದ ಸುಮಾರು ಒಂದು ವರ್ಷಗಳ ಕಾಲ ತಡೆಯಾಜ್ಞೆ ಇತ್ತು. ಇತರ ರಾಜ್ಯಗಳು ಅಥವಾ ನಗರಗಳಲ್ಲಿ ಮೆಟ್ರೋ ಯೋಜನೆಗಳಿಗಾಗಿ ಮರ ಕಡಿಯಲು ಇಷ್ಟೊಂದು ಕಠಿಣ ಪ್ರಕ್ರಿಯೆಗಳಿರುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಿಂದಾಗಿ ಬಿಎಂಆರ್‌ಸಿಎಲ್ ವೃಕ್ಷ ಸಮಿತಿ ಮತ್ತು ಹೈಕೋರ್ಟ್‌ನಿಂದ ಅನುಮತಿ ಪಡೆಯಬೇಕಾಯಿತು. ಪ್ರತಿಯೊಂದು ಮರವನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಕಠಿಣ ನಿಯಮಾವಳಿಗಳನ್ನು ಪಾಲಿಸಬೇಕಾಗಿ ಬಂದಿದ್ದರಿಂದ, ಕಾಮಗಾರಿ ನಿಗದಿತ ಸಮಯಕ್ಕಿಂತ ಕನಿಷ್ಠ ಒಂದು ವರ್ಷ ವಿಳಂಬವಾಯಿತು.
ನೀಲಿ ಮಾರ್ಗದ ಯೋಜನೆ ಪೂರ್ಣಗೊಂಡರೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಮೆಟ್ರೋ ಆರಂಭವಾದರೆ ರಸ್ತೆ ಮೇಲಿನ ವಾಹನ ದಟ್ಟಣೆ ಶೇ. 30 ರಿಂದ 40 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ನಗರದ ದಕ್ಷಿಣ ಭಾಗದಿಂದ ವಿಮಾನ ನಿಲ್ದಾಣ ತಲುಪಲು ರಸ್ತೆ ಮಾರ್ಗದಲ್ಲಿ ಕನಿಷ್ಠ 2 ರಿಂದ 3 ಗಂಟೆ ಬೇಕಾಗುತ್ತದೆ. ಮೆಟ್ರೋ ಆರಂಭವಾದರೆ ಕೇವಲ 60 ರಿಂದ 75 ನಿಮಿಷಗಳಲ್ಲಿ ಸಂಚಾರ ದಟ್ಟಣೆಯ ಕಿರಿಕಿರಿಯಿಲ್ಲದೆ ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣ ತಲುಪಬಹುದು. ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಇಂಧನ ಉಳಿತಾಯವಾಗಲಿದೆ. ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ತಗ್ಗಿ, ನಗರದ ಪರಿಸರ ಸುಧಾರಣೆಗೆ ದೊಡ್ಡ ಕೊಡುಗೆ ಸಿಗಲಿದೆ.
