
Namma Metro| 350 ಕಿ.ಮೀ ವಿಸ್ತರಣೆಯಾಗಲಿದೆ ನಮ್ಮ ಮೆಟ್ರೋ; ಬರಲಿದೆ 300 ಕಿ.ಮೀ ಬಫರ್ ರಸ್ತೆ
ಬೆಂಗಳೂರಿನಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ವ್ಯವಸ್ಥೆ ಒದಗಿಸಲು ಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಕ್ರಿಯಾಯೋಜನೆಯನ್ನು ಸರ್ಕಾರ ರೂಪಿಸಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಕಾಂಗ್ರೆಸ್ ಸರ್ಕಾರ 'ಮಾಸ್ಟರ್ ಪ್ಲಾನ್' ರೂಪಿಸಿದೆ. ವಿಶ್ವದರ್ಜೆಯ ಮೂಲಸೌಕರ್ಯ ವ್ಯವಸ್ಥೆ ಒದಗಿಸಲು ಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಕ್ರಿಯಾಯೋಜನೆ ರೂಪಿಸಿದ್ದು, ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಿದೆ.
ನಗರದ ಪ್ರಮುಖ ರಸ್ತೆಗಳ ಮೇಲಿನ ಒತ್ತಡ ಕಡಿಮೆ ಮಾಡಲು 109 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಅನುಕೂಲವಾಗಲಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
350 ಕಿ.ಮೀವರೆಗೆ ಮೆಟ್ರೋ ವಿಸ್ತರಣೆ
ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼ ಜಾಲವನ್ನು ಮುಂದಿನ ಕೆಲವೇ ವರ್ಷಗಳಲ್ಲಿ 350 ಕಿ.ಮೀ ಗೆ ವಿಸ್ತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದರಿಂದ ನಗರ ಹೊರವಲಯದ ಜನರಿಗೂ ಮೆಟ್ರೋ ಸಂಪರ್ಕ ಸಿಗಲಿದ್ದು, ರಸ್ತೆಗಳ ಮೇಲಿನ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲಿದೆ.
"ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವುದು ನಮ್ಮ ಗುರಿ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಮೊತ್ತದ ಯೋಜನೆ ಹಮ್ಮಿಕೊಂಡಿದ್ದೇವೆ. ಸಂಚಾರ ದಟ್ಟಣೆ ನಿವಾರಣೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಉತ್ತರಿಸಿದ ಸಂದರ್ಭದಲ್ಲಿ ಹಲವು ವಿವರಗಳನ್ನು ನೀಡಿದರು.
300 ಕಿ.ಮೀ ಬಫರ್ ರಸ್ತೆ ನಿರ್ಮಾಣ
ಬೆಂಗಳೂರಿನಲ್ಲಿ ಹೊಸ ರಸ್ತೆಗಳ ಸೃಷ್ಟಿ ಅನಿವಾರ್ಯವಾಗಿರುವುದರಿಂದ ನಗರದಾದ್ಯಂತ ರಾಜಕಾಲುವೆಗಳ ಪಕ್ಕದ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ.
ಸೇನೆಗೆ ಸೇರಿದ ಜಾಗದ ಬಳಕೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯು ಸ್ವಲ್ಪ ಜಾಗ ಬಿಟ್ಟುಕೊಡಲು ಸಮ್ಮತಿಸಿದೆ. ಯೋಜನೆಗೆ ಒಟ್ಟು 3 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಮೊದಲ ಹಂತವಾಗಿ ಸರ್ಕಾರ ಈಗಾಗಲೇ 300 ಕೋಟಿ ರೂ. ಬಿಡುಗಡೆ ಮಾಡಿದೆ.
40 ಕಿ.ಮೀ ಉದ್ದದ 'ಡಬಲ್ ಡೆಕ್ಕರ್' ರಸ್ತೆ
ಜಯನಗರ ಮಾದರಿಯಲ್ಲೇ ನಗರದ ವಿವಿಧ ಭಾಗಗಳಲ್ಲಿ 40 ಕಿ.ಮೀ ಉದ್ದದ ಡಬಲ್ ಡೆಕ್ಕರ್ ರಸ್ತೆ (ಕೆಳಗೆ ವಾಹನ ಸಂಚಾರ, ಮೇಲೆ ಮೆಟ್ರೋ) ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
“ಡಬಲ್ ಡೆಕ್ಕರ್ ಮಾದರಿಯನ್ನು ಪ್ರಧಾನಿಯವರಿಗೂ ತೋರಿಸಲಾಗಿದ್ದು, ಅವರು ಸಹ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಒಟ್ಟು ವೆಚ್ಚವನ್ನು ಬಿಎಂಆರ್ ಸಿಎಲ್ ಮತ್ತು ಬಿಬಿಎಂಪಿ ತಲಾ 50:50 ಅನುಪಾತದಲ್ಲಿ ಭರಿಸಲಿವೆ. ಸದ್ಯ ತಾಂತ್ರಿಕ ವರದಿಗಾಗಿ ಕಾಯಲಾಗುತ್ತಿದೆ.” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಮ್ಮಿಗೆಪುರದ ಬಳಿ ಸ್ಕೈಡೆಕ್ ಯೋಜನೆ
ಬೆಂಗಳೂರಿನ ಹೆಮ್ಮಿಗೆಪುರದ ಬಳಿ ಸ್ಕೈಡೆಕ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ಮೊದಲು ನೈಸ್ ಜಾಗದಲ್ಲಿ ಸ್ಕೈಡೆಕ್ ಯೋಜನೆಗೆ ನಿರ್ಧರಿಸಲಾಗಿತ್ತು. ಆದರೆ, ನೈಸ್ ಸಂಸ್ಥೆಯವರು ಎನ್ಒಸಿ ನೀಡಿರಲಿಲ್ಲ. ಇದಕ್ಕೂ ಮುನ್ನ ಎನ್ಜಿಎಫ್ ಬಳಿ ಸ್ಕೈಡೆಕ್ ನಿರ್ಮಿಸಲು ಯೋಜಿಸಲಾಗಿತ್ತು. ವಿಮಾನ ನಿಲ್ದಾಣದ ಸುತ್ತಮುತ್ತ ನಿರ್ದಿಷ್ಟ ದೂರದವರೆಗೆ ಎತ್ತರದ ಕಟ್ಟಡಗಳಿಗೆ ನಿರ್ಬಂಧ ಇರುವ ಕಾರಣ ಯೋಜನೆ ಕೈಬಿಡಲಾಯಿತು.
“ಬೆಂಗಳೂರು ವಿವಿ ಆವರಣದಲ್ಲಿ ನಿರ್ಮಾಣ ಮಾಡಿದರೆ ಗಲಾಟೆಗಳು ಆಗಲಿವೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಹೀಗಾಗಿ, ಈಗ ಸ್ಕೈಡೆಕ್ ಯೋಜನೆಯನ್ನು ಕೆಂಪೇಗೌಡ ಬಡಾವಣೆಯಲ್ಲಿ ಮಾಡಲು ನಿರ್ಧರಿಸಿದ್ದು ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಆದಷ್ಟು ಬೇಗ ಇದನ್ನು ಪ್ರಾರಂಭಿಸಲಾಗುವುದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ನೆಲಮಂಗಲದಿಂದ ಬಿಡದಿವರೆಗೆ ಪರ್ಯಾಯ ರಸ್ತೆ
ವಾರಾಂತ್ಯದಲ್ಲಿ ನೆಲಮಂಗಲ ಕ್ರಾಸ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಬಿಡದಿವರೆಗೂ ಪರ್ಯಾಯ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 2006ರಲ್ಲಿ ಅಧಿಸೂಚನೆ ಹೊರಡಿಸಿರುವಂತೆ ನೆಲಮಂಗಲ, ಸೊಂಡೆಕೊಪ್ಪ, ತಾವರೆಕೆರೆ, ಬಿಡದಿ ಮಾರ್ಗವಾಗಿ ಒಂದು ಪರ್ಯಾಯ ರಸ್ತೆ ನಿರ್ಮಿಸಿ ದಟ್ಟಣೆ ಕಡಿಮೆ ಮಾಡಲು ಸರ್ಕಾರ ಉದ್ದೇಶಿಸಿದೆ. "ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸೋಮಶೇಖರ್ ಅವರು ತಾವರೆಕೆರೆವರೆಗೂ ಮೆಟ್ರೋ ವಿಸ್ತರಣೆಗೆ ಮನವಿ ಮಾಡಿದ್ದು, ಡಬಲ್ ಡೆಕ್ಕರ್ ಮಾಡಲು ಆಲೋಚನೆ ಮಾಡಲಾಗುತ್ತಿದೆ. ಬನಶಂಕರಿಯಲ್ಲಿ ಸ್ಕೈವಾಕ್ ನಿರ್ಮಾಣದ ವಿಚಾರವಾಗಿ ಶೀಘ್ರ ತೀರ್ಮಾನ ಮಾಡಲಾಗುವುದು. ಜಿ.ಟಿ ದೇವೇಗೌಡ ಅವರು ಕೆ.ಆರ್ ಮಾರುಕಟ್ಟೆ ಮೇಲೇತುವೆಯನ್ನು ಮುಂದುವರಿಸಿ ಕೆಂಗೇರಿವರೆಗೂ ವಿಸ್ತರಿಸಿ ಎಂದು ಸಲಹೆ ನೀಡಿದ್ದು ಪರಿಶೀಲಿಸಲಾಗುವುದು" ಎಂದು ಸಲಹೆ ಪರಿಗಣಿಸುತ್ತೇವೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

