ಎಸ್‌ಸಿ ಪಟ್ಟಿಗೆ ಸೇರಿಸಲು ಮಡಿವಾಳ ಸಮುದಾಯ ಪಟ್ಟು; ಅಹೋರಾತ್ರಿ ಧರಣಿ ಆರಂಭ
x
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಡಿವಾಳ ಸಮುದಾಯದವರು ಎಸ್‌ಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಚಿತ್ರ: ರಘು ಆರ್‌.ಡಿ.

ಎಸ್‌ಸಿ ಪಟ್ಟಿಗೆ ಸೇರಿಸಲು ಮಡಿವಾಳ ಸಮುದಾಯ ಪಟ್ಟು; ಅಹೋರಾತ್ರಿ ಧರಣಿ ಆರಂಭ

"ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ," ಎಂದು ಮಡಿವಾಳ ಸಮಾಜದ ಪ್ರತಿಭಟನಾಕಾರರು ಎಚ್ಚರಿಸಿದರು.


ಪರಿಶಿಷ್ಟ ಜಾತಿ ಪಟ್ಟಿಗೆ ಮಡಿವಾಳ ಸಮುದಾಯವನ್ನು ಸೇರಿಸಬೇಕು ಎಂಬ ಕೂಗು ಮತ್ತೆ ಜೋರಾಗಿದೆ. ಮಡಿವಾಳ ಸಮುದಾಯ ದಶಕಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಡಿವಾಳ ಸಮುದಾಯ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದೆ.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಸಮುದಾಯದ ಜನರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮಡಿವಾಳ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಅಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಕೂಡಲೇ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಡಿವಾಳ ಸಮುದಾಯದವರು ಎಸ್‌ಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಮಡಿವಾಳ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರ: ರಘು ಆರ್‌.ಡಿ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವಮಾಚೀದೇವ ಸ್ವಾಮೀಜಿ ಮಾತನಾಡಿ, "ನಮ್ಮ ಹೋರಾಟ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಶಾಂತಿಯುತವಾಗಿ ಮನವಿ ಮಾಡುತ್ತಿದ್ದೇವೆ. ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಸಿದ್ದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ," ಎಂದು ಎಚ್ಚರಿಸಿದರು.

ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತಪ್ಪ ಮಾತನಾಡಿ, "ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಮಡಿವಾಳರನ್ನು ನಿರ್ಲಕ್ಷಿಸಿರುವ ಅವರನ್ನು ನಾವು ಅಹಿಂದ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಟ್ಟೆ ಒಗೆಯುವ ರೀತಿ ಒಗೆಯುತ್ತೇವೆ,” ಎಂದು ಹೇಳಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಡಿವಾಳ ಸಮುದಾಯದವರು ಎಸ್‌ಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ವೃತ್ತಿ ಆಧರಿತ ವಸ್ತುಗಳು ಗಮನ ಸೆಳೆದವು ಚಿತ್ರ: ರಘು ಆರ್‌.ಡಿ.

ಸಮುದಾಯದ ಹೋರಾಟದ ಹಿನ್ನೆಲೆ

ಮಡಿವಾಳ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಬಸವಣ್ಣನವರ ಸಮಕಾಲೀನರಾದ ಮಡಿವಾಳ ಮಾಚಿದೇವರು ಸಮಾನತೆಗಾಗಿ ಹೋರಾಡಿದವರು. ಕುಲಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ಮಡಿವಾಳರ ಆಚರಣೆಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳು ಪರಿಶಿಷ್ಟ ಜಾತಿಯ ಲಕ್ಷಣಗಳನ್ನೇ ಹೊಂದಿವೆ. ಹಾಗಾಗಿ, ಎಸ್‌ಸಿ ಪಟ್ಟಿಗೆ ಸೇರಿಸಬೇಕು ಎಂಬುದು ಸಮುದಾಯದ ವಾದವಾಗಿದೆ.
ಆಂಧ್ರಪ್ರದೇಶ ಸೇರಿದಂತೆ 18ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಎಸ್‌ಸಿ ಪಟ್ಟಿಗೆ ಸೇರಿಸಲಾಗಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕಳೆದ ಹಲವು ಚುನಾವಣೆಗಳಲ್ಲಿ ಭರವಸೆ ನೀಡಿದ್ದರೂ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸ್ವೀಕರಿಸಿಲ್ಲ, ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತಪ್ಪ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಡಿವಾಳ ಸಮುದಾಯದವರು ಎಸ್‌ಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಮಡಿವಾಳ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಲಾಯಿತು ಚಿತ್ರ: ರಘು ಆರ್‌.ಡಿ.

ಭರವಸೆ ನೀಡಿದ ಬೊಮ್ಮಾಯಿ ಸರ್ಕಾರ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಸಂಬಂಧ ಡಾ.ಅನ್ನಪೂರ್ಣಮ್ಮ ನೇತೃತ್ವದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು.
ಸಂವಿಧಾನದ ಚೌಕಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಆಶ್ವಾಸನೆ ನೀಡಿದ್ದರು. ಹತ್ತು ವರ್ಷ ಕಳೆದರೂ ಈವರೆಗೆ ಅಧಿಕಾರ ನಡೆಸಿದ ಯಾವ ಸರ್ಕಾರವೂ ಕುಲಶಾಸ್ತ್ರೀಯ ವರದಿಯ ಪುಟ ತಿರುಗಿಸಿ ನೋಡಿಲ್ಲ ಎಂದು ಮಡಿವಾಳ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

Read More
Next Story