
Internal Reservation| ಒಳಮೀಸಲಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಾಳೆ; ಸರ್ಕಾರಕ್ಕೆ ತಟ್ಟಲಿದೆ ಬಿಸಿ
ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತ ತನ್ನ ನಿರ್ಧಾರ ಪ್ರಕಟಿಸದೇ ಹೋದರೆ ನಾಳೆಯಿಂದಲೇ(ಮಾ.12) ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ಮಾದಿಗ ಸಮುದಾಯ ನಿರ್ಧರಿಸಿದೆ.
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ನಾಳೆ(ಮಾ.12) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದೆ.
ರಾಜ್ಯ ಸರ್ಕಾರ ಯಾವುದೇ ಸಬೂಬು ಹೇಳದೇ ಒಳ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ನಡೆಸಲಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾದಿಗ ಸಮುದಾಯವರು ಭಾಗವಹಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯಿಸಬೇಕು. ಇಲ್ಲವೇ ನೇಮಕಾತಿಯನ್ನೇ ನಡೆಸಕೂಡದು ಎಂದು ಸಮುದಾಯಗಳು ಪಟ್ಟು ಹಿಡಿದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ, ರಾಜ್ಯ ಸರ್ಕಾರ ಮಾ.27 ರಂದು ಒಳ ಮೀಸಲಾತಿ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ವಿಶೇಷ ಸಚಿವ ಸಂಪುಟ ಸಭೆ ಕರೆದರೂ ಪ್ರತಿಭಟನೆಯಿಂದ ಹಿಂದೆ ಸರಿಯಲು ಎಡಗೈ ಸಮುದಾಯ ಒಪ್ಪಿಲ್ಲ.
ಅನಿರ್ದಿಷ್ಟಾವಧಿ ಮುಷ್ಕರ
ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತ ತನ್ನ ನಿರ್ಧಾರ ಪ್ರಕಟಿಸದೇ ಹೋದರೆ ನಾಳೆಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ವೋಟ್ ಬ್ಯಾಂಕಿಗಾಗಿ ಸುಪ್ರೀಂಕೋರ್ಟ್ ಆದೇಶ, ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಕಾಂಗ್ರೆಸ್ ಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದಲೇ ನಾವೂ ಕೂಡ ವೋಟ್ ಬ್ಯಾಂಕ್ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಸ್ವಾಭಿಮಾನಿ ಮಾದಿ ಸಮುದಾಯಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದ್ದಾರೆ.
150 ಕ್ಷೇತ್ರಗಳಲ್ಲಿ ಸೋಲಿಸುತ್ತೇವೆ
ಸುಮಾರು 150 ಕ್ಷೇತ್ರಗಳಲ್ಲಿ ಮಾದಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತಿದೆ. ನಾವು 150 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು, ಪ್ರಚಾರ ಮಾಡುತ್ತೇವೆ. ಒಳ ಮೀಸಲಾತಿ ಪರ ನಿಲ್ಲದ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ಮೀಸಲಾತಿ ನೀಡದಿದ್ದರೆ ಸಮುದಾಯದ ಸಚಿವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದು ಬೇಡ. ಸರ್ಕಾರವನ್ನೇ ಬೇಕಾದರೆ ವಾಪಸ್ ಕಳಿಸುವಂತಹ ಕೆಲಸ ಮಾಡುತ್ತೇವೆ. ಸಚಿವರು ಸದನದೊಳಗೆ ಮಾತನಾಡಿದರೆ ಸಾಕು, ನಾವು ಹೊರಗೆ ಹೋರಾಟ ತೀವುಗೊಳಿಸುತ್ತೇವೆ. ಸರ್ಕಾರ ಪ್ರತಿಭಟನೆಗೆ ಬಗ್ಗಲಿಲ್ಲ ಎಂದರೆ 150 ಕ್ಷೇತ್ರಗಳಲ್ಲಿ ಮತ ಜಾಗೃತಿ ಅಭಿಯಾನ ಮಾಡಿ, ಮುಂದಿನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ವಾಹನಗಳಿಗೆ ಪರ್ಯಾಯ ಮಾರ್ಗ
ಒಳ ಮೀಸಲಾತಿ ಹೋರಾಟ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನವನದ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಲಿದ್ದು, ನಗರ ಪೊಲೀಸರು ವಾಹನ ಸವಾರರಿಗಾಗಿ ಪರ್ಯಾಯ ಮಾರ್ಗ ಸೂಚಿಸಿದ್ದಾರೆ.
ಶೇಷಾದ್ರಿ ರಸ್ತೆಯ ಮೂಲಕ ಜನರು ಮತ್ತು ವಾಹನಗಳು ಪ್ರತಿಭಟನೆಗೆ ಆಗಮಿಸುವ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಶಾಂತಲಾ ಜಂಕ್ಷನ್ ಮತ್ತು ಖೋಡೆ ಸರ್ಕಲ್‌ನಿಂದ ಆನಂದ ರಾವ್ ಫ್ಲೈಓವರ್, ಓಲ್ಡ್ ಜೆ.ಡಿ.ಎಸ್. ಕಚೇರಿ ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್‌ವರೆಗೆ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.
ಲುಲು ಮಾಲ್, ಕೆಎಫ್ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈಓವರ್, ರೇಸ್ ಕೋರ್ಸ್ ರಸ್ತೆಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ ಬರುವವರು ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆ.ಎಫ್.ಎಂ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈಓವರ್ ರಸ್ತೆ ಮೂಲಕ ಸಂಚರಿಸಬೇಕು.
ಚಾಲುಕ್ಯ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ ಬರುವವರು ಚಾಲುಕ್ಯ ಸರ್ಕಲ್, ಎಲ್ಆರ್ಡಿ, ರಾಜಭವನ ರಸ್ತೆ, ಇನ್ ಪೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ನಿಂದ ತೆರಳಬೇಕು. ಕಾಳಿದಾಸ ರಸ್ತೆ ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಹೋಗುವವರು ಕನಕದಾಸ ಜಂಕ್ಷನ್ ಬಲ ತಿರುವು, ಸಾಗರ ಜಂಕ್ಷನ್ ಕಡೆಗೆ ಹೋಗಬೇಕು. ಮೌರ್ಯ/ಸುಬ್ಬಣ್ಣ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ಕಡೆಗೆ ಹೋಗುವವರು ಸುಬ್ಬಣ್ಣ ಜಂಕ್ಷನ್ ನಿಂದ ಬಲ ತಿರುವು ಪಡೆದು ಆನಂದ್ ರಾವ್ ಸರ್ಕಲ್ ಕಡೆಗೆ ತೆರಳಬೇಕು ಎಂದು ಉಪ್ಪಾರಪೇಟೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

